ಜನರು ಪ್ರಕೃತಿ ಸೌಂದರ್ಯವನ್ನು ಅರಸಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿರುವವರು ವಾರಾಂತ್ಯದಲ್ಲಿ ಹಲವು ಪ್ರದೇಶಗಳಿಗೆ ತೆರಳುತ್ತಾರೆ. ಆದರೆ ಈ ವಸಂತಕಾಲದಲ್ಲಿ ಬೆಂಗಳೂರು ನಗರ ಅಕ್ಷರಶಃ ಸ್ವರ್ಗವೇ ಆಗಿದೆ. ಹೌದು. ಉದ್ಯಾನ ನಗರಿಯ ಮರಗಿಡಗಳಿಗೆ ಈಗ ವಸಂತದ ಸಂಭ್ರಮ. ಹೂವನ್ನು ಹೊದ್ದು ನಿಂತಿರುವ ಮರಗಳು ಬೆಂಗಳೂರಿನ ಬೀದಿಗಳನ್ನು ರಂಗುರಂಗಾಗಿಸಿವೆ. ಇಂತಹ ಹೂವಿನ ಮರಗಳಿರುವ ಬೀದಿಗಳನ್ನು ಜನರು ಹೆಚ್ಚಾಗಿ ದಕ್ಷಿಣ ಕೊರಿಯಾ, ಜಪಾನ್ನಂತಹ ದೇಶಗಳಲ್ಲಿ ನೋಡಿರುತ್ತಾರೆ. ಬೆಂಗಳೂರು ಅವ್ಯಾವುದಕ್ಕೂ ಕಡಿಮೆಯಿಲ್ಲ. ಬೀಸುವ ಗಾಳಿಗೆ ಉದುರುವ ಹೂವಿನ ಪಕಳೆಗಳು ಜನರಿಗೆ ಹಿಮವನ್ನು ನೆನಪಿಸಲೂ ಸಾಕು. ಕಾರಣ, ಅಂತಹ ವಾತಾವರಣವನ್ನು ಜನರಿಗೆ ನೀಡುತ್ತಿದೆ ‘ನಮ್ಮ ಬೆಂಗಳೂರು’ (Bengaluru). ಹೂವುಗಳು ಸಾಮಾನ್ಯವಾಗಿ ಗುಲಾಬಿ ಬಣ್ಣದ ವಿವಿಧ ಛಾಯೆಗಳಲ್ಲಿ ಕಂಡುಬರುತ್ತವೆ. ನೇರಳೆ ಬಣ್ಣದ ಹೂವಿನ- ಟಬೆಬುಯಾ ರೋಸಿಯಾ (Tabebuia Rosea) ಎಂಬ ನಿಯೋಟ್ರೋಪಿಕಲ್ ಮರ ಅರಳಿದೆ. ಇದನ್ನು ‘ಪಿಂಕ್ ಪೌಯಿ’ ಮತ್ತು ‘ರೋಸಿ ಟ್ರಂಪೆಟ್ ಟ್ರೀ’ ಎಂದೂ ಕರೆಯಲಾಗುತ್ತದೆ. ಈ ಮರಗಳು 30 ಮೀ (98 ಅಡಿ) ವರೆಗೆ ಬೆಳೆಯುತ್ತವೆ. ಈ ಮರಗಳು ವಸಂತ ಕಾಲವಾದ್ದರಿಂದ ಈಗ ಭಾರತದಲ್ಲಿ ಅರಳುತ್ತಿವೆ.
ಮರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ:
ಹಿಂದಿಯಲ್ಲಿ ಇದನ್ನು ಹೆಚ್ಚಾಗಿ ‘ಬಸಂತ್ ರಾಣಿ’ ಎಂದು ಕರೆಯಲಾಗುತ್ತದೆ. ಟಬೆಬುಯಾ ರೋಸಿಯಾ ಸಸ್ಯಗಳು ಶೀಘ್ರವಾಗಿ ಬೆಳೆಯುತ್ತವೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ನಲ್ಲಿ ಸಾಮಾನ್ಯವಾಗಿ ಹೂಬಿಡುತ್ತವೆ. ಈ ಮರಗಳು ಬೆಚ್ಚಗಿನ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಸಸ್ಯಗಳು 2 ರಿಂದ 3 ವರ್ಷಗಳಲ್ಲಿ ಹೂವುಗಳನ್ನು ಬಿಡಲು ಪ್ರಾರಂಭಿಸುತ್ತವೆ. ವಸಂತ ಕಾಲದಲ್ಲಿ ಹೂ ಬಿಡುವ ಇವುಗಳ ಎಲೆಗಳು ಚಳಿಗಾಲದಲ್ಲಿ ಉದುರುತ್ತವೆ.
ಬೆಂಗಳೂರಿಗರಿಗೆ ಈ ಮರಗಳ ಪ್ರಾಮುಖ್ಯತೆ ಅರಿವಾಗಿರುತ್ತದೆ. ಕಾರಣ, ಇವುಗಳು ರಸ್ತೆಬದಿಗೆ ಉತ್ತಮ ಮರಗಳಾಗಿದ್ದು, ನೆರಳನ್ನು ನೀಡುತ್ತವೆ. ಜತೆಗೆ ನಗರಕ್ಕೆ ಅಂದವನ್ನೂ ನೀಡುತ್ತವೆ. ಪರಿಸರದ ದೃಷ್ಟಿಯಿಂದ ಮಾಲಿನ್ಯ ಭರಿತ ನಗರಗಳಿಗೆ ಇದರ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳಬೇಕಿಲ್ಲವಲ್ಲ.. ಉದ್ಯಾನಗಳಲ್ಲಿ ಇವು ಮತ್ತಷ್ಟು ವಿಶಾಲವಾಗಿ ಬೆಳೆಯುತ್ತವೆ.
ಬೆಂಗಳೂರು ನಗರ ಈಗ ಹೇಗಿದೆ? ಇಲ್ಲಿವೆ ನೋಡಿ ಚಿತ್ರಗಳು
ಹಿಮವನ್ನು ನೆನಪಿಸುವ ಹೂವುಗಳು; ವಿಡಿಯೋ ಇಲ್ಲಿದೆ:
Uff #Bengaluru!!!
This is the scene, in front of my apartment.#TabebuiaRoseatrees#cherryblossom pic.twitter.com/EbWKvS9jil— ASWETHA ANIL (@ASWETHAANIL) April 5, 2022
ಟಬೆಬುಯಾ ರೋಸಿಯಾ ಬೆಂಗಳೂರಿನ ಮೂಲ ಮರವೆ?
ಇದು ಬೆಂಗಳೂರಿನ ಮೂಲ ಮರವಲ್ಲ. ಬ್ರಿಟಿಷರಿಂದ ಭಾರತಕ್ಕೆ ಆಗಮಿಸಿದ ಇವುಗಳು, ಕಾಲೋನಿಗಳಲ್ಲಿ ಅಂದಕ್ಕಾಗಿ ನೆಡಲಾಗುತ್ತಿತ್ತು. ಇದೀಗ ಇವು ಬೆಂಗಳೂರಿನವೇ ಆಗಿವೆ. ಜಪಾನ್ನಲ್ಲಿ ‘ಚೆರ್ರಿ’ ಮರಗಳು ಹೀಗೆಯೇ ಇವೆ. ಅವುಗಳೊಂದಿಗೆ ಬೆಂಗಳೂರಿನ ಈ ಮರಗಳನ್ನು ಕೂಡ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು
Health Tips : ಸುಸ್ಥಿರ ಆಹಾರ ಪದ್ಧತಿಗಳಿಂದ ಈ ಎಲ್ಲ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು