ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ನಿನ್ನೆ(ಜ.27) ವಲಸಿಗ ಸಚಿವರ ವಿಚಾರವೇ ಬಹುಪಾಲು ಚರ್ಚೆ ನಡೆದಿದೆ. ಕಾಂಗ್ರೆಸ್ ಗೆ ವಾಪಾಸಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರ ಪ್ರಸ್ತಾಪವಾಯಿತಾದರೂ ಹೈಕಮಾಂಡ್ ಕಡೆ ಕೈ ತೋರಿಸಿ ಸಿಎಂ ಸಚಿವರ ಬಾಯಿ ಮುಚ್ಚಿಸಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಲಸಿಗ ಸಚಿವರ ಕಾಂಗ್ರೆಸ್ ವಾಪಸಾತಿ ವಿಚಾರವೇ ಹೆಚ್ಚು ಸದ್ದು ಮಾಡಿತು. ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ವಲಸಿಗ ಸಚಿವರು ಸುದೀರ್ಘ ಸ್ಪಷ್ಟೀಕರಣ ನೀಡಿದ್ರು. ಸಚಿವರಾದ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ, ಎಂಟಿಬಿ ನಾಗರಾಜ್, ನಾರಾಯಣ ಗೌಡ, ಡಾ. ಸುಧಾಕರ್ ಸೇರಿದಂತೆ ವಲಸಿಗ ಸಚಿವರು ಸಂಪುಟ ಸಭೆಯಲ್ಲಿ ಸ್ಪಷ್ಟೀಕರಣ ಕೊಟ್ರು. ನಾವು ಮತ್ತೆ ಕಾಂಗ್ರೆಸ್‌ಗೆ ಹೋಗುತ್ತೇವೆ ಎಂಬ ಮಾತುಗಳೇ ಜೋರಾಗಿ ಬರುತ್ತಿವೆ. ನಾವು ಎಲ್ಲೂ ಹೋಗುವುದಿಲ್ಲ, ಪಕ್ಷದಲ್ಲೇ ಇರುತ್ತೇವೆ ಅಂದ್ರು.
ಈ ಮಧ್ಯೆ ಸಚಿವ ಎಂಟಿಬಿ ನಾಗರಾಜ್, ಬಿಜೆಪಿ ಸೇರ್ಪಡೆ ಸಮಯದಲ್ಲಿ ನಡೆದ ಬೆಳವಣಿಗೆಗಳನ್ನು, ತಮ್ಮ ನಿವಾಸಕ್ಕೆ ಬಿಜೆಪಿ ನಾಯಕರು ಬಂದಿದ್ದನ್ನು ಎಲ್ಲವನ್ನೂ ವಿವರವಾಗಿ ಹೇಳ್ತಾಯಿದ್ರು. ಆಗ ಮಧ್ಯ ಪ್ರವೇಶಿದ ಸಚಿವ ಅಶೋಕ್ ಹಾಗೂ ಆನಂದ್ ಸಿಂಗ್ ಎಂಟಿಬಿಯವರನ್ನ ಸುಮ್ಮನಿರಿಸಿದ್ರು. ಇನ್ನು ಸಚಿವ ಮುನಿರತ್ನ, ನಾವು ಯಾವತ್ತಿದ್ದರೂ ವಲಸಿಗರೇ, ಈ ಸರ್ಕಾರದ ಅವಧಿ ಮುಗಿದು ಮುಂದಿನ ಬಾರಿಯ ಸರ್ಕಾರ ಬಂದರು ಕೂಡಾ ನಮ್ಮನ್ನು ವಲಸಿಗರು ಅಂತಾನೇ ಕರೆಯುತ್ತಾರೆ ಅಂತಾ ಹೇಳಿದ್ರು.
ನೀವು ನಮ್ಮನ್ನು ಶಿವಮೊಗ್ಗಕ್ಕೆ ಕಳುಹಿಸಿದ್ರಿ, ಮೀಡಿಯಾದವರು ಕೂಡಾ ತುಂಬಾ ಕೇಳಿದರು, ನಾವು ಎಲ್ಲೂ ಪಕ್ಷ ಬಿಡಲ್ಲ ಎಂದು ಸಚಿವ ನಾರಾಯಣ ಗೌಡ ಹೇಳೀದ್ರು. ಕೊನೆಯಲ್ಲಿ ನಾವು ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಸಚಿವ ಡಾ. ಸುಧಾಕರ್ ಚರ್ಚೆಗೆ ಅಂತ್ಯ ಹಾಡಿದ್ರು. ನಿಮಗೆ ನಮ್ಮ ಸಪೋರ್ಟ್ ಯಾವಾಗಲೂ ಇರುತ್ತದೆ, ಯಾವುದೇ ಸಮಸ್ಯೆ ಇಲ್ಲ, ಆತಂಕ ಬೇಡ, ನಿಮ್ಮ ಕೆಲಸದ ಬಗ್ಗೆ ಹೈಕಮಾಂಡ್ ಕೂಡಾ ಮೆಚ್ಚುಗೆ ಹೊಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಲಸಿಗ ಸಚಿವರಿಗೆ ಸಮಾಧಾನವಾಗುವಂತೆ ಮಾತನಾಡುದ್ರು.
ಇದನ್ನೂ ಓದಿ: Karnataka Cabinet Meeting: ಸಂಪುಟ ಸಭೆಯಲ್ಲಿ ವಲಸಿಗ ಸಚಿವರ ವಾಪಸಾತಿ ವಿಚಾರದ ಬಗ್ಗೆ ದೀರ್ಘ ಚರ್ಚೆ
Published On - 7:44 am, Fri, 28 January 22