ಬೆಂಗಳೂರು, ಜನವರಿ 06: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ (Visvesvaraya Museum) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb threat) ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ (Cubbon Park Police Station) ಇ-ಮೇಲೆ ಬೆದರಿಕೆ ಸಂದೇಶ ಕಳಿಸಿದ್ದ ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ (ಜ.06) ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತವೆ ಎಂದು‘Morgue999lol’ ಎಂಬ ಐಡಿ ಮೂಲಕ ಮೇಲ್ ಮಾಡಿ, ಜೊತೆಗೆ ಉಗ್ರ ಸಂಘಟೆನಯೊಂದರ (Terrorizers 111) ಹೆಸರನ್ನು ದುಷ್ಕರ್ಮಿಗಳು ಉಲ್ಲೇಖಿಸಿ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ವಿದೇಶಿ ಕೋರ್ಟ್ ಮೊರೆ ಹೋದ ನಗರ ಪೊಲೀಸರು
ಮ್ಯೂಸಿಯಂ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದಲೂ ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ಬಳಿಕ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಪತ್ತೆಯಾಗಿತ್ತು. ಇದೀಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಬೆಂಗಳೂರಿನ 60 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಈ ಪ್ರಕರಣ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿಗಳು ಬಳಸಲಾದ ಇ-ಮೇಲ್ ಐಡಿ ನಕಲು ಎಂಬುದು ಪತ್ತೆಯಾಗಿತ್ತು. ಕೃತ್ಯ ಎಸಗಲೆಂದೆ ಆರೋಪಿಗಳು ನಕಲಿ ಐಡಿ ಸೃಷ್ಟಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ