ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಶಿಫ್ಟ್ ಮಾಡಲು ಡಿಐಜಿ ಆದೇಶ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಇದ್ದ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದು ಭಾರಿ ಸುದ್ದಿಯಾಗಿತ್ತು. ಈ ಸಂಬಂಧ ಡಿಐಜಿ ನೇತೃತ್ವದಲ್ಲಿ ತನಿಖೆಗೂ ಆದೇಶಿಸಲಾಗಿತ್ತು. ಆ ಬೆನ್ನಲ್ಲೇ ಈಗ ಮತ್ತೊಂದು ಪ್ರಮುಖ ನಿರ್ಧಾರವನ್ನು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಡಿಜಿಪಿ ಅಲೋಕ್ಕುಮಾರ್ ಮಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 09: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾಗಿದ್ದ ಬೆನ್ನಲ್ಲೇ ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಡಿಜಿಪಿ ಅಲೋಕ್ಕುಮಾರ್ ಮಹತ್ವದ ಆದೇಶ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಪ್ರಜ್ವಲ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಡಿಜಿಪಿ ಸೂಚಿಸಿದ್ದಾರೆ. ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದನ ಸೆಲ್‌ನಲ್ಲಿ ಪರಿಶೀಲನೆ ವೇಳೆ ಪೆನ್‌ಡ್ರೈವ್, ಮೊಬೈಲ್ ಪತ್ತೆಯಾಗಿದ್ದಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಪ್ರಜ್ವಲ್ ರೇವಣ್ಣ ಶಿಫ್ಟ್ ಸಂಬಂಧ ಬೆಳಗಾವಿಯ ಹಿಂಡಲಗಾ ಜೈಲಿಗೆ ಅಧಿಕೃತ ಇ-ಮೇಲ್ ಮಾಡಲಾಗಿದೆ. ಜೈಲು ಮುಖ್ಯ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದ್ದು, ಆದಷ್ಟು ಬೇಗ ಹಿಂಡಲಗಾ ಜೈಲಿಗೆ ಪ್ರಜ್ವಲ್ ಶಿಫ್ಟ್ ಮಾಡಲಾಗುತ್ತೆ. ಯಾವಾಗ ಬೇಕಾದ್ರೂ ಎಸ್ಕಾರ್ಟ್ ಮೂಲಕ ಶಿಫ್ಟ್ ಮಾಡಬಹುದು. ಹೀಗಾಗಿ ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಿಸಿಬಿ ದಾಳಿ ವೇಳೆ ಪತ್ತೆಯಾಗಿದ್ದ ಮೊಬೈಲ್
2026ರ ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾಗಿತ್ತು. ಜೊತೆಗೆ ಚಾರ್ಜರ್, ನೀಲಿ ಬಣ್ಣದ ನೋಟ್‌ಬುಕ್ ಹಾಗೂ ಪೆನ್ ಡ್ರೈವ್ನ ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು. ಮೊಬೈಲ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ , ನೆಟ್‌ಫ್ಲಿಕ್ಸ್ , ಪ್ರೈಮ್ ವಿಡಿಯೋ ಆ್ಯಪ್‌ಗಳು ಇದ್ದು, ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಟ್ಟಿದ್ದವು. ವಿಧಿವಿಜ್ಞಾನ ಪರೀಕ್ಷೆಯಲ್ಲಿ (FSL) ಮೊಬೈಲ್‌ನಲ್ಲಿ ಕೆಲ ವಿಡಿಯೋ ಫೈಲ್‌ಗಳು ಕೂಡ ಪತ್ತೆಯಾಗಿವೆ ಎನ್ನಲಾಗಿತ್ತು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜೈಲು ಸೆಲ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆ ಕೇಸ್: ಎಫ್ಎಸ್ಎಲ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಜೊತೆಗೆ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಫೋಟೋ ಕೂಡ ಹೊರಬಂದಿತ್ತು. ಪ್ರಕರಣ ಸಂಬಂಧ ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಇರೋದು ಸಾಬೀತು ಹಿನ್ನೆಲೆ ತನಿಖೆಗಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನಲ್ಲಿ ಮೊಬೈಲ್ ಹೇಗೆ ಬಂತು? ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:15 pm, Fri, 9 October 26




