ಬೆಂಗಳೂರು, ಸೆ.21: MLA ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಚೈತ್ರಾ ಕುಂದಾಪುರ(Chaitra Kundapura) ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀಯನ್ನು ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಸದ್ಯ ಅರೆಸ್ಟ್ ಆಗುತ್ತಿದ್ದಂತೆ ಹಾಲಶ್ರೀ(Abhinava Halashree) ಆಶ್ರಮದಲ್ಲಿ 56 ಲಕ್ಷ ಹಣ ಪತ್ತೆಯಾಗಿದೆ. ಕಳೆದ ರಾತ್ರಿ ವಿಜಯನಗರ ಜಿಲ್ಲೆಯ ಶ್ರೀಗಳ ಮಠದಲ್ಲಿ 56 ಲಕ್ಷ ರೂಪಾಯಿ ಹಣವನ್ನು ಸಿಸಿಬಿ ವಶಪಡಿಸಿಕೊಂಡಿದೆ. ಪ್ರಣವ್ ಪ್ರಸಾದ್ ಎಂಬ ವ್ಯಕ್ತಿ ಡಿಸಿಪಿ ಅಬ್ದುಲ್ ಅಹದ್ ಅವರಿಗೆ ಪತ್ರ ಬರೆದು ಹಣದ ಬಗ್ಗೆ ಸುಳಿವು ನೀಡಿದರು. ಡಿಸಿಪಿಗೆ ಪತ್ರ ಸಿಗುತ್ತಿದ್ದಂತೆ ಆಶ್ರಮಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ.
ಮೈಸೂರಿನ ನಿವಾಸಿ ಪ್ರಣವ್ ಪ್ರಸಾದ್, ಬುಧವಾರ ಸಂಜೆ ವಿಡಿಯೋ ಮಾಡಿ, ತಾನು 56 ಲಕ್ಷ ರೂಪಾಯಿ ಹಣವನ್ನು ಅಭಿನವ ಹಾಲಶ್ರೀ ಅವರ ಆಶ್ರಮದಲ್ಲಿ ಇಟ್ಟಿರುವುದಾಗಿ ಹಾಗೂ ಅದು ಶ್ರೀಗಳಿಗೆ ಸೇರಿದ ಹಣ ಎಂದು ಸತ್ಯ ಬಯಲು ಮಾಡಿದ್ದರು. ಇನ್ನು ವಿಡಿಯೋದಲ್ಲಿ ಪ್ರಣವ್, ಕಳೆದ ವಾರ ಶ್ರೀಗಳ ಡ್ರೈವರ್ ರಾಜು ಮೈಸೂರಿನ ಕಚೇರಿಗೆ ಬಂದು 60 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ಅನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಕೇಳಿದ್ದನಂತೆ. ವಕೀಲರ ಶುಲ್ಕ ಪಾವತಿಸುವುದಾಗಿ ಹೇಳಿ ಚಾಲಕನು ಬ್ಯಾಗ್‌ನಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಉಳಿದ ಹಣವನ್ನು ಕಚೇರಿಯಲ್ಲಿಡುವಂತೆ ಪ್ರಣವ್ಗೆ ಹೇಳಿ ಹಣದ ಬ್ಯಾಂಗ್ ನೀಡಿದ್ದರಂತೆ. ಆದರೆ ಹಣವನ್ನು ವಾಪಾಸ್ ತೆಗೆದುಕೊಂಡು ಹೋಗಲು ಶ್ರೀ ಕಡೆಯವರು ಯಾರು ಬರದ ಕಾರಣ ಹಣವನ್ನು ಆಶ್ರಮದಲ್ಲಿಟ್ಟಿದ್ದೆ ಎಂದು ವಿಡಿಯೋದಲ್ಲಿ ಪ್ರಣವ್ ತಿಳಿಸಿದ್ದಾರೆ.
ಸಿಸಿಬಿ ಅಧಿಕಾರಿಗಳ ತಂಡ ಅಭಿನವ ಹಾಲಶ್ರೀ ಮಠಕ್ಕೆ ಭೇಟಿ ನೀಡಿ 56 ಲಕ್ಷ ರೂ. ವಶಕ್ಕೆ ಪಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ದೂರುದಾರ ಗೋವಿಂದ್ ಬಾಬು ಪೂಜಾರಿ ನೀಡಿದ ಹಣವೇ ಈ ಹಣ ಎನ್ನಲಾಗಿದೆ. 5 ಕೋಟಿ ಹಣದ ಪೈಕಿ ಒಂದೂವರೆ ಕೋಟಿ ರೂ.ಗಳನ್ನು ಹಾಲಶ್ರೀಗಳಿಗೆ ನೀಡಿರುವುದಾಗಿ ಗೋವಿಂದ ಪೂಜಾರಿ ಹೇಳಿಕೊಂಡಿದ್ದರು. ಈ ಪೈಕಿ 56 ಲಕ್ಷ ಹಣ ಪತ್ತೆಯಾಗಿದೆ.
ಮತ್ತೊಂದೆಡೆ ಶ್ರೀಗಳ ಅಕೌಂಟ್ನಲ್ಲಿರುವ ಹಣ ಹಾಗು ಇತರ ಮಾಹಿತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹಾಲಶ್ರೀಗೆ ಒಂದು ಕೋಟಿ ಐವತ್ತು ಲಕ್ಷ ಹಣ ನೀಡಲಾಗಿತ್ತು. ಈ ಪೈಕಿ ಐವತ್ತು ಲಕ್ಷ ಹಣ ವಾಪಸ್ಸು ನೀಡಿದ್ದರು. ಈಗ ಐವತ್ತಾರು ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಉಳಿದ 44 ಲಕ್ಷ ಹಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ಪೈಕಿ 21 ಲಕ್ಷ ಹಣ ನೀಡಿ ಮೂವತ್ತಾರು ಎಕ್ಕರೆ ಜಮೀನು ಲೀಜ್ ಗೆ ಪಡೆದಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ನಿನ್ನೆ ದಾಖಲಾತಿ ಪರಿಶೀಲನೆ ವೇಳೆ ಲೀಸ್ ಪಡೆದಿರುವುದು ಪತ್ತೆಯಾಗಿತ್ತು. ಉಳಿದ ಹಣವನ್ನು ಬೇರೆಯವರ ಮೂಲಕ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸಂಪೂರ್ಣ ಹಣವನ್ನು ವಾಪಸ್ಸು ನೀಡುವುದಾಗಿ ಹಾಲಶ್ರೀ ಒಪ್ಪಿಕೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ