ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕಂಡ ಕನಸು. ‘3ನೇ ಸಿಎಂ’ ಆಗುತ್ತಾರೆಂಬ ಕಾಂಗ್ರೆಸ್ ಟ್ವೀಟ್‌ಗೆ ಸಚಿವ ಡಾ.ಕೆ.ಸುಧಾಕರ್(Dr K Sudhakar) ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಚೀಫ್ ಮಿನಿಸ್ಟರ್ ಅಂದ್ರೆ ಚೀಟಿ ಮಿನಿಸ್ಟರ್. ಚೀಟಿ ಆಧಾರದ ಮೇಲೆ CM ಬದಲಾಯಿಸಿದ ಖ್ಯಾತಿ ಕಾಂಗ್ರೆಸ್ಸಿಗಿದೆ ಎಂದು ಕಾಂಗ್ರೆಸ್‌ಗೆ ಟ್ವೀಟ್ ಮೂಲಕ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.
ಬಸವರಾಜ ಬೊಮ್ಮಾಯಿ ದಕ್ಷ ನಾಯಕತ್ವದಲ್ಲಿ BJP ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್‌ನ ಡಬಲ್ ಡೋರ್ ಬಸ್ಸಿನಿಂದ ಯಾರನ್ನು ಕೆಳಗಿಳಿಸ್ತಾರೆ. ಯಾರು, ಯಾರನ್ನು ಕೆಳಗಿಳಿಸುತ್ತಾರೆಂದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಬೆಳವಣಿಗೆಗಳ ಕುರಿತು ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಬಂದುಹೋದ ಬಳಿಕ ಮೋಡ ಕವಿದ ವಾತಾವರಣ: 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವುದು ಸನ್ನಿಹಿತ, ಕಾಂಗ್ರೆಸ್ ವ್ಯಂಗ್ಯ
ಗಾಜಿನ ಮನೆಯಲ್ಲಿ ನಿಂತು ಅನ್ಯರತ್ತ ಕಲ್ಲು ತೂರುತ್ತಿರುವ ಕಾಂಗ್ರೆಸಿಗರ ಮನಃಸ್ಥಿತಿಯ ಬಗ್ಗೆ ಅಯ್ಯೋ ಎನ್ನಿಸುತ್ತಿದೆ.
ದಿಲ್ಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ನಿಮ್ಮ ಪಕ್ಷಕ್ಕೆ ಮಾತ್ರ ಇದೆ.
— Dr Sudhakar K (@mla_sudhakar) August 9, 2022
ಇನ್ನು ಮತ್ತೊಂದು ಕಡೆ ಬೊಮ್ಮಾಯಿ ಕುರ್ಚಿ ಭದ್ರ ಅಂತಾ ಸಮರ್ಥಿಸಿ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಸಿಎಂ ಸ್ಥಾನದ ಘನತೆ ಗೌರವಗಳನ್ನು ಹಾಳುಗೆಡವಿದ್ದೇ ಕಾಂಗ್ರೆಸ್. ಕಾಂಗ್ರೆಸ್ ವರಿಷ್ಠರ ಮನೆ ಗೇಟ್‌ಕೀಪರ್‌ಗಳಂತೆ ಸಿಎಂಗಳ ವರ್ತನೆ ಇರುತ್ತೆ. ಗೇಟ್‌ಕೀಪರ್‌ಗಳ ರೀತಿ ಕಾಂಗ್ರೆಸ್ CMಗಳು ವರ್ತಿಸಿದ್ದು ಇತಿಹಾಸ ಎಂದು ಕಾಂಗ್ರೆಸ್ ಆಳ್ವಿಕೆಯ ಸಿಎಂಗಳ ಪರಿಸ್ಥಿತಿ ಬಗ್ಗೆ ಸುಧಾಕರ್ ವ್ಯಂಗ್ಯವಾಡಿದ್ದಾರೆ. ಸಿಎಂ ಗಾದಿ ಕನಸು ಕಾಣುತ್ತಿರುವ ರಾಜ್ಯದ ಇಬ್ಬರು ನಾಯಕರು ಈಗಾಗಲೇ ಗಾಂಧಿ ಕುಟುಂಬದ ಗೇಟ್ ಕಾಯ್ತಿರುವುದು ಗೊತ್ತಿದೆ ಎಂದು ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಡಾ.ಕೆ.ಸುಧಾಕರ್ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.
ದೇವರಾಜ್ ಅರಸು ಅವರು ಇನ್ನೂ ಅಧಿಕಾರದಲ್ಲಿದ್ದಾಗಲೇ ಗುಂಡಾರಾವ್ ಅವರನ್ನು ದೆಹಲಿಗೆ ಕರೆಸಿಕೊಂಡು ನೀವೇ ಸಿಎಂ ಎಂದಿದ್ದರು ಇಂದಿರಾ ಗಾಂಧಿ ಅವರು. ಶರ್ಟು ಬದಲಾಯಿಸುವಷ್ಟೇ ವೇಗವಾಗಿ ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು ರಾಜೀವ್ ಗಾಂಧಿ ಅವರು. ಕರ್ನಾಟಕ ಕಂಡಂತಹ ಧೀಮಂತ, ಜನಪ್ರಿಯ ನಾಯಕರುಗಳಾದ ನಿಜಲಿಂಗಪ್ಪ, ದೇವರಾಜು ಅರಸು, ವೀರೇಂದ್ರ ಪಾಟೀಲ, ಎಸ್.ಬಂಗಾರಪ್ಪ ಮುಂತಾದವರನ್ನ ಕಾಂಗ್ರೆಸ್ ಹೈಕಮಾಂಡ್ ಹೇಗೆ ನಡೆಸಿಕೊಂಡಿದೆ ಎಂದು ಜನ ಮರೆತಿಲ್ಲ.
ನಮ್ಮ ರಾಜ್ಯ ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮುಂತಾದ ಅನೇಕ ಪ್ರಭಾವಿ ನಾಯಕರು ಕಾಂಗ್ರೆಸ್ ಪಕ್ಷ ತೊರೆಯಲು ಕಾರಣ ನಿಮ್ಮ ಹೈಕಮಾಂಡ್ ಸಂಸ್ಕೃತಿ ಅಲ್ಲದೆ ಇನ್ನೇನು? ಸ್ವಪಕ್ಷದವರನ್ನು ಬಿಡಿ ತಮ್ಮ ತಾಳಕ್ಕೆ ಕುಣಿಯದ ಬೇರೆ ಪಕ್ಷದ ಮುಖ್ಯಮಂತ್ರಿಗಳನ್ನೂ ಸಹಿಸಿದ ಕಾಂಗ್ರೆಸ್ ಹೈಕಮಾಂಡ್ ಸಂವಿಧಾನದ 356ನೇ ವಿಧಿಯನ್ನು ಬರೋಬ್ಬರಿ 93 ಬಾರಿ ದುರುಪಯೋಗ ಮಾಡಿ ಸರ್ಕಾರಗಳನ್ನು ಉರುಳಿಸಿರುವುದು ಕರಾಳ ಸತ್ಯ. ಇಂತಹ ಹೈಕಮಾಂಡ್ ಎಂಬ ವಿಕೃತಿಯ ಸೃಷ್ಟಿಕರ್ತರಾದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ ಎಂದು ಟ್ವೀಟ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:20 pm, Tue, 9 August 22