ಬೆಂಗಳೂರು: RSS ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕುಮಾರಸ್ವಾಮಿ ಅವರ ಅಭಿಪ್ರಾಯ ಸಂಘದ ಬಗ್ಗೆ ಅವರಿಗೆ ಇರುವ ಅಜ್ಞಾನ, ಭೀತಿ ಮತ್ತು ಅವರ ವೈಯಕ್ತಿಕ ಹತಾಶೆಯ ಅಭಿವ್ಯಕ್ತಿಯಾಗಿದೆ. ದೇಶಸೇವೆ, ಜನಸೇವೆ, ರಾಷ್ಟ್ರೀಯತೆಯ ಸಿದ್ದಾಂತಗಳ ಮೂರ್ತ ರೂಪವೇ ಸಂಘ. ದೇಶದ ಮೂಲೆ ಮೂಲೆಗಳಲ್ಲಿ ಈ ವಿಚಾರಧಾರೆಗಳನ್ನು ಒಪ್ಪಿದ ಕೋಟ್ಯಾಂತರ ಜನರಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
RSS ವಿಚಾರಧಾರೆಗಳನ್ನು ಕೋಟ್ಯಂತರ ಜನರು ಒಪ್ಪಿದ್ದಾರೆ. ಹೆಚ್‌ಡಿ ದೇವೇಗೌಡರ ಬಳಿ ಹೆಚ್‌ಡಿ ಕುಮಾರಸ್ವಾಮಿ ಮಾಹಿತಿ ಪಡೆಯಬಹುದಿತ್ತು. ಆರ್‌ಎಸ್‌ಎಸ್ ಹೊಗಳಿದ ಹಿರಿಯಗೌಡರ ನುಡಿಗಳು, ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಪೂರ್ವಾಗ್ರಹವಿಲ್ಲದೇ ವಾಸ್ತವ ಪರಿಶೀಲಿಸಿದರೆ ಸಂಘದ ಬಗೆಗಿನ ಹೆಚ್‌ಡಿಕೆ ತಪ್ಪುಕಲ್ಪನೆ ದೂರಾಗಬಹುದು.
ದೇಶ ಮೊದಲು ಎನ್ನುವ ಬದ್ಧತೆ ಬಿಜೆಪಿ ಪ್ರತಿಪಾದಿಸುತ್ತಿದೆ. ಇಲ್ಲಿ ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದ್ರೆ ಜನಾದೇಶ ಪಡೆದು ಆಯ್ಕೆಯಾದ ಪಕ್ಷವನ್ನು, ಪ್ರಧಾನಿ, ಸಿಎಂ ಟೀಕಿಸುವ ಭರದಲ್ಲಿ ಜನಾದೇಶವನ್ನು ಪ್ರಶ್ನಿಸುತ್ತಿದ್ದೀರಿ. ಇದಕ್ಕೆ ಜನರೇ ಉತ್ತರಿಸುತ್ತಾರೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
RSS ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು
ಇನ್ನು ಮತ್ತೊಂದೆಡೆ RSS ಬಗ್ಗೆ ಹೆಚ್‌ಡಿಕೆ, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಚಿವ ಪ್ರಭು ಚೌಹಾಣ್ ತಿರುಗೇಟು ಕೊಟ್ಟಿದ್ದಾರೆ. RSS ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್‌ನವರೇ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನ ಸಹಿಸಲು ಆಗದೆ ಹೀಗೆಲ್ಲಾ ಮಾತನಾಡ್ತಿದ್ದಾರೆ. RSS ದೇಶಭಕ್ತಿಯ ಸಂಸ್ಥೆ, ದೇಶದ ಪರ ಕೆಲಸ ಮಾಡ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾವೆಲ್ಲ ಒಂದು ಅಂತಿದ್ದಾರೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಲಿ. ಮಾಜಿ ಸಿಎಂ ಹೇಗೆ ಮಾತಾಡಬೇಕೆಂದು ತಿಳಿದುಕೊಳ್ಳಲಿ. ಆರ್‌ಎಸ್‌ಎಸ್ ಏನು ಎಂಬುದು ಜನರಿಗೆ ಗೊತ್ತಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ಖಂಡಿಸುತ್ತೇನೆ. ಆರ್‌ಎಸ್‌ಎಸ್ ಇರೋದಕ್ಕೆ ದೇಶ ಇದೆ ಎಂದು ಪ್ರಭು ಚೌಹಾಣ್ ಟೀಕಿಸಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ನ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ; ಹೆಚ್‌ಡಿ ಕುಮಾರಸ್ವಾಮಿ
Published On - 11:25 am, Wed, 6 October 21