
ಬೆಂಗಳೂರು, ಅಕ್ಟೋಬರ್ 09: ಸಚಿವ ಜಮೀರ್ ಅಹ್ಮದ್ ಖಾನ್ ಇತ್ತೀಚೆಗೆ ತಮ್ಮ ಮತಕ್ಷೇತ್ರವಾದ ಚಾಮರಾಜನಗರಪೇಟೆಯಲ್ಲಿ ಸಾಕಷ್ಟು ಕ್ರಿಮಿನಲ್ ಚುಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪ ಮಾಡಿದ್ದರು. ಆ ಬೆನ್ನಲ್ಲೇ ಇದೀಗ ಪಾದರಯನಪುರ ಮತ್ತು ಜೆ.ಜೆ ನಗರದಲ್ಲಿ ಸಿಸಿಬಿ ಕಾರ್ಯಚರಣೆ ಮಾಡಿದ್ದು, ಕಾಂಗ್ರೆಸ್ ಮುಖಂಡನ ಸಹೋದರ ಮೌಸೀನ್ ಪಾಷಾನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಆರೋಪ ಹಿನ್ನೆಲೆ ಇಂದು ಕಾರ್ಯಾಚರಣೆಗೆ ಇಳಿದ ಸಿಸಿಬಿ ಅಧಿಕಾರಿಗಳ ತಂಡ ಪಾದರಯನಪುರ ಮತ್ತು ಜೆ.ಜೆ ನಗರದಲ್ಲಿ 535 ಕಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಗಲಾಟೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡನ ಸಹೋದರ ಮೌಸೀನ್ ಪಾಷಾ ನನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.
ಚಾಮರಾಜನಗರಪೇಟೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷಾನ ಸಹೋದರ ಈ ಮೌಸೀನ್ ಪಾಷಾ. ಗಲಾಟೆ ಪ್ರಕರಣವೊಂದಲ್ಲಿ ಈತ ತಲೆಮರೆಸಿಕೊಂಡಿದ್ದ. ಎರಡೆರಡೂ ವಾರಂಟ್ ಇದ್ದರೂ ಕೋರ್ಟ್‌ಗೆ ಹಾಜರಾಗದೆ ಉದ್ಧಟತನ ಮೆರೆದಿದ್ದ. ಅಷ್ಟೇ ಅಲ್ಲದೆ ದಾಳಿ ವೇಳೆ ಕೂಡ ಸಿಸಿಬಿ ಪೊಲೀಸರಿಗೆ ಮೌಸೀನ್ ಪಾಷಾ ಆವಾಜ್ ಹಾಕಿದ್ದಾನೆ. ಆತನ ಪುಂಡಾಟಕ್ಕೆ ಜಗ್ಗದ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಫಾರಂ 7 ಸಲ್ಲಿಕೆ ಕೇಸ್: ಕಾಂಗ್ರೆಸ್ ಮುಖಂಡನ ದೂರು ಆಧರಿಸಿ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ
ಇನ್ನು ಬೆಂಗಳೂರು ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡುವ ಮೂಲಕ ರೌಡಿಶೀಟರ್‌ಗಳು ಮತ್ತು ನ್ಯಾಯಾಲಯಕ್ಕೆ ಗೈರು ಹಾಜರಾಗಿರುವವರು, ಡ್ರಗ್ ಪೆಡ್ಲರ್‌ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರ ಪರಿಶೀಲನೆ ಮಾಡಿದ್ದಾರೆ. ದಾಳಿ ವೇಳೆ ಕೊಲೆ, ಗಲಾಟೆ ಕೇಸ್‌ನಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಗೈರಾಗಿದ್ದ ಇಬ್ಬರ ಪತ್ತೆ ಹಚ್ಚಲಾಗಿದೆ. ಜೊತೆಗೆ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಮಾಡಿ ಎಲ್ಲರನ್ನ ಸಿಸಿಬಿ ವಶಕ್ಕೆ ಪಡೆದಿದೆ. ಇನ್ನು ವಿವಿಧ ಕಾನೂನು ಉಲ್ಲಂಘಿಸಿದ್ದವರ ವಿರುದ್ಧವೂ ಸಿಸಿಬಿಯಿಂದ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.