ಕಾರ್ ಪೂಲಿಂಗ್ ಜಟಾಪಟಿ: ಬಿಜೆಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್​ಐಆರ್ ದಾಖಲು

| Updated By: ಆಯೇಷಾ ಬಾನು

Updated on: Nov 20, 2023 | 11:23 AM

ಆಟೋ ಚಾಲಕರ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಬಿಜೆಪಿಯ ಮಾಜಿ ಕಾರ್ಪೊರೇಟರ್, ಸಂಸದ ತೇಜಸ್ವಿ ಸೂರ್ಯ ಬೆಂಬಲಿಗ ಸಂಗಾತಿ ವೆಂಕಟೇಶ್ ವಿರುದ್ಧ FIR ದಾಖಲಾಗಿದೆ. ಆಟೋದಲ್ಲಿ ತೇಜಸ್ವಿ ಸೂರ್ಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಕಾರಣಕ್ಕೆ ಸಂಗಾತಿ ವೆಂಕಟೇಶ್ ಆಟೋ ಚಾಲಕರ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹನುಮಂತ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ ಪೂಲಿಂಗ್ ಜಟಾಪಟಿ: ಬಿಜೆಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್​ಐಆರ್ ದಾಖಲು
ಸಂಗಾತಿ ವೆಂಕಟೇಶ್
Follow us on

ಬೆಂಗಳೂರು, ನ.20: ಆಟೋ ಚಾಲಕರ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಬಿಜೆಪಿಯ ಮಾಜಿ ಕಾರ್ಪೊರೇಟರ್, ಸಂಸದ ತೇಜಸ್ವಿ ಸೂರ್ಯ (Tejasvi Surya) ಬೆಂಬಲಿಗ ಸಂಗಾತಿ ವೆಂಕಟೇಶ್ ವಿರುದ್ಧ ಹನುಮಂತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಪೂಲಿಂಗ್ (Car pooling) ಅನುಮತಿ ನೀಡಿ ಎಂದು ಸಿಎಂಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು. ಈ ಹಿನ್ನೆಲೆ ಧಿಕ್ಕಾರದ ಪೋಸ್ಟರ್ ಹಾಕಿ ಖಾಸಗಿ ಸಾರಿಗೆ ಸಂಘಟನೆ ಅಭಿಯಾನ ಶುರು ಮಾಡಿತ್ತು. ಇದರ ಭಾಗವಾಗಿ ಆಟೋಗಳ ಮೇಲೆ ಅವಿವೇಕಿ ತೇಜಸ್ವಿ ಸೂರ್ಯಗೆ ಧಿಕ್ಕಾರ..ಧಿಕ್ಕಾರ ಎಂದು ಪೋಸ್ಟರ್ ಅಂಟಿಸಲಾಗಿತ್ತು. ಇದನ್ನು ಕಂಡ ಮಾಜಿ ಕಾರ್ಪೊರೇಟರ್ ವೆಂಕಟೇಶ್ ಅವರ ಬೆಂಬಲಿಗರು ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲದೆ ಸಂಗಾತಿ ವೆಂಕಟೇಶ್ ಆಟೋ ಚಾಲಕರನ್ನ ಕರೆದು ಇನ್ನುಮುಂದೆ ನಮ್ಮ ಏರಿಯಾದಲ್ಲಿ ಕಂಡರೆ ಕತ್ತರಿಸಿ ಬಿಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಖಾಸಗಿ ಸಾರಿಗೆ ಒಕ್ಕೂಟ FIR ದಾಖಲಿಸಿದೆ.

ಘಟನೆ ಹಿನ್ನಲೆ

ಹನುಮಂತನಗರದ ಶಂಕರ್ ನಾಗ್ ಸರ್ಕಲ್ ಬಳಿ ಶನಿವಾರ ಸುಮಾರು 7 ಗಂಟೆ ಹೊತ್ತಿಗೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೋಸ್ಟರ್ ಅಂಟಿಸಿದ್ದ ಆಟೋ ಚಾಲಕನೋರ್ವ ಪ್ಯಾಸೆಂಜರ್ ಬರುವಿಕೆಗಾಗಿ ಕಾಯುತ್ತಿದ್ದ. ಇದೇ ವೇಳೆ ಇದ್ದಕ್ಕಿದ್ದ ಹಾಗೇ 4 ಜನ ಗೂಂಡಾಗಳು ಬಂದು ಪೋಸ್ಟರ್ ಕಿತ್ತಾಕುವಂತೆ ಅವಾಜ್ ಹಾಕಿದ್ದಾರೆ. ಚಾಲಕ ಒಪ್ಪದೇ ಇದ್ದ ಹಿನ್ನಲೆ ತಾವೇ ನುಗ್ಗಿ ಪೋಸ್ಟರ್ ಕಿತ್ತು ಹಾಕಿದ್ದಾರೆ. ಬಳಿಕ ಸಂಗಾತಿ ವೆಂಕಟೇಶ್ ಗೆ ಕಾಲ್ ಮಾಡಿದ್ದಾರೆ. ಆಗ ಸ್ಥಳಕ್ಕೆ ಬಂದ ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್, ನಮ್ಮ ಸಂಸದರ ಫೋಟೋ ಯಾಕೆ ಈ ರೀತಿ ಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಬಾಯಿಗೆ ಬಂದ ಹಾಗೇ ಅವಾಚ್ಯ ಶಬ್ದಗಳಿಂದ ಆಟೋ ಚಾಲಕನಿಗೆ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಚಾಲಕ ಪೊಲೀಸ್ ಠಾಣೆಗೆ ಹೋಗಿ ಸಂಗತಿ ವೆಂಕಟೇಶ್ ವಿರುದ್ಧ FIR ದಾಖಲಿಸಿದ್ದಾನೆ.

ಏನಿದು ಕಾರ್ ಪೂಲಿಂಗ್?

ನಿತ್ಯ ಕಚೇರಿಗಳಿಗೆ ಕಾರಿನಲ್ಲಿ ಹೋಗುವ ಉದ್ಯೋಗಿಗಳಲ್ಲಿ ಕಾರ್ ಪೂಲಿಂಗ್ ಜನಪ್ರಿಯ. ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು.ಕ್ವಿಕ್ ರೈಡ್ (QuickRide), ಝೂಮ್ (Zoom Car), ಬ್ಲಾಬ್ಲಾ ಕಾರ್ (BlaBlaCar) ಇತ್ಯಾದಿ ಮೊಬೈಲ್ ಆ್ಯಪ್​ಗಳನ್ನು ಬಳಸಿ ಕಾರ್ ಪೂಲಿಂಗ್ ಮಾಡ್ಲಾಗುತ್ತೆ. ಕಾರ್ ಪೂಲಿಂಗ್ ವಿಚಾರವಾಗಿ ತೇಜಸ್ವಿ ಸೂರ್ಯ ಸಿಎಂಗೆ ಪತ್ರ ಬರೆದಿದ್ದರು. ಕಾರ್ ಪೂಲಿಂಗ್ ನಿಷೇಧ ಮಾಡದಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಫೆಬ್ರವರಿ ಒಳಗೆ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಪೂರ್ಣಗೊಳಿಸಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ತೇಜಸ್ವಿಸೂರ್ಯ ಹೇಳಿದ್ದೇನು?

1989ರ ಮೋಟಾರ್ ವೆಹಿಕಲ್‌ ಕಾಯ್ದೆ ಔಟ್ ಡೇಟೆಡ್ ಆಗಿದೆ. 1989ರ‌‌‌ ಬೆಂಗಳೂರಿನ ಪರಿಸ್ಥಿಗೂ ಈಗಿನ‌ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ.1989 ಕ್ಕಿಂತ 2023 ರಲ್ಲಿ 600% ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 11 ಮಿಲಿಯನ್ ಜನಸಂಖ್ಯೆ ಇದ್ದಾರೆ. 12.5 ಮಿಲಿಯನ್ ವಾಹನಗಳು ನಗರದಲ್ಲಿವೆ. 1750ರಷ್ಟು ದಿನನಿತ್ಯ ಹೊಸ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.ಹೀಗಾಗಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪೀಕ್ ಅವರ್ ನಲ್ಲಿ ಟ್ರಾಫಿಕ್ ವೇಗ ಸರಾಸರಿ ಗಂಟೆಗೆ 15 ಕಿಮೀ ವೇಗದಲ್ಲಿರುತ್ತದೆ. ಇದೀಗ ಕಾರ್ ಪೂಲಿಂಗ್ ನಿಷೇಧ ಮಾಡಿದ್ರೆ, ಮತ್ತಷ್ಟು ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇದೆ. ಯಾಕಂದ್ರೆ ಕಾರ್ ಪೂಲಿಂಗ್ ಅನ್ವಯ ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು. ಇದರಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆ ಆಗುತ್ತದೆ. ಇದು ಟ್ರಾಫಿಕ್ ಕಂಟ್ರೋಲ್ ಗೆ ಸಹಕಾರಿಯಾಗುತ್ತದೆ. ಪೆಟ್ರೋಲ್ ವೆಚ್ಚ ತಗ್ಗುತ್ತದೆ, ಐಟಿ ವಲಯದಲ್ಲಿ ಈ ಕಾರ್ ಪೂಲಿಂಗ್ ಸಾಕಷ್ಟು ಸಹಕಾರಿಯಾಗಲಿದೆ ಎಂದು ಪತ್ರ ಬರೆದಿದ್ದರು.

ಕಾರ್ ಪೂಲಿಂಗ್​ಗೆ ವಿರೋಧ ಯಾಕೆ?

ವೈಟ್ ಬೋರ್ಡ್ ಇರುವ ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್ ಮೂಲಕ ಕಮರ್ಷಿಯಲ್ ಲಾಭಕ್ಕೆ ಬಳಕೆ ಮಾಡಲಾಗುತ್ತಿದೆ. ವಿವಿಧ ಟ್ರಾನ್ಸ್ಪೋರ್ಟ್ ಆ್ಯಪ್​ಗಳನ್ನು ಬಳಸಿ ಕಾರ್ ಪೂಲಿಂಗ್ ಮಾಡಲಾಗುತ್ತಿದೆ. ಇದರಿಂದ ಕಮರ್ಷಿಯಲ್ ಲೈಸೆನ್ಸ್ ಹೊಂದಿರುವ ಟ್ಯಾಕ್ಸಿ ವಾಹನಗಳ ವ್ಯವಹಾರಕ್ಕೆ ಕುತ್ತು ಬರ್ತಿದೆ ಎಂದು ವಿರೋಧ ವ್ಯಕ್ತವಾಗುತ್ತಿದೆ. ಟ್ಯಾಕ್ಸಿ ಕಾರುಗಳು ಸಾಕಷ್ಟು ಶುಲ್ಕ ತೆತ್ತು ಕಮರ್ಷಿಯಲ್ ಲೈಸೆನ್ಸ್ ಹೊಂದಿರುತ್ತವೆ. ಪ್ರೈವೇಟ್ ವಾಹನಗಳನ್ನು ಈ ರೀತಿ ಶುಲ್ಕ ಇಲ್ಲದೇ ಕಮರ್ಷಿಯಲ್ ಆಗಿ ಬಳಕೆ ಮಾಡಲು ಅವಕಾಶ ಕೊಡುವುದು ಎಷ್ಟು ಸರಿ ಎಂಬುದು ಟ್ಯಾಕ್ಸಿ ಚಾಲಕರ ಪ್ರಶ್ನೆ? ಪ್ರಯಾಣಿಕರ ಸುರಕ್ಷತೆ, ವಿಮಾ ಸೌಲಭ್ಯ, ದರನಿಗದಿ ಬಗ್ಗೆ ಕೂಡ ಕ್ಲಾರಿಟಿ ಇಲ್ಲ. ಇದ್ರಿಂದ ಸಮಸ್ಯೆ. ಈ ಬಗ್ಗೆ ಹಿಂದೆ ಕೂಡ ಸಾರಿಗೆ ಇಲಾಖೆಗೆ ಟ್ಯಾಕ್ಸಿ ಚಾಲಕರು ದೂರು ಕೊಟ್ಟಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:12 am, Mon, 20 November 23