ಚಂದ್ರಯಾನ-3 ಯಶಸ್ವಿ: ಇಸ್ರೋ ಅಧ್ಯಕ್ಷ ಸೋಮನಾಥ್​​​ರನ್ನು ಸನ್ಮಾನಿಸಿದ ಆರ್​ಎಸ್​ಎಸ್​​​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

|

Updated on: Aug 25, 2023 | 10:58 PM

ಚಂದ್ರಯಾನ-3 ಯಶಸ್ವಿಯಾಗಿ ಮುನ್ನಡೆಸಿದ ಇಸ್ರೋ ಅಧ್ಯಕ್ಷ ಡಾ ಎಸ್​ ಸೋಮನಾಥ್ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇಂದು ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಅಭಿನಂದಿಸಿದ್ದಾರೆ.

ಚಂದ್ರಯಾನ-3 ಯಶಸ್ವಿ: ಇಸ್ರೋ ಅಧ್ಯಕ್ಷ ಸೋಮನಾಥ್​​​ರನ್ನು ಸನ್ಮಾನಿಸಿದ ಆರ್​ಎಸ್​ಎಸ್​​​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ
ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತು ಆರ್​ಎಸ್​ಎಸ್​​​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯೊಂದಿಗೆ ಇತರರು
Follow us on

ಬೆಂಗಳೂರು, ಆಗಸ್ಟ್​ 25: ಚಂದ್ರಯಾನ-3 (Chandrayaan-3) ಯಶಸ್ಸಿಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ. ವಿಜ್ಞಾನಿಗಳ ಸಾಧನೆಗೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಕ್ಷಿಣ ಆಫ್ರಿಕಾ, ಗ್ರೀಕ್ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ನಾಳೆ ಬೆಂಗಳೂರಿನ ಇಸ್ರೋ ಸೆಂಟರ್‌ಗೆ ಆಗಮಿಸುತ್ತಿದ್ದು, ಸಾಧನೆ ಮಾಡಿದ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಸದ್ಯ ಇವೆಲ್ಲದರ ಮಧ್ಯೆ ಚಂದ್ರಯಾನ-3 ಯಶಸ್ವಿಯಾಗಿ ಮುನ್ನಡೆಸಿದ ಇಸ್ರೋ ಅಧ್ಯಕ್ಷ ಡಾ ಎಸ್​ ಸೋಮನಾಥ್ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅಭಿನಂದಿಸಿದ್ದಾರೆ.

ಈ ಕುರಿತಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರ್​ ಅವರು ತಮ್ಮ ಟ್ವಿಟರ್​ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಇಸ್ರೋ ಅಧ್ಯಕ್ಷ ಡಾ ಎಸ್​ ಸೋಮನಾಥ್ ಅವರನ್ನು ದತ್ತಾತ್ರೇಯ ಹೊಸಬಾಳೆ ಸನ್ಮಾನಿಸಿದ್ದಾರೆ.

ನಾಳೆ ಬೆಂಗಳೂರಿನ ಇಸ್ರೋ ಸೆಂಟರ್‌ಗೆ ಪ್ರಧಾನಿ ಮೋದಿ ಆಗಮನ

​ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಗೆ HAL ಏರ್‌ಪೋರ್ಟ್‌ಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ, 6.30ಕ್ಕೆ ಏರ್‌ಪೋರ್ಟ್‌ನಿಂದ ನಿರ್ಗಮಿಸಲಿದ್ದಾರೆ. HAL ಏರ್‌ಪೋರ್ಟ್‌ನಿಂದ ಓಲ್ಡ್‌ ಮದ್ರಾಸ್‌ ರೋಡ್ ಮಾರ್ಗವಾಗಿ ಟ್ರಿನಿಟಿ ಸರ್ಕಲ್‌ ತಲುಪಲಿದ್ದಾರೆ.

ಅಲ್ಲಿಂದ ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಬಳ್ಳಾರಿ ರಸ್ತೆ, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್ ರಸ್ತೆಯ ಮಾರ್ಗವಾಗಿ ಯಶವಂತಪುರ ತಲುಪಲಿದ್ದಾರೆ. ಅಲ್ಲಿಂದ ತುಮಕೂರು ರಸ್ತೆಯ ಮಾರ್ಗವಾಗಿ ಗೊರಗೊಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಪೀಣ್ಯ ಇಸ್ರೋಗೆ ತಲುಪಲಿದ್ದಾರೆ.

ಇದನ್ನೂ ಓದಿ: ನಾಳೆ ಬೆಂಗಳೂರಿನ ಇಸ್ರೋ ಸೆಂಟರ್‌ಗೆ ಪ್ರಧಾನಿ ಮೋದಿ: ರೂಟ್ ಮ್ಯಾಪ್ ಹೀಗಿದೆ

ರೋಡ್‌ ಶೋ ಇಲ್ಲದಿದ್ದರೂ ಹೆಚ್‌ಎಎಲ್ ಏರ್‌ಪೋರ್ಟ್ ಮತ್ತು ಜಾಲಹಳ್ಳಿ ಕ್ರಾಸ್‌ನಲ್ಲಿ ಮೋದಿ ಸ್ವಾಗತಿಸಲು ರಾಜ್ಯ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಏರ್‌ಪೋರ್ಟ್‌ನಲ್ಲಿ 4ರಿಂದ 5 ಸಾವಿರ ಕಾರ್ಯಕರ್ತರನ್ನ ಸೇರಿಸಿ ಸ್ವಾಗತಿಸಲು ಪ್ಲ್ಯಾನ್ ಮಾಡಲಾಗಿದೆ. ಏರ್‌ಪೋರ್ಟ್‌ನ ಹೊರಗೆ ಸಣ್ಣ ವೇದಿಕೆ ನಿರ್ಮಾಣ ಮಾಡಲಾಗಿದ್ದು, 2 ರಿಂದ 3 ನಿಮಿಷ ಮೋದಿ ಭಾಷಣ ಮಾಡುವ ನಿರೀಕ್ಷೆಯನ್ನ ಬಿಜೆಪಿಗರು ಇಟ್ಟುಕೊಂಡಿದ್ದಾರೆ.

ಇದಾದ ಬಳಿಕ ಜಾಲಹಳ್ಳಿ ಕ್ರಾಸ್‌ನಲ್ಲಿ ಎರಡನೇ ಬಾರಿಗೆ ಸ್ವಾಗತಕ್ಕೆ ಬಿಜೆಪಿ ಪ್ಲ್ಯಾನ್ ಮಾಡಿದ್ದು, 350 ಮೀಟರ್ ಕಾರ್ಯಕರ್ತರನ್ನ ನಿಲ್ಲಿಸಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಜಾಲಹಳ್ಳಿ ಕ್ರಾಸ್‌ನಲ್ಲಿ ಕಾರಿನಿಂದಲೇ ಮೋದಿ ಕಾರ್ಯಕರ್ತರತ್ತ ಕೈ ಬೀಸೋ ನಿರೀಕ್ಷೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:49 pm, Fri, 25 August 23