ಬೆಂಗಳೂರು: ನಗರದಲ್ಲಿ ಗಣೇಶೋತ್ಸವ ನಡೆಸಲು (Bengaluru Ganeshotsav) ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಯ ಕುರಿತು ವರದಿ ನೀಡುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Police Commissioner Pratap Reddy) ಗಡುವು ನೀಡಿದ್ದಾರೆ. ಈ ಗಡುವು ನಾಳೆಗೆ (ಆಗಸ್ಟ್ 25) ಅಂತ್ಯಗೊಳ್ಳಲಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿಯಲ್ಲಿ ಉಲ್ಲೇಖಿಸಬೇಕು ಎಂದು ಕಮಿಷನರ್ ಸೂಚಿಸಿದ್ದಾರೆ. ಚಾಮರಾಜಪೇಟೆ ಮೈದಾನದ ಗಣೇಶೋತ್ಸವ ವಿಚಾರವು ಈಗಾಗಲೇ ಸಾಕಷ್ಟು ವಿವಾದಕ್ಕೀಡಾಗಿದೆ. ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಕೆಲವರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ಮತ್ತು ನಾಗರಿಕ ಒಕ್ಕೂಟಗಳು ತಮಗೇ ವಿನಾಯಕ ಚತುರ್ಥಿ ಆಚರಣೆಗೆ ಅವಕಾಶ ನೀಡಬೇಕು ಎಂದು ಸಂಘರ್ಷಕ್ಕಿಳಿದಿವೆ.
ಗಣೇಶೋತ್ಸವದ ಜೊತೆಗೆ ಸಾರ್ವಕರ್ ಪೋಟೊ ವಿಚಾರವೂ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಬೆಂಗಳೂರು ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಉತ್ಸವದ ವೇಳೆ ಭದ್ರತಾ ಲೋಪ ಕಂಡು ಬರದಂತೆ ಎಚ್ಚರ ವಹಿಸಲು ಕಮಿಷನರ್ ಪ್ರತಾಪ್ ರೆಡ್ಡಿ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2019ರಲ್ಲಿ 2450 ಸ್ಥಳಗಳಲ್ಲಿ ಗಣೇಶೋತ್ಸವ ನಡೆದಿತ್ತು. ಈ ಬಾರಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಎಷ್ಟು ಸ್ಥಳಗಳಲ್ಲಿ ಗಣೇಶ ಉತ್ಸವ ಮಾಡಲಾಗುತ್ತದೆ? ಆ ಸ್ಥಳಗಳಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳು ಎಷ್ಟು ಇರುತ್ತವೆ ಎನ್ನುವ ವಿವರಗಳ ಸಹಿತ ಉತ್ಸವದ ನೀಲ ನಕಾಶೆ ರಚಿಸಿ ಆಗಸ್ಟ್ 25ರ ಒಳಗೆ ವರದಿ ನೀಡಬೇಕು ಎಂದು ಕಮೀಷನರ್ ಕಚೇರಿ ಸೂಚನೆ ನೀಡಿದೆ. ನಗರ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಆಯುಕ್ತರು ವಿಸ್ತೃತ ವರದಿ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದರು.
ಒಕ್ಕೂಟದಲ್ಲಿ ಬಿರುಕು
ಚಾಮರಾಜಪೇಟೆ ಗಣೇಶೋತ್ಸವ ಗದ್ದಲದಲ್ಲಿ ಶಾಸಕ ಜಮೀರ್ ಹೆಸರು ಮತ್ತೆಮತ್ತೆ ಪ್ರಸ್ತಾಪವಾಗುತ್ತಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಮಧ್ಯೆ ಇದೇ ಕಾರಣಕ್ಕೆ ಬಿರುಕು ಮೂಡಿದೆ. ಒಕ್ಕೂಟದ ಅಧ್ಯಕ್ಷ ರಾಮೇಗೌಡ ಮತ್ತು ಕಾರ್ಯದರ್ಶಿ ರುಕ್ಮಾಂಗದ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ. ಶಾಸಕ ಜಮೀರ್ ಹಾಗೂ ಅಲ್ತಾಫ್ ಕಡೆಯವರಾದ ರಾಮೇಗೌಡರು ನಮ್ಮ ಹೋರಾಟ ಆರಂಭವಾದ ಮೇಲೆ ಒಕ್ಕೂಟಕ್ಕೆ ಬಂದರು. ಈಗ ಒಂದಲ್ಲ ಒಂದು ರಾಜಕೀಯ ಮಾಡುತ್ತಿದ್ದಾರೆ. ಜಮೀರ್, ಅಲ್ತಾಪ್ ಮನೆಗೆಳಿಗೆ ಇವರು ಹೋಗಿದ್ದಾರೆ ಎಂದು ಒಕ್ಕೂಟದ ಕಾರ್ಯದರ್ಶಿ ರುಕ್ಮಾಂಗದ ಕಿಡಿಕಾರಿದ್ದಾರೆ.
ರುಕ್ಮಾಂಗದ ಮಾಡಿರುವ ಆರೋಪಗಳನ್ನು ಒಕ್ಕೂಟದ ಅಧ್ಯಕ್ಷ ರಾಮೇಗೌಡ ತಳ್ಳಿಹಾಕಿದ್ದಾರೆ. ನಾನು ಜಮೀರ್ ಜೊತೆ ಶಾಮೀಲಾಗಿಲ್ಲ. ಕಾಂಗ್ರೆಸ್ ಪಕ್ಷದಿಂದ ನಾನು ಡೆಪ್ಯುಟಿ ಮೇಯರ್ ಆಗಿದ್ದವನು. ಜಮೀರ್ ಸಹ ಕಾಂಗ್ರೆಸ್ನವರೇ. ಆದರೆ ಮೈದಾನದ ಹೋರಾಟಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದರು. ಯಾವ ಆಧಾರದ ಮೇಲೆ ರುಕ್ಮಾಂಗದ ನನ್ನ ವಿರುದ್ಧ ಆರೋಪ ಮಾಡ್ತಾರೆ? ರುಕ್ಮಾಂಗದ ಅವರೇ ನನ್ನ ಫೋನ್ ರಿಸೀವ್ ಮಾಡೊಲ್ಲ. ಅವರೇ ಜಮೀರ್ ಜೊತೆ ಶಾಮೀಲಾಗಿದ್ದಾರೆ. ಮೊದಲಿಂದಲೂ ನಾವು ಹೋರಾಟ ಮಾಡುತ್ತಿದ್ದವರು. ಈಗ ಬೇರೆಯವರ ಜೊತೆ ರುಕ್ಮಾಂಗದ ಸೇರಿಕೊಂಡಿದ್ದಾರೆ. ಒಕ್ಕೂಟದ ಸದಸ್ಯರ ಸಭೆ ನಡೆಸಿ ರುಕ್ಮಾಂಗದ ಅವರನ್ನು ಉಚ್ಚಾಟಿಸುತ್ತೇವೆ ಎಂದು ಎಚ್ಚರಿಸಿದರು.
ಪೊಲೀಸ್ ಇಲಾಖೆಗೆ ಬಿಸಿತುಪ್ಪವಾದ ಗಣೇಶೋತ್ಸವ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯ ನಿರ್ವಹಣೆಯು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಬಿಸಿತುಪ್ಪವಾಗಿದೆ. ಪೊಲೀಸ್ ಇಲಾಖೆಯು ಗಣೇಶೋತ್ಸವದ ಸಾಧಕ-ಬಾಧಕ ಕುರಿತಂತೆ ಚರ್ಚೆ ನಡೆಸುತ್ತಿದೆ. ಚಾಮರಾಜಪೇಟೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದರೆ ವಿವಾದದ ಪರಿಣಾಮಗಳು ಇಡೀ ರಾಜ್ಯಕ್ಕೆ ಹರಡುವ ಸಾಧ್ಯತೆಯಿದೆ. ಪ್ರತಿ ವಿವಾದಿತ ಜಾಗದಲ್ಲೂ ಉತ್ಸವಕ್ಕೆ ಅನುಮತಿ ಕೇಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ ಎಂದು ಪೊಲೀಸ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಗಣೇಶೋತ್ಸವ ಸಂಬಂಧ ಮಾಹಿತಿ ಕಲೆಹಾಕಲು ವಿವಿಧ ಠಾಣೆಗಳ ಸಬ್ಇನ್ಸ್ಪೆಕ್ಟರ್ಗಳಿಗೆ ಉನ್ನತ ಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುತ್ತಿರುವವರು ಯಾರು? ಎಲ್ಲಿ ಆಚರಣೆ ಮಾಡುತ್ತಿದ್ದಾರೆ? ಬಿಬಿಎಂಪಿಯಿಂದ ಅನುಮತಿ ಸಿಕ್ಕಿದೆಯೇ? ಸ್ಥಳ ಖಾಸಗಿಯವರಿಗೆ ಸೇರಿದ್ದೆ ಅಥವಾ ಬಿಬಿಎಂಪಿ ಜಾಗನಾ? ರಸ್ತೆನಾ? ಏನೆಲ್ಲಾ ವ್ಯವಸ್ಥೆ ಮಾಡಿದ್ದಾರೆ? ಗಣೇಶನನ್ನು ಕೂರಿಸುವ ಸ್ಥಳದಲ್ಲಿ ಯಾವುದಾದರೂ ವಿವಾದಗಳಿವೆಯೇ? ಗಣೇಶೋತ್ಸವಕ್ಕೆ ಎಷ್ಟು ಜನ ಸೇರಬಹುದು? ಸ್ಥಳಾವಕಾಶ ಹೇಗಿದೆ? ಮೈಕ್ ಸೆಟ್, ಆರ್ಕೆಸ್ಟ್ರಾ ಬಳಕೆ ಮಾಡ್ತಾರಾ? ಹೀಗೆ ಹಲವು ಮಾಹಿತಿಗಳನನ್ನು ಕಲೆ ಹಾಕಲು ಠಾಣಾವಾರು ಇನ್ಸ್‌ಪೆಕ್ಟರ್ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ.