AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ

ಬಳ್ಳಾರಿ ಗಲಭೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಜನಾರ್ದನ ರೆಡ್ಡಿಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ರೆಡ್ಡಿ ಜತೆ ಮಾತನಾಡಿರುವ ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬಿನ್, ಈ ವಿಚಾರ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗಲಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೋರಾಟದ ರೂಪುರೇಷೆ ಕುರಿತು ರಾಜ್ಯ ನಾಯಕರೊಂದಿಗೆ ರೆಡ್ಡಿ, ರಾಮುಲು ಚರ್ಚೆ ನಡೆಸಲಿದ್ದಾರೆ.

ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ
ಗಾಲಿ ಜನಾರ್ದನ ರೆಡ್ಡಿ
ಕಿರಣ್​ ಹನಿಯಡ್ಕ
| Edited By: |

Updated on: Jan 12, 2026 | 11:49 AM

Share

ಬೆಂಗಳೂರು, ಜನವರಿ 12: ಬಳ್ಳಾರಿಯಲ್ಲಿ (Ballari) ನಡೆದ ಗಲಭೆಗೆ ಸಂಬಂಧಿಸಿದ ಮಾಹಿತಿ ಬಿಜೆಪಿ (BJP) ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರಿಗೆ ತಲುಪಿದ್ದು, ಅವರು ಈ ಪ್ರಕರಣದ ಕುರಿತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ನಿತಿನ್ ನಬಿನ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಇದು ಗಂಭೀರ ವಿಚಾರವಾಗಿದ್ದು ಹೈಕಮಾಂಡ್ ನಿಮ್ಮ ಜತೆಗಿರಲಿದೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜರ್ನಾದನ ರೆಡ್ಡಿ ಜತೆ ನಿತಿನ್ ನಬಿನ್ ಹೇಳಿದ್ದೇನು?

ಜರ್ನಾದನ ರೆಡ್ಡಿ ಮಾತನಾಡಿದ ನಿತಿನ್ ನಬಿನ್, ಪ್ರಕರಣ ಅತ್ಯಂತ ಗಂಭೀರವಾಗಿದೆ. ಯಾವುದೇ ರೀತಿಯ ಹೋರಾಟ ನಡೆಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವದ ಸಂಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಈ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತಾಪ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಪಾದಯಾತ್ರೆ ಸೇರಿದಂತೆ ಹೋರಾಟದ ರೂಪುರೇಷೆಗಳ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುವಂತೆ ಜನಾರ್ದನ ರೆಡ್ಡಿಗೆ ನಿತಿನ್ ನಬಿನ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಪಾದಯಾತ್ರೆ ನಡೆಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಚರ್ಚೆ

ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಾದಯಾತ್ರೆಯ ರೂಪುರೇಷೆಗಳ ಕುರಿತು ಶ್ರೀರಾಮುಲು ಮತ್ತು ವಿಜಯೇಂದ್ರ ನಡುವೆ ಪ್ರತ್ಯೇಕ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ನಡೆದಿದ್ದು, ಇದೀಗ ವಾಲ್ಮೀಕಿ ಪುತ್ಥಳಿ ಸಂಬಂಧ ಗಲಾಟೆ ನಡೆದಿರುವುದನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರು, ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯದ ಪರವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ಜನಾರ್ದನ ರೆಡ್ಡಿ

ಗಲಭೆ ವಿರುದ್ಧದ ಹೋರಾಟದಲ್ಲಿ ರೆಡ್ಡಿ, ರಾಮುಲು ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾಗಿತ್ತು. ಗಲಭೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಜನಾರ್ದನ ರೆಡ್ಡಿ ಪ್ಲ್ಯಾನ್​ ಮಾಡಿದ್ದರೆ, ಈ ವಿಚಾರವನ್ನು ಇಟ್ಟುಕೊಂಡು ಪಾದಯಾತ್ರೆಗೆ ಶ್ರೀರಾಮುಲು ಚಿಂತನೆ ನಡೆಸಿದ್ದರು. ಇದರಿಂದ ರಾಜ್ಯ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಪಾದಯಾತ್ರೆ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಬಳ್ಳಾರಿ ಗಲಭೆ ವಿಚಾರದಲ್ಲಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವ ಸಕ್ರಿಯಗೊಂಡಿದ್ದು, ಮುಂದಿನ ಹೋರಾಟದ ತಂತ್ರದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ