ಕರ್ನಾಟಕದಲ್ಲಿ ಕಾವೇರಿ ಕಿಚ್ಚು: ನಾಳೆ ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಕರವೇ ನಿರ್ಧಾರ

ನಮಗೆ ಕುಡಿಯಲು ಇಟ್ಕೊಂಡ ನೀರನ್ನ ಪ್ರಾಧಿಕಾರ ಕಿತ್ಕೊಂಡು ಪಕ್ಕದ ರಾಜ್ಯಕ್ಕೆ ಕೊಡ್ತಿದೆ.. ಸುಪ್ರೀಂ ಅಂಗಳದಲ್ಲೂ ಕರುನಾಡಿಗೆ ಕಾವೇರಿ ಧಕ್ಕಿಲ್ಲ. ಮೇಲಿಂದ ಮೇಲೆ ಅನ್ಯಾಯ ಖಂಡಿಸಿ, ರೈತರು, ಕನ್ನಡಪರ ಸಂಘಟನೆಗಳು ಕೊತಕೊತ ಅಂತಿದ್ದಾರೆ. ದಿನದಿಂದ ದಿನಕ್ಕೆ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದ್ದು, ಇದೀಗ ಕರವೇ ರಾಜ್ಯ ಸಂಸದ ಮನೆಗಳಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಕರ್ನಾಟಕದಲ್ಲಿ ಕಾವೇರಿ ಕಿಚ್ಚು: ನಾಳೆ ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಕರವೇ ನಿರ್ಧಾರ
ಕರವೇ
Updated By: ರಮೇಶ್ ಬಿ. ಜವಳಗೇರಾ

Updated on: Sep 22, 2023 | 1:46 PM

ಬೆಂಗಳೂರು, (ಸೆಪ್ಟೆಂಬರ್ 22): ತಮಿಳುನಾಡಿಗೆ (Tamil Nadu) ಕಾವೇರಿ ನೀರು(cauvery Water) ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದೇ ತಡ ಇತ್ತ ಕರ್ನಾಟಕದಲ್ಲಿ (Karnataka) ಆಕ್ರೋಶ ಭಯಗಿಲೆದ್ದಿದೆ. ಕಾವೇರಿಗಾಗಿ ಹೋರಾಟ ಧಗಧಗಿಸತೊಡಗಿದೆ. ಅನ್ನದಾತರು, ಕನ್ನಡಪರ ಸಂಘಟನೆಗಳ ಆಕ್ರೋಶದ ಕಟ್ಟೆಯೊಡೆದಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ನಾಳೆ(ಸೆಪ್ಟೆಂಬರ್ 23) ಮಂಡ್ಯ ಬಂದ್​ಗೆ ರೈತ ಸಂಘಟನೆಗಳು ಕರೆ ಕೊಟ್ಟಿವೆ. ಇನ್ನೊಂದೆಡೆ ನಾಳೆ ರಾಜ್ಯ ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ.

ಕರವೇ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್ ಗೌಡ ನೇತೃತ್ವದಲ್ಲಿ ಇಂದು (ಸೆ.22) ಬೆಂಗಳೂರಿನ ವಿಜಯನಗರದ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಯಿತು, ಈ ವೇಳೆ ಮಾತನಾಡಿದ ಧರ್ಮರಾಜ್ ಗೌಡ, ಕನ್ನಡಿಗರ ಮರಣ ಶಾಸನವನ್ನ ನಾವು ಸುಮ್ಮನೇ ನೋಡಿ‌ ಕೂರಲು ಆಗಲ್ಲ. ನಮ್ಮ ಕಾವೇರಿ ರಕ್ಷಣೆ ನಾವೇ ಮಾಡಬೇಕು. ಕೂಡಲೇ ಕಾವೇರಿ‌ ಹರಿಸೋದನ್ನ ನಿಲ್ಲಿಸಬೇಕು ಎಂದು ಎಚ್ಚರಿಸಿದರು. ಅಲ್ಲದೇ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಕರ್ನಾಟಕ ರಕ್ಷಣಾ ವೇದಿಕೆ ಕರೆ ಕೊಟ್ಟರು.

ಇದನ್ನೂ ಓದಿ: ಸೆ.23 ಮಂಡ್ಯ ಬಂದ್​​ಗೆ ಕರೆ: ಕಾನೂನು ಬಾಹಿರ ಚಟುವಟಿಕೆಗಳು ನಡೆದರೇ ಕ್ರಮ ಕೈಗೊಳ್ಳಲಾಗುವುದು: ಜಿ ಪರಮೇಶ್ವರ್

ಪ್ರಾಧಿಕಾರ ಸರಿಯಾದ ಮಾಹಿತಿಯನ್ನು ಕೋರ್ಟ್ ಗೆ ನೀಡುತ್ತಿಲ್ಲ. ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳುತ್ತಿದೆ. ನಾಳೆ ಸಂಸಂದರ ಮನೆಗಳಿಗೆ ಮುತ್ತಿಗೆ ಹಾಕುತ್ತೇವೆ. ಕರ್ನಾಟಕದ ಸಂಸದರು ಕೇಂದ್ರದ ಗುಲಾಮರಾಗಿದ್ದಾರೆ. ಸಂಸದರ ಮೂರ್ಖ ವರ್ತನೆ ಜನರಲ್ಲಿ ಬೇಸರ ತರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಜಿಎಂ‌. ಸಿದ್ದೇಶ್ವರ ಕಚೇರಿಗೆ ಮುತ್ತಿಗೆ

ಮತ್ತೊಂದೆಡೆ ದಾವಣಗೆರೆಯಲ್ಲಿ ಕರವೇ ಕಾರ್ಯಕರ್ತರು ಸಂಸದ ಜಿಎಂ‌. ಸಿದ್ದೇಶ್ವರ ಕಚೇರಿಗೆ ಮುತ್ತಿಗೆ ಹಾಕಿ‌‌ ಆಕ್ರೋಶ. ವ್ಯಕ್ತಪಡಿಸಿದರು. ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿ ಇರುವ ಸಂಸದ ಜಿಎಂ ಸಿದ್ದೇಶ್ವರ ಕಚೇರಿಗೆ ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ರಾಮೇಗೌಡ ನೇತ್ರತ್ವದಲ್ಲಿ ಮುತ್ತಿಗೆ ಹಾಕಿದರು. ಈ ವೇಳೆ ಗೇಟ್ ನಲ್ಲಿ ಪ್ರತಿಭಟನೆಕಾರರನ್ನ ಪೊಲೀಸರು ಕಚೇರಿ ಗೇಟ್​ನಲ್ಲೇ ತಡೆದರು. ಆದರೂ ಪ್ರತಿಭಟನೆಕಾರರು ಗೇಟ್ ಏರಿ ಕಚೇರಿಗೆ ನುಗ್ಗಲು ಯತ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ