ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಶಾಕಿಂಗ್​​ ಘಟನೆ: 200 ರೂ. ಜಗಳಕ್ಕೆ ಮಹಿಳೆಯ ಆತ್ಮಹತ್ಯೆ. ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗಾಗಿ ತೆಗೆದಿಟ್ಟಿದ್ದ 1,300 ರೂ.ನಲ್ಲಿ 200 ರೂ. ಇರಲಿಲ್ಲ. ಸುಮಾ ಅವರ ಗಂಡ ಚಂದ್ರಶೇಖರ್ ಅವರು ವೈಯಕ್ತಿಕ ಕಾರಣಕ್ಕೆ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದು ಗಂಡ ಬಳಿ ಸುಮಾ ಕೇಳಿದ್ದಾರೆ. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ

ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ

Updated on: Jan 12, 2026 | 12:25 PM

ಬೆಂಗಳೂರು, ಜ.12: ಬೆಂಗಳೂರಿನಿಂದ (Bengaluru) 30 ಕಿ.ಲೋ ದೂರದಲ್ಲಿರುವ ಬ್ಯಾಡರಹಳ್ಳಿ ಗ್ರಾಮದಲ್ಲಿ ಒಂದು ಅಘಾತಕಾರಿ​​ ಘಟನೆಯೊಂದು ನಡೆದಿದ್ದು, ಸುಂದರ ಕುಟುಂಬದಲ್ಲಿ ಕತ್ತಲೆ ಆವರಿಸಿದೆ. ಮನೆಗೆ ಬೆಳಕಾಗಿದ್ದ ಮನೆಯ ಯಜಮಾನಿಯ ತಪ್ಪು ನಿರ್ಧಾರದಿಂದ, ಗಂಡ, ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಇದೀಗ ಈ ಘಟನೆಯಿಂದ ಮನೆಯವರು ಮಾತ್ರವಲ್ಲದೆ ಇಡೀ ಗ್ರಾಮವೂ ಕೂಡ ಮರುಗಿದೆ.  200 ರೂ. ವಿಚಾರವಾಗಿ ಇಬ್ಬರ ನಡುವೆ ಸಣ್ಣ ಜಗಳದಿಂದ ಶುರುವಾಗಿದೆ. ಇದರಿಂದ ಬೇಸರುಗೊಂಡು  30 ವರ್ಷದ ಮಹಿಳೆ  ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಎರಡು ಮಕ್ಕಳ ತಾಯಿಯಾಗಿದ್ದ ಸುಮಾ, ಚಂದ್ರಶೇಖರ್ ಎಂಬುವವರನ್ನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗಳು ತಮ್ಮ ಮಕ್ಕಳು ಮತ್ತು ಮನೆಯ ಹಿರಿಯರ ಜತೆಗೆ ಸುಂದರ ಜೀವನ ನಡೆಸುತ್ತಿದ್ದರು. ಈ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದೀಗ ಮನೆಯೊಳಗೆ ಅಮ್ಮನಿಲ್ಲದೆ ಎಲ್ಲವೂ ಖಾಲಿ ಖಾಲಿಯಾಗಿದೆ.

ದಿನಗೂಲಿ ಕೆಲಸ ಮಾಡಿಕೊಂಡು ಬದುಕಿದ್ದ ಈ ಕುಟುಂಬದ ಬಗ್ಗೆ ನೆರೆಹೊರೆಯವರಿಗೆ ಬಹಳ ಪ್ರೀತಿ. ಏಷ್ಯಾನೆಟ್ ನ್ಯೂಸ್ ವರದಿ ಮಾಡಿರುವ ಪ್ರಕಾರ,  ಸಾಮಾನ್ಯವಾಗಿ ಜೀವನ ನಡೆಸುತ್ತಿದ್ದ ಈ ಕುಟುಂಬ ಯಾರೊಬ್ಬರ ಸುದ್ದಿಗೂ ಹೋಗುತ್ತಿರುಲಿಲ್ಲ. ಅವರ ಖರ್ಚು ಕೂಡ ಅಷ್ಟೇ ಎಚ್ಚರಿಕೆಯಿಂದ ಮಾಡುತ್ತಿದ್ದರು. ಹೀಗೆ ದಿನ ಕಳೆಯುತ್ತಿದ್ದಂತೆ, ಒಂದು ದಿನ ಬೆಳಿಗ್ಗೆ, ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗೆ ಸುಮಾ ತೆಗೆದಿಟ್ಟಿದ್ದ ಹಣದ ಬಗ್ಗೆ ಜಗಳ ಶುರುವಾಗಿದೆ. ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗಾಗಿ ತೆಗೆದಿಟ್ಟಿದ್ದ 1,300 ರೂ.ನಲ್ಲಿ 200 ರೂ. ಇರಲಿಲ್ಲ. ಸುಮಾ ಅವರ ಗಂಡ ಚಂದ್ರಶೇಖರ್ ಅವರು ವೈಯಕ್ತಿಕ ಕಾರಣಕ್ಕೆ ತೆಗೆದುಕೊಂಡಿದ್ದರು.

ಈ ವಿಚಾರ ಸುಮಾಗೆ ತಿಳಿದು ಗಂಡ ಚಂದ್ರಶೇಖರ್ ಜತೆಗೆ ಜಗಳಕ್ಕೆ ಇಳಿದಿದ್ದರು.ಇದರಿಂದ ಸುಮಾ ಕೂಡ ಬೇಸರದಲ್ಲಿದ್ದರು. ಕುಟುಂಬದ ಪರಿಚಯದವರು ಹೇಳುವಂತೆ ಜಗಳವು ಸಣ್ಣ ಪ್ರಮಾಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಚಂದ್ರಶೇಖರ್ ಮತ್ತು ಅವರ ತಾಯಿ ಈ ವಿಷಯದ ಬಗ್ಗೆ ಇತ್ಯರ್ಥ ಮಾಡಿ ಸುಮಾ ಅವರನ್ನು ಸಮಾಧಾನ ಮಾಡಿದ್ದಾರೆ. ಆದರೆ ಸುಮಾ ಇದರ ನೋವಿನಲ್ಲೇ ಇದ್ದರು. ಅವರಲ್ಲಿ ಆರ್ಥಿಕ ಒತ್ತಡ ಹೆಚ್ಚಾಗಿತ್ತು. ಈ ಕಾರಣಕ್ಕೆ ಈ ವಿಷಯ ಸಾಯುವ ಹಂತಕ್ಕೆ ಬಂದಿದೆ ಎಂದು ಕುಟುಂಬದವರು ಹೇಳುತ್ತಾರೆ.

ಇದನ್ನೂ ಓದಿ: “ಸರಿಯಾಗಿರೋ ಬಟ್ಟೆ ಧರಿಸಿ” ಎಂದ ಹೋಮ್​​ ಗಾರ್ಡ್​​​​ಗೆ ರಕ್ತ ಬರುವಂತೆ ಹೊಡೆದ ಬೆಂಗಳೂರಿನ ಯುವತಿ

ಈ ಇತ್ಯರ್ಥ ನಂತರ ಚಂದ್ರಶೇಖರ್​​​ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲೂ ಯಾರೂ ಇಲ್ಲದ ಕಾರಣ ಸುಮಾ ಕೂಡ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಘಟನೆಯ ಬಗ್ಗೆ ಮರಗುತ್ತಿದ್ದರು. ಚಂದ್ರಶೇಖರ್​​​​ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದ ವೇಳೆ ಸುಮಾ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಆ ದೃಶ್ಯವು ಮನೆ ಮತ್ತು ಹಳ್ಳಿಯಲ್ಲಿ ದೊಡ್ಡ ಅಘಾತವನ್ನು ಸೃಷ್ಟಿಸಿತ್ತು. ಇದೀಗ ಸುಮಾ 200 ರೂ. ಕಾರಣಕ್ಕೆ ಇಬ್ಬರು ಚಿಕ್ಕ ಮಕ್ಕಳನ್ನು ಅನಾಥ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 12 January 26