ಬೆಂಗಳೂರು: ಪತಿಯೇ ಪತ್ನಿಯನ್ನ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ನಂಜಪ್ಪ ಸರ್ಕಲ್ ಬಳಿಯ ಮನೆಯೊಂದರಲ್ಲಿ ನಡೆದಿದೆ. 34 ವರ್ಷದ ಕೌಸರ್ ಮುಬೀನ್ ಕೊಲೆಯಾಗಿರುವ ಮಹಿಳೆ. ಪ್ರತ್ಯೇಕವಾಗಿ ವಾಸವಿದ್ದ ಪತ್ನಿ ಕೌಸರ್ ಮುಬೀನ್ ಹಾಗೂ ಪತಿ, ಇಂದು(ಫೆ.13) ಕೌಸರ್ ಮನೆ ಬಾಗಿಲು ಬಳಿ ಬಂದು ಪತಿ ಜಗಳವಾಡಿದ್ದಾನೆ. ಈ ವೇಳೆ ಮನೆ ಬಾಗಿಲಲ್ಲೇ ಹೆಂಡತಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿಯಾಗಿದ್ದಾನೆ. ಪತ್ನಿ ಕೌಸರ್ ಮುಬೀನ್ ಮನೆ ಹೊಸ್ತಿಲಲ್ಲೇ ಒದ್ದಾಡಿ ಪ್ರಾಣಬಿಟ್ಟಿದ್ದಾರೆ. ಇನ್ನು ಇವರ ಜಗಳಕಂಡು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು, ಶ್ವಾನದಳ, FSL ತಂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ, ಕಾರಿನಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವು
ದಕ್ಷಿಣ ಕನ್ನಡ: ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ 14 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಬ್ರಾಂತಿಕಟ್ಟೆ ಎಂಬಲ್ಲಿ ನಡೆದಿದೆ. ಸುಬ್ರಹ್ಮಣ್ಯ ಧರ್ಮಸ್ಥಳ ನಡುವೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್, ಮರ್ಧಾಳ ಗ್ರಾಮದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು, ಮತ್ತೊಂದು ಕಾರು ಓವರ್ಟೇಕ್ ಮಾಡುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಕಾರಿನಲ್ಲಿದ್ದ ಇನ್ನುಳಿದ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಣಿ ಅಪಘಾತದಲ್ಲಿ ಕಾರು ಚಾಲಕನ ದುರ್ಮರಣ
ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೈಕೇರಿ ಗ್ರಾಮದ ಬಳಿ ಲಾರಿ, 2 ಕಾರು, ಕ್ಯಾಂಟರ್ ನಡುವೆ ಭೀಕರ ಸರಣಿ ಅಪಘಾತವಾಗಿದೆ. ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ ಬಿಟ್ಟಂಗಾಲ ನಿವಾಸಿ ಸದನ್ ಚಂಗಪ್ಪ(49) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Mon, 13 February 23