ಬೆಂಗಳೂರು: ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆ ಆರ್‌ಟಿಒ (RTO) ಚೆಕ್‌ಪೋಸ್ಟ್ (Check Post) ಮೇಲೆ ಇಂದು ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚೆಕ್ಪೋಸ್ಟ್ನಲ್ಲಿ ಅವ್ಯಾಹತವಾಗಿ ಲಂಚ ಪಡೆಯುತ್ತಿದ್ದ ಆರೋಪ ಹಿನ್ನೆಲೆ ಮೈಸೂರು ಮತ್ತು ಚಾಮರಾಜನಗರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸ್ಪಿ, ಇಬ್ಬರು ಡಿವೈಎಸ್ಪಿ, ಮೂವರು ಇನ್ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ಮಾಡಿದ್ದು, ದಾಳಿ ವೇಳೆ 94,950 ರೂಪಾಯಿ ಪತ್ತೆಯಾಗಿದೆ. ಇದರಲ್ಲಿ 7,999 ರೂಪಾಯಿಗೆ ಯಾವುದೇ ರಶೀದಿ ಹಾಕದೆ ಸಂಗ್ರಹಿಸಿದ್ದರು.
ನಂಗಲಿ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ದಾಳಿ ವೇಳೆ 75 ಸಾವಿರ ನಗದು, ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಚೆಕ್ಪೋಸ್ಟ್ನಲ್ಲಿ ಸತತ 7 ಗಂಟೆ ತಪಾಸಣೆ ಮಾಡಿದ್ದಾರೆ. ಹಾಗೇ ಕಲಬುರಗಿ ಜಿಲ್ಲೆ ವ್ಯಾಪ್ತಿಯ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.
ಸಾರಿಗೆ ಇಲಾಖೆಯ ಚೆಕ್ಪೋಸ್ಟ್ಗಳಲ್ಲಿ ಲಕ್ಷ ಲಕ್ಷ ಹಣ ಜಪ್ತಿ
ರಾಜ್ಯದ ವಿವಿಧ ಚೆಕ್ಪೋಸ್ಟ್ಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಲಕ್ಷ ಲಕ್ಷ ಹಣ ಜಪ್ತಿ ಮಾಡಿದೆ. ದಾಳಿಯಲ್ಲಿ ಲೋಕಾಯುಕ್ತ ಮಹತ್ವದ ದಾಖಲೆ, ಹಣ ಜಪ್ತಿ ಮಾಡಿಕೊಂಡಿದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ವಿಜಯಪುರ ಧೂಳ್ಖೇಡ್ ಚೆಕ್ಪೋಸ್ಟ್ನಲ್ಲಿ 4 ಲಕ್ಷ 53 ಸಾವಿರ ಹಣ ಜಪ್ತಿ
ವಿಜಯಪುರ ಧೂಳ್ಖೇಡ್ ಚೆಕ್ಪೋಸ್ಟ್ನಲ್ಲಿ ಲಕ್ಷ ಲಕ್ಷ ಹಣ ಜಪ್ತಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ್ ನೇತೃತ್ವದ ದಾಳಿ ನಡೆದಿದ್ದು, ದಾಳಿ ವೇಳೆ 4 ಲಕ್ಷ 53 ಸಾವಿರ ಅಕ್ರಮ ಹಣ ಜಪ್ತಿ ಮಾಡಿಕೊಳ್ಳಲಾಗಿದೆ.
ಬೆಳಗಾವಿಯ ಕೊಂಗನಹಳ್ಳಿ ಚೆಕ್ಪೋಸ್ಟ್ನಲ್ಲಿ 3 ಲಕ್ಷ 62 ಸಾವಿರ ಹಣ ಜಪ್ತಿ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಂಗನಹಳ್ಳಿ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಎಸ್ಪಿ ಜೆ. ರಘು ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ 3 ಲಕ್ಷ 62 ಸಾವಿರ ಹಣ ಜಪ್ತಿ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಅತ್ತಿಬೆಲೆ ಚೆಕ್ಪೋಸ್ಟ್ನಲ್ಲಿ 62,227 ಹಣ ಜಪ್ತಿ
ಬೆಂಗಳೂರು ಗ್ರಾಮಾಂತರ ಅತ್ತಿಬೆಲೆ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಜೋಶಿ ಶೀನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ 62,227 ಹಣ ಜಪ್ತಿ ಮಾಡಿ, ಮುಂದಿನ ಕ್ರಮಕ್ಕೆ ಆದೇಶಿಸಲಾಗಿದೆ. ವಾಹನ ನಿರೀಕ್ಷಕಿ ಲಕ್ಷ್ಮಿ ಕಿಟಕಿಯಿಂದ 14 ಸಾವಿರ ಹಣ ಎಸೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಬೀದರ್ ಬೋಲ್ಕೆರೆ ಚೆಕ್ಪೋಸ್ಟ್ನಲ್ಲಿ 1,54,536 ಹಣ ಜಪ್ತಿ
ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಬೋಲ್ಕೆರೆ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೋಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು, 1,54,536 ಅಕ್ರಮ ಹಣ ಜಪ್ತಿ ಮಾಡಲಾಗಿದೆ.
ಬಳ್ಳಾರಿ ಗೋದಾಳ್ ಚೆಕ್ಪೋಸ್ಟ್ನಲ್ಲಿ 54,900 ರೂ. ಹಣ ಪತ್ತೆ
ಬಳ್ಳಾರಿ ತಾಲೂಕಿನ ಹಗರಿ ಬಳಿಯಿರುವ ಗೋದಾಳ್ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಪಿ.ಎ.ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಚೆಕ್ಪೋಸ್ಟ್ನಲ್ಲಿ 54,900 ರೂ. ಅಕ್ರಮ ಹಣ ಪತ್ತೆಯಾಗಿದೆ.
ಪರ್ಮಿಟ್ ಹಾಗೂ ಟ್ಯಾಕ್ಸ್ ಇಲ್ಲದೇ ಓಡಾಡುತ್ತಿರುವ ಬಸ್ಗಳ ಮೇಲೂ ದಾಳಿ
ತುಮಕೂರು: ದಸರಾ ಹಬ್ಬ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮೇಲೆ ಆರ್ಟಿಓ ಅಧಿಕಾರಿಗಳ ದಾಳಿ ಮಾಡಿದ್ದು, ಬೆಂಗಳೂರು ಹಾಗೂ ಹೊಸದುರ್ಗಕ್ಕೆ ಓಡಾಡುತ್ತಿದ್ದ Ka41 c8898 ಹಾಗೂ ka41 c 8903 ನಂಬರ್ನ ಎರಡು ಖಾಸಗಿ ಬಸ್ ವಶಕ್ಕೆ ಪಡೆದಿದ್ದಾರೆ. ತುಮಕೂರು ಆರ್ಟಿಓ ಇನ್ಸಪೇಕ್ಟರ್ ಷರೀಪ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಸರಾ ಹಬ್ಬಕ್ಕೆ ಹೆಚ್ಚಿನ ಶುಲ್ಕ ಪಡೆಯುತ್ತಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಪರ್ಮಿಟ್ ಹಾಗೂ ಟ್ಯಾಕ್ಸ್ ಇಲ್ಲದೇ ಓಡಾಡುತ್ತಿರುವ ಬಸ್ಗಳ ಮೇಲೂ ದಾಳಿ ಮಾಡಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಓಡಿಸಲು ಪರ್ಮಿಟ್ ಇರುವ ಬಸ್ಗಳು, ಆದರೆ ಬೆಂಗಳೂರಿನಿಂದ ಹೊಸದುರ್ಗ ನಡುವೆ ಬಸ್ಗಳು ಓಡಾಟ ಮಾಡುತ್ತಿದ್ದವು. ಬೆಂಗಳೂರಿನಲ್ಲಿ ಫ್ಯಾಕ್ಟರಿಗಳಿಗೆ ಓಡಾಡಲು ಬಳಸುವ ಬಸ್ನಲ್ಲಿ ಪ್ರಯಾಣಿಕರಿದ್ದ ಕಾರಣ ದಾಳಿ ಮಾಡಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ನಂಗಲಿ ಆರ್.ಟಿ.ಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದ ತಂಡ ದಾಳಿ ಮಾಡಿದೆ. ಗಡಿ ಭಾಗದಲ್ಲಿ ವಾಹನಗಳಿಂದ ಹಣ ವಸೂಲಿ ಆರೋಪ ಹಿನ್ನೆಲೆ ದಾಳಿ ಮಾಡಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Fri, 30 September 22