
ಬೆಂಗಳೂರು, (ಸೆಪ್ಟೆಂಬರ್ 23): ಛಲವಾದಿ ನಾರಾಯಣಸ್ವಾಮಿಯವರನ್ನು ( Chaluvadi narayana swamy) ಜೀವಂತ ಸುಟ್ಟು ಹಾಕುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ಸಂಬಂಧ ಸಿದ್ದಣ್ಣ ತೇಜಿ ಮತ್ತು ಶಿವರಾಜ್ ಮುತ್ತಣ್ಣವರ್ ಎಂಬವರ ವಿರುದ್ಧ ದೂರು ದಾಖಲಾಗಿದೆ. ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪರವಾಗಿ ಮಾಜಿ ಶಾಸಕ ವೈ.ಸಂಪಂಗಿ ಮತ್ತು ರಾಜ್ಯ ಬಿಜೆಪಿ ಕಾನೂನು ವಿಭಾಗದ ಸಂಚಾಲಕ ವಸಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ (Bengaluru Police commissioner )ದೂರು ಸಲ್ಲಿಕೆ ಮಾಡಲಾಗಿದೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಕಾನೂನು ವಿಭಾಗದ ಸಂಚಾಲಕ ವಸಂತಕುಮಾರ್, ತಮ್ಮ ವಿರುದ್ಧ ಮಾತನಾಡದಂತೆ ಸರ್ಕಾರ ಕೆಟ್ಟದಾಗಿ ನಡೆದುಕೊಳ್ಳುತ್ತಿದೆ. ಜೀವಂತ ಸುಟ್ಟು ಹಾಕುವುದಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಲಾಗಿದೆ. ಅಲ್ಲದೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲೇ ಸರ್ಕಾರಿ ಕಚೇರಿ, ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವ ಹೇಳಿಕೆ ಹಿನ್ನೆಲೆ ದೂರು ನೀಡಲಾಗಿದೆ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಸ್ಪಷ್ಟವಾಗಿದೆ. ಅವರು ಯಾವುದೇ ಜಾತಿ ನಿಂದನೆ ಮಾಡಿಲ್ಲ. ವಿಪಕ್ಷ ನಾಯಕರ ಮೇಲೆ ಅನುಮತಿ ಪಡೆಯದೇ ಎಫ್ಐಆರ್ ಮಾಡಲಾಗಿದೆ. ಸಭಾಪತಿ, ರಾಜ್ಯಪಾಲರ ಅನುಮತಿ ಪಡೆಯದೇ ಎಫ್ಐಆರ್ ದಾಖಲಿಸಿದ್ದಾರೆ. ವಿಧಾನಸೌಧ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧ ತುಂಬಾ ಎಫ್ಐಆರ್ ದಾಖಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Published On - 8:25 pm, Tue, 23 September 25