ಗಣೇಶನ ಹಬ್ಬಕ್ಕೆಂದು ಊರಿಗೆ ಹೊರಟವರಿಗೆ ಟಿಕೆಟ್​ಗಳ ಬೆಲೆ ಏರಿಕೆ ಶಾಕ್: ಖಾಸಗಿ ಬಸ್​ಗಳಲ್ಲಿ ಟಿಕೆಟ್​ ದರ ಮೂರು ಪಟ್ಟು ಹೆಚ್ಚಳ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 28, 2022 | 11:54 AM

ಗಾಯದ ಮೇಲೆ ಬರೆ ಎಳೆದಂತೆ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಒದಗಿಸುತ್ತಿದ್ದ ಕೆಎಸ್​ಆರ್​ಟಿಸಿ (KSRTC) ಈ ಬಾರಿ ವಿಶೇಷ ಬಸ್​ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ.

ಗಣೇಶನ ಹಬ್ಬಕ್ಕೆಂದು ಊರಿಗೆ ಹೊರಟವರಿಗೆ ಟಿಕೆಟ್​ಗಳ ಬೆಲೆ ಏರಿಕೆ ಶಾಕ್: ಖಾಸಗಿ ಬಸ್​ಗಳಲ್ಲಿ ಟಿಕೆಟ್​ ದರ ಮೂರು ಪಟ್ಟು ಹೆಚ್ಚಳ
ಊರುಗಳಿಗೆ ತೆರಳಲು ಬಸ್ ಹತ್ತುತ್ತಿರುವ ಜನ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಕರ್ನಾಟಕದಲ್ಲಿ ಜನರು ಗೌರಿ-ಗಣೇಶ ಹಬ್ಬದ (Gowri Ganesha Festival) ಸಿದ್ಧತೆ ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣದಿಂದ ಕಳಾಹೀನವಾಗಿದ್ದ ಭಾರತದ ಪ್ರಮುಖಕ್ಕೆ ಈ ಬಾರಿ ಸಂಭ್ರಮದ ಸಿದ್ಧತೆ ಆರಂಭವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಈಗಾಗಲೇ ಹಬ್ಬದ ಮಾರ್ಗಸೂಚಿಗಳು ಪ್ರಕಟವಾಗಿದ್ದು, ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಚಂದಾ ವಸೂಲಿಯೂ ಶುರುವಾಗಿದೆ. ಬೀದಿಬದಿಗಳಲ್ಲಿ ಗಣಪತಿ ಮೂರ್ತಿಗಳು ರಾರಾಜಿಸುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ಮನೆಮನೆಗಳಲ್ಲಿ ಗೆಜ್ಜೆವಸ್ತ್ರ ಸಿದ್ಧಪಡಿಸುವುದು, ಮನೆ ಸ್ವಚ್ಛಗೊಳಿಸುವುದು ಸೇರಿದಂತೆ ಹಲವು ರೀತಿಯ ಸಿದ್ಧತೆಗಳು ಆರಂಭವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಸಾಕಷ್ಟು ಜನರು ಬೆಂಗಳೂರಿನಲ್ಲಿದ್ದು, ಹಬ್ಬಕ್ಕಾಗಿ ತವರೂರುಗಳಿಗೆ ಹಿಂದಿರುಗುವವರಿಗೆ ಏಕಾಏಕಿ ಹೆಚ್ಚಾಗಿರುವ ಬಸ್ ಟಿಕೆಟ್ ದರವು ಆಘಾತ ತಂದೊಡ್ಡಿದೆ. ಗಾಯದ ಮೇಲೆ ಬರೆ ಎಳೆದಂತೆ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಒದಗಿಸುತ್ತಿದ್ದ ಕೆಎಸ್​ಆರ್​ಟಿಸಿ (KSRTC) ಈ ಬಾರಿ ವಿಶೇಷ ಬಸ್​ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಪ್ರತಿದಿನ ಸಂಚರಿಸುತ್ತಿದ್ದ ಸಾಮಾನ್ಯ ಬಸ್​ಗಳೂ ಕೆಎಸ್​ಆರ್​ಟಿಸಿ ಬುಕಿಂಗ್ ವೆಬ್​ಸೈಟ್​ನಿಂದ ನಾಪತ್ತೆಯಾಗಿವೆ.

ಖಾಸಗಿ ಬಸ್​ಗಳ ಟಿಕೆಟ್ ದರ ಹೆಚ್ಚಳ

ಎರಡು ವರ್ಷಗಳ ಅಂತರದ ನಂತರ ಈ ಬಾರಿ ಗಣೇಶನ ಹಬ್ಬಕ್ಕೆ ರಾಜ್ಯದಲ್ಲಿ ಸಂಭ್ರಮ ಗರಿಗೆದರಿದೆ. ಜನ ಸಂಚಾರ ಹೆಚ್ಚಾಗಬಹುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಮೊನ್ನೆಯಿಂದಲೇ (ಆಗಸ್ಟ್ 26) ಖಾಸಗಿ ಬಸ್​ಗಳ ಟಿಕೆಟ್ ದರ ಹೆಚ್ಚಾಗಿದೆ. ಹಬ್ಬ ಇರುವುದು ಬುಧವಾರಕ್ಕೆ (ಆಗಸ್ಟ್ 31). ಊರುಗಳಿಗೆ ಹಿಂದಿರುಗಲೆಂದು ಟಿಕೆಟ್​ ಬುಕ್ ಮಾಡಲು ಬಂದವರು ಏಕಾಏಕಿ ದರ ಏರಿಕೆ ಕಂಡು ಹೌಹಾರಿದ್ದಾರೆ. ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಶುಕ್ರವಾರ ರಾತ್ರಿಯಿಂದಲೇ ಊರುಗಳಿಗೆ ತೆರಳಲು ಆರಂಭಿಸಿದ್ದಾರೆ. ಹೀಗೆ ಊರುಗಳಿಗೆ ಹೊರಟವರು ಬುಧವಾರದ ಹಬ್ಬ ಮುಗಿಸಿಕೊಂಡೇ ಬೆಂಗಳೂರಿನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ. ಖಾಸಗಿ ಬಸ್​ಗಳಲ್ಲಿ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಲಾಗಿದೆ. ಹುಬ್ಬಳ್ಳಿ ಮಾರ್ಗದ ಬಸ್​ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬುಧವಾರ ಮತ್ತು ಗುರುವಾರಗಳಂದು ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಬರುವ ಬಸ್​ಗಳ ದರವನ್ನು ಹೆಚ್ಚಿಸಲಾಗಿದೆ.

ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ? (ಆವರಣದಲ್ಲಿ ಸಾಮಾನ್ಯ ದಿನದ ದರ ನೀಡಲಾಗಿದೆ)
ಬೆಂಗಳೂರು-ಹುಬ್ಬಳ್ಳಿ ₹ 1,300ರಿಂದ ₹ 2,000 (₹ 500ರಿಂದ ₹ 750), ಬೆಂಗಳೂರು-ಶಿವಮೊಗ್ಗ ₹ 900ರಿಂದ ₹1,400 (₹ 400ರಿಂದ ₹ 700), ಬೆಂಗಳೂರು-ಮಂಗಳೂರು ₹ 1,100ರಿಂದ ₹ 1,600 (₹ 650ರಿಂದ ₹ 850), ಬೆಂಗಳೂರು-ಬೆಳಗಾವಿ ₹ 1,500ರಿಂದ ₹ 2,000 (₹ 750ರಿಂದ ₹ 850).

ಕೆಎಸ್​ಆರ್​ಟಿಸಿ ಬಸ್​ಗಳ ಸಂಖ್ಯೆ ಕಡಿಮೆ

ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕೆಎಸ್​ಆರ್​ಟಿಸಿ ಸುಮಾರು 1,500 ವಿಶೇಷ ಬಸ್​ಗಳನ್ನು ಪ್ರಮುಖ ಮಾರ್ಗಗಳಿಗೆ ನಿಯೋಜಿಸುತ್ತಿತ್ತು. ಆದರೆ ಈ ಬಾರಿ ಕೇವಲ 500 ಬಸ್​ಗಳನ್ನು ನಿಗದಿಪಡಿಸಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ಉತ್ತರ ಕರ್ನಾಟಕದ ಬಹುತೇಕ ಮಾರ್ಗಗಳಿಗೆ ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್​ ಬುಕ್ ಮಾಡಲು ಯತ್ನಿಸಿದರೆ ನಿರಾಸೆ ಅನುಭವಿಸಬೇಕಾಗುತ್ತದೆ. ವಿಶೇಷ ಬಸ್​ಗಳಲ್ಲಿ ಸಾಮಾನ್ಯ ಬಸ್​ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ರಾಜಹಂಸ, ನಾನ್ ಎಸಿ ಸ್ಲೀಪರ್ ಮತ್ತು ಎಸಿ ಸ್ಲೀಪರ್ ಬಸ್​ಗಳನ್ನು ನಿಯೋಜಿಸಿದ್ದು, ದರವನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ. ‘ಆಗಸ್ಟ್ 31ರಂದು ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬಸ್​ಗಳು ತೆರಳುತ್ತವೆ’ ಎಂದು ಕೆಎಸ್​ಆರ್​ಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಖಾಸಗಿ ಬಸ್​ಗಳ ಮೇಲೆ ಆರ್​ಟಿಒ ಅಧಿಕಾರಿಗಳ ದಾಳಿ

ಹಬ್ಬದ ಸೀಸನ್ ಎನ್ನುವ ನೆಪವೊಡ್ಡಿ ಟಿಕೆಟ್ ದರವನ್ನು ಏಕಾಏಕಿ ಹೆಚ್ಚಿಸಿದ್ದ ಖಾಸಗಿ ಬಸ್​ಗಳ ಮೇಲೆ ಆರ್​ಟಿಒ ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು. ಬೆಂಗಳೂರಿನ ಆನಂದರಾವ್ ಸರ್ಕಲ್, ಕಲಾಸಿಪಾಳ್ಯ ಸೇರಿದಂತೆ ವಿವಿಧೆಡೆ ಬಸ್​ಗಳನ್ನು ಪ್ರವೇಶಿಸಿ ಪ್ರಯಾಣಿಕರಿಂದ ಟಿಕೆಟ್​ಗೆ ಕೊಟ್ಟಿರುವ ಹಣದ ಮಾಹಿತಿ ಪಡೆದರು. ಕೆಲವೆಡೆ ಹೆಚ್ಚುವರಿ ಹಣವನ್ನು ವಾಪಸ್ ಕೊಡಿಸಿದರು. ಆದರೆ ಇದೊಂದು ಕಣ್ಣೊರೆಸುವ ಕಾರ್ಯಾಚರಣೆ. ಪ್ರತಿವರ್ಷವೂ ಅವರು ರೇಟ್ ಜಾಸ್ತಿ ಮಾಡುವುದು ಇವರು ದಾಳಿ ಮಾಡುವುದು ನಡೆಯುತ್ತಲೇ ಇರುತ್ತದೆ ಎಂದು ಜನರು ಆಕ್ಷೇಪ ವ್ಯಕ್ತಪಡಿಸಿದರು.

Published On - 11:51 am, Sun, 28 August 22