
ಬೆಂಗಳೂರು: ‘ಬುಲ್ಲಿ ಬಾಯ್’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬೆಂಗಳೂರಿನ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಆತನನ್ನು ಮುಂಬೈಗೆ ಕರೆದುಕೊಂಡು ಹೋಗಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬುಲ್ಲಿ ಬಾಯ್ ಆ್ಯಪ್ ಫಾಲೋ ಮಾಡುತ್ತಿದ್ದ ಐವರಲ್ಲಿ ಆ ಯುವಕ ಕೂಡ ಒಬ್ಬನಾಗಿದ್ದ. ಬಂಧಿತ ಯುವಕನ ವಯಸ್ಸನ್ನು ಹೊರತುಪಡಿಸಿ ಮುಂಬೈ ಪೊಲೀಸರು ಬೇರೇನೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆ ಯುವಕ ಬೆಂಗಳೂರಿನ ಯಾವ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಎಂಬ ಬಗ್ಗೆಯೂ ಮಾಹಿತಿ ಬಹಿರಂಗವಾಗಿಲ್ಲ.
ಪೊಲೀಸರು ಬಂಧಿತ ವಿದ್ಯಾರ್ಥಿಯ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ‘ಬುಲ್ಲಿ ಬಾಯ್’ ಅಪ್ಲಿಕೇಶನ್‌ನಲ್ಲಿ ಮಹಿಳಾ ವೈದ್ಯರ ಫೋಟೋಗಳನ್ನು ಅಪ್‌ಲೋಡ್ ಮಾಡಿ ಹರಾಜು ಹಾಕಲಾಗಿದೆ ಎಂಬ ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು. ಭಾನುವಾರ ಪಶ್ಚಿಮ ಮುಂಬೈ ಸೈಬರ್ ಪೊಲೀಸ್ ಠಾಣೆ ಪೊಲೀಸರು ‘ಬುಲ್ಲಿ ಬಾಯ್’ ಅಪ್ಲಿಕೇಶನ್ ಡೆವಲಪರ್‌ಗಳು ಮತ್ತು ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ ಟ್ವಿಟರ್ ಹ್ಯಾಂಡಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮೂಲಗಳ ಪ್ರಕಾರ, ಇದೀಗ ಬಂಧಿತನಾಗಿರುವ ಆರೋಪಿ ಬೆಂಗಳೂರಿನ 2ನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆತನನ್ನು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ಯಲಾಗಿದೆ. ಆ ಯುವಕ ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಬುಲ್ಲಿ ಆ್ಯಪ್ನ ಕಂಟೆಂಟ್, ಫೋಟೋಗಳನ್ನು ಶೇರ್ ಮಾಡುತ್ತಿದ್ದ. ಆತನ ಟ್ವಿಟ್ಟರ್ ಖಾತೆಯ ಐಪಿ ಅಡ್ರೆಸ್ ಮೂಲಕ ಆ ಯುವಕನನ್ನು ಪತ್ತೆಹಚ್ಚಿ, ವಶಕ್ಕೆ ಪಡೆಯಲಾಗಿದೆ.
ಏನಿದು ಬುಲ್ಲಿ ಬಾಯ್ ಆ್ಯಪ್?:
ಬುಲ್ಲಿ ಬಾಯ್ ಮೊಬೈಲ್ ಆ್ಯಪ್ನಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಟೀಕೆಗಳನ್ನು ಮಾಡಲಾಗುತ್ತಿದೆ. ಹಾಗೇ, ಮುಸ್ಲಿಂ ವೈದ್ಯರ, ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಆ್ಯಪ್ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಹಾಗೂ ರಾಜಕೀಯ ವಲಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
‘ಬುಲ್ಲಿ ಬಾಯಿ’ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು “ಹರಾಜಿಗೆ” ಪಟ್ಟಿ ಮಾಡಲಾಗಿದೆ ಮತ್ತು ಅನುಮತಿಯಿಲ್ಲದೆ ಅವರ ಫೋಟೋಗಳನ್ನು ಹಾಕಲಾಗಿದೆ. ಜುಲೈನಲ್ಲಿ “ಸುಲ್ಲಿ ಡೀಲ್ಸ್” ಎಂಬ ಅಪ್ಲಿಕೇಶನ್ ನೂರಾರು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು “ಆನ್‌ಲೈನ್ ಹರಾಜಿಗಾಗಿ” ಪೋಸ್ಟ್ ಮಾಡಿತ್ತು. “ಸುಲ್ಲಿ” ಎಂಬುದು ಮುಸ್ಲಿಂ ಮಹಿಳೆಯರನ್ನು ಉಲ್ಲೇಖಿಸಲು ಬಳಸುವ ಅವಹೇಳನಕಾರಿ ಪದವಾಗಿದೆ. ಇದೀಗ ಬುಲ್ಲಿ ಬಾಯ್ ಹೆಸರಿನ ಆ್ಯಪ್ನಲ್ಲಿ ಅದೇ ರೀತಿ ಮಾಡಲಾಗಿದೆ.
ಆ್ಯಪ್ ಮೂಲಕ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ರಾಜಕೀಯ ಮುಖಂಡರು ಕೂಡ ಖಂಡಿಸಿದ್ದಾರೆ. ಈ ವೇಳೆ ಬುಲ್ಲಿ ಬಾಯಿ ಎಂಬ ಹ್ಯಾಷ್ ಟ್ಯಾಗ್ ಕೂಡ ಬಳಕೆಯಾಗುತ್ತಿದೆ. ಅವಹೇಳನಕಾರಿ ಟೀಕೆಗಳೊಂದಿಗೆ ಚಿತ್ರಗಳನ್ನು ಹಂಚಿಕೊಂಡವರ ಹೆಸರಿನೊಂದಿಗೆ ಅದನ್ನು ಸೇರಿಸಲಾಗುತ್ತಿದೆ. ಸುಲ್ಲಿ ಡೀಲ್ ಮತ್ತು ಬುಲ್ಲಿ ಬಾಯಿ ಅಪ್ಲಿಕೇಶನ್ ಎರಡನ್ನೂ ಗಿಟ್‌ಹಬ್‌ನಲ್ಲಿ ನಿರ್ಮಿಸಲಾಗಿದೆ ಎಂಬ ಅಂಶವೂ ಮುನ್ನೆಲೆಗೆ ಬಂದಿದೆ. ಈಗ GitHub ಮತ್ತು ಅದರ ಮೇಲೆ ನಿರ್ಮಿಸಲಾದ ಅಂತಹ ಅಪ್ಲಿಕೇಶನ್‌ಗಳ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದಾಗಿನಿಂದ ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ.
ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ ಸೇರಿ ಅತ್ತೆ-ಮಾವನನ್ನೇ ಕೊಂದು, ಸುಟ್ಟು ಹಾಕಿದ ಸೊಸೆ
Bengaluru Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಸಂಜೆ 5ರವರೆಗೆ ಪವರ್ ಕಟ್