AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಜೈಲು ಸೆಲ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆ ಕೇಸ್: ಎಫ್​ಎಸ್​ಎಲ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಪ್ರಜ್ವಲ್ ರೇವಣ್ಣ ಅವರ ಜೈಲು ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣ ಸಂಬಂಧ ಎಫ್​ಎಸ್​ಎಲ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮೊಬೈಲ್‌ನಲ್ಲಿ 173 ಫೈಲ್‌ಗಳು ಹಾಗೂ ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊಬೈಲ್ ಜೈಲಿಗೆ ತಲುಪಿದ ರೀತಿ ಹಾಗೂ ಕರೆಗಳ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಜೈಲು ಸೆಲ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆ ಕೇಸ್: ಎಫ್​ಎಸ್​ಎಲ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಪ್ರಜ್ವಲ್ ರೇವಣ್ಣImage Credit source: tv9
ರಾಮು, ಆನೇಕಲ್​
| Edited By: |

Updated on:Sep 12, 2026 | 10:04 AM

Share

ಮುಖ್ಯಾಂಶಗಳು

  • ಪ್ರಜ್ವಲ್ ಮೊಬೈಲ್‌ನಲ್ಲಿ 173 ಫೈಲ್‌ಗಳು ಪತ್ತೆ
  • ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ವಿಡಿಯೋಗಳು
  • ಜೈಲು ವಾರ್ಡರ್ ಪಾತ್ರದ ಬಗ್ಗೆ ತನಿಖೆ ಮುಂದುವರಿಕೆ

ಬೆಂಗಳೂರು, ಸೆಪ್ಟೆಂಬರ್ 12: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಜ್ವಲ್ ಬಳಸಿದ್ದ ಮೊಬೈಲ್‌ನಲ್ಲಿ 173 ಫೈಲ್‌ಗಳು ಪತ್ತೆಯಾಗಿದ್ದು, ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೊಬೈಲ್‌ನಲ್ಲಿ 173 ಫೈಲ್‌ಗಳು ಪತ್ತೆ

ಪ್ರಜ್ವಲ್ ರೇವಣ್ಣ ಬಳಿಯಿದ್ದ ಮೊಬೈಲ್‌ನ ಡೇಟಾವನ್ನು ಪರಿಶೀಲಿಸಿದಾಗ 173 ಫೈಲ್‌ಗಳು ಪತ್ತೆಯಾಗಿವೆ. ಕನ್ನಡ, ಹಿಂದಿ, ಇಂಗ್ಲಿಷ್ ಸಿನಿಮಾಗಳು, ವೆಬ್‌ಸೀರಿಸ್‌ಗಳು ಸೇರಿದಂತೆ ವಿವಿಧ ವಿಡಿಯೋಗಳು ಮೊಬೈಲ್‌ನಲ್ಲಿ ಇದ್ದವು ಎಂದು ಎಫ್​ಎಸ್​ಎಲ್ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಪೆನ್‌ಡ್ರೈವ್‌ನಲ್ಲೂ 100ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ. ಅದರಲ್ಲಿ ಅಶ್ಲೀಲ ವಿಡಿಯೋಗಳು ಇದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬುದು ತಿಳಿದುಬಂದಿದೆ.

ಜೈಲು ಸೆಲ್‌ಗೆ ಮೊಬೈಲ್ ತಲುಪಿಸಿದ್ದೇ ವಾರ್ಡರ್

ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ತಲುಪಿಸಿದ ಪ್ರಕರಣದಲ್ಲಿ ಜೈಲು ವಾರ್ಡರ್ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ. ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ತೌಸಿಫ್ ಎಂಬಾತ ಮೊಬೈಲ್‌ನ್ನು ಜೈಲು ವಾರ್ಡರ್‌ಗೆ ತಂದುಕೊಟ್ಟಿದ್ದ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಲು ವಾರ್ಡರ್ ಮೂಲಕ ಮೊಬೈಲ್ ಪ್ರಜ್ವಲ್ ರೇವಣ್ಣ ಅವರ ಕೈ ಸೇರಿತ್ತು ಎಂದು ಆರೋಪಿಸಲಾಗಿದ್ದು, ಮೊಬೈಲ್ ಪೂರೈಕೆ ಮಾಡಿದ ವ್ಯಕ್ತಿ ಹಾಗೂ ಜೈಲಿನೊಳಗೆ ತಲುಪಿಸಿದ ರೀತಿಯ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯರಿಗೆ ಕರೆ ಮಾಡಿರುವುದು ಪತ್ತೆ!

ಜೈಲಿನಲ್ಲಿ ಪತ್ತೆಯಾದ ಮೊಬೈಲ್ ಬಳಸಿ ಪ್ರಜ್ವಲ್ ರೇವಣ್ಣ ಹಲವರಿಗೆ ಕರೆ ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಕೆಲ ಮಹಿಳೆಯರಿಗೆ ವಿಡಿಯೋ ಕಾಲ್ ಹಾಗೂ ವಾಟ್ಸಾಪ್ ಕರೆಗಳನ್ನು ಮಾಡಿದ್ದರೆಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಕರೆ ಮಾಡಿದ್ದರೆನ್ನಲಾದ ಮಹಿಳೆಯರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ. ಕರೆಗಳ ವಿವರ, ಮೊಬೈಲ್ ಡೇಟಾ ಹಾಗೂ ಪೆನ್‌ಡ್ರೈವ್‌ನಲ್ಲಿರುವ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಜೈಲು ಸೆಲ್‌ನಲ್ಲಿದ್ದ ಟಿವಿ ಮೂಲಕ ಪ್ರಜ್ವಲ್ ರೇವಣ್ಣ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು ಎನ್ನಲಾಗಿದ್ದು, ಮೊಬೈಲ್ ಹಾಗೂ ಪೆನ್‌ಡ್ರೈವ್‌ನಲ್ಲಿದ್ದ ವಿಡಿಯೋಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳನ್ನು ಪರಿಶೀಲನೆಗಾಗಿ ಎಸ್‌ಐಟಿಗೆ ನೀಡಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖೆಯ ಮುಂದಿನ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ.

ತನಿಖೆ ಮುಂದುವರಿಸಿದ ಪೊಲೀಸರು

ಪ್ರಜ್ವಲ್ ರೇವಣ್ಣ ಅವರ ಜೈಲು ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೊಬೈಲ್ ಯಾರಿಂದ ಪೂರೈಕೆಯಾಯಿತು, ಜೈಲಿನೊಳಗೆ ಹೇಗೆ ತಲುಪಿತು, ಯಾರೊಂದಿಗೆ ಕರೆ ಮಾಡಲಾಗಿತ್ತು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲಾಗುತ್ತಿದೆ. ಎಫ್​ಎಸ್​ಎಲ್ ವರದಿಯಲ್ಲಿನ ಅಂಶಗಳು, ಮೊಬೈಲ್ ಡೇಟಾ ಹಾಗೂ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪ್ರಜ್ವಲ್ ಜತೆ ಫೋನ್​ನಲ್ಲಿ ಮಾತನಾಡಿದವರಿಗೆಲ್ಲ ಎದುರಾಗಲಿದೆ ಸಂಕಷ್ಟ?

ಜೈಲಿನಲ್ಲಿದ್ದಾಗ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿ ಸಾಮಾನ್ಯ ಕರೆ ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡುತ್ತಿದ್ದ. ತಾಯಿ ಗೌರಮ್ಮ, ತಂದೆ ಎಚ್.ಡಿ. ರೇವಣ್ಣ ಹಾಗೂ ವಕೀಲರಿಗೂ ಕರೆ ಮಾಡಿ ಪ್ರಕರಣಗಳ ಮಾಹಿತಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಈ ಹಿಂದೆ ವೈರಲ್ ಆಗಿದ್ದ ವಿಡಿಯೋಗಳಲ್ಲಿದ್ದ ಕೆಲ ಮಹಿಳೆಯರಿಗೂ ಕರೆ ಹಾಗೂ ವಿಡಿಯೋ ಕಾಲ್ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದೀಗ ಪ್ರಜ್ವಲ್ ಮಾಡಿರುವ ಎಲ್ಲ ಕರೆಗಳ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದು, ಕರೆ ಸ್ವೀಕರಿಸಿದವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 am, Sat, 12 September 26

Follow Us