ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ

ಬಿಎಂಟಿಸಿಯಲ್ಲಿ ಟಿಕೆಟ್ ದರದ ಅವ್ಯವಹಾರ ತಡೆಯಲು 11 ಸಾವಿರ ಹೈಟೆಕ್ ಇಟಿಎಂ ಯಂತ್ರಗಳನ್ನು ಪರಿಚಯಿಸಲಾಗುತ್ತಿದೆ. ಮುಂಬೈ ಮೂಲದ ಕಂಪನಿ ಅಭಿವೃದ್ಧಿಪಡಿಸಿರುವ ಈ ಯಂತ್ರಗಳು ಡಿಜಿಟಲ್ ಪಾವತಿಗೆ ಪೂರಕವಾಗಿದ್ದು, ಮೆಟ್ರೋ ಹಾಗೂ ಬಸ್ ಸಂಚಾರಕ್ಕೆ ಒಂದೇ ಕಾರ್ಡ್ ಬಳಸುವ ಸೌಲಭ್ಯವನ್ನೂ ಒದಗಿಸಲಿವೆ. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ
ಬಿಎಂಟಿಸಿ ಬಸ್‌
Image Credit source: tv9
Edited By:

Updated on: Apr 29, 2026 | 6:47 AM

ಬೆಂಗಳೂರು, ಏಪ್ರಿಲ್ 29: ಬಿಎಂಟಿಸಿ ಬಸ್‌ಗಳಲ್ಲಿ (BMTC Bus) ಪ್ರಯಾಣಿಸುವಾಗ ಚಿಲ್ಲರೆ ಸಮಸ್ಯೆ ಅಥವಾ ಟಿಕೆಟ್ ಪಡೆಯುವ ವಿಚಾರದಲ್ಲಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ನಡೆಯುತ್ತಿದ್ದ ಜಗಳಕ್ಕೆ ಶೀಘ್ರವೇ ಮುಕ್ತಿ ಸಿಗಲಿದೆ. ಈ ಹಿಂದೆ ಕೆಲವು ಕಂಡಕ್ಟರ್‌ಗಳು ಆನ್‌ಲೈನ್ ಪಾವತಿಯ (Online Payment) ಹಣವನ್ನು ಸಂಸ್ಥೆಯ ಬದಲಿಗೆ ತಮ್ಮ ವೈಯಕ್ತಿಕ ಖಾತೆಗಳಿಗೆ ಹಾಕಿಸಿಕೊಳ್ಳುತ್ತಿದ್ದ ಅಕ್ರಮಕ್ಕೆ ಬ್ರೇಕ್ ಹಾಕಲು ಬಿಎಂಟಿಸಿ ಈಗ ಹೈಟೆಕ್ ಇಟಿಎಂ ಮಷಿನ್‌ಗಳ ಮೊರೆ ಹೋಗಿದೆ.

ಏನಿದು ಹೊಸ ವ್ಯವಸ್ಥೆ?

ಬಿಎಂಟಿಸಿ ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಮೂಲದ ಚಲೋ (Chalo) ಕಂಪನಿಗೆ 11 ಸಾವಿರ ಇಟಿಎಂ ಯಂತ್ರಗಳ ಪೂರೈಕೆಗಾಗಿ ಟೆಂಡರ್ ನೀಡಿದೆ. ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಈ ಯಂತ್ರಗಳನ್ನು ಪಡೆಯಲಾಗುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 8 ಡಿಪೋಗಳಿಗೆ ಇವುಗಳನ್ನು ವಿತರಿಸಲಾಗಿದೆ. ಮುಂದಿನ ತಿಂಗಳಿನಿಂದ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲೂ ಈ ಸುಧಾರಿತ ಯಂತ್ರಗಳು ಲಭ್ಯವಿರಲಿವೆ.

ಒಂದೇ ಕಾರ್ಡ್, ಎರಡು ಲಾಭ!

ಈ ಹೊಸ ಮಷಿನ್‌ಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಲು ಅವಕಾಶವಿದೆ. ಇದರಿಂದ ಪ್ರಯಾಣಿಕರು ಬಿಎಂಟಿಸಿ ಬಸ್ ಮಾತ್ರವಲ್ಲದೆ, ನಮ್ಮ ಮೆಟ್ರೋ ರೈಲುಗಳಲ್ಲೂ ಇದೇ ಸ್ಮಾರ್ಟ್ ಕಾರ್ಡ್ ಬಳಸಿ ಸಂಚಾರ ಮಾಡಬಹುದು.

ಡಿಜಿಟಲ್ ಪಾವತಿಗೆ ಆದ್ಯತೆ

ಈ ಯಂತ್ರಗಳಲ್ಲಿ ‘ಡೈನಾಮಿಕ್ ಕ್ಯೂ ಆರ್ ಕೋಡ್’ (Dynamic QR Code) ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ, ಪೇಟಿಯಂ ಮಾತ್ರವಲ್ಲದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕವೂ ಹಣ ಪಾವತಿಸಬಹುದು. ಇದರಿಂದಾಗಿ ಕಂಡಕ್ಟರ್ ಆಗಲಿ ಅಥವಾ ಪ್ರಯಾಣಿಕರಾಗಲಿ ನಿಗಮಕ್ಕೆ ವಂಚನೆ ಮಾಡಲು ಸಾಧ್ಯವಿಲ್ಲ. ನಿಖರವಾದ ಟಿಕೆಟ್ ದರದ ಮಾಹಿತಿ ಈ ಯಂತ್ರಗಳಲ್ಲಿ ಅಪ್‌ಲೋಡ್ ಆಗಿರುವುದರಿಂದ ಪಾರದರ್ಶಕತೆ ಹೆಚ್ಚಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us