ಬೆಂಗಳೂರು, ಮೇ 17: ರೈತ ವಿರೋಧಿ, ಕಣ್ಣು, ಕಿವಿ, ಹೃದಯ ಇಲ್ಲದ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು (Chief Minister Siddaramaiah) ಕೂಡಲೇ ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್ ಗಳಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ. ಬ್ಯಾಂಕ್ ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ (Opposition leader R. Ashoka) ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ರೈತರಿಗಾಗಿ 3,454 ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆಗೊಳಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಿಲ್ಲ. ಕೇಂದ್ರ ಸರ್ಕಾರ ನೀಡಿದ ಹಣವನ್ನು ಕೂಡ ರೈತರಿಗೆ ಸರಿಯಾಗಿ ತಲುಪಿಸಿಲ್ಲ. ಈ ಪರಿಹಾರದ ಹಣವನ್ನು ಹಳೆ ಬಾಕಿಗಳಿಗೆ ಬ್ಯಾಂಕುಗಳು ಜಮೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ತಕ್ಷಣದ ಕ್ರಮ ವಹಿಸದೆ ಕೈ ಕಟ್ಟಿ ಕುಳಿತಿತ್ತು. ಈಗ ಪಿಂಚಣಿ, ನರೇಗಾ ಹಣವೂ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಸರ್ಕಾರ ವಿಫಲವಾಗಿದೆ. ಈ ಮೂಲಕ ಅನ್ನದಾತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕೂಡಲೇ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು. ಬ್ಯಾಂಕ್ ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಪ್ರವಾಹ ವಿಕೋಪದಿಂದ ಹಾನಿಗೊಳಗಾದವರಿಗೆ ದುಪ್ಪಟ್ಟು ಪರಿಹಾರ ನೀಡಿತ್ತು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯದ ಪಾಲನ್ನೂ ನೀಡಲಾಗಿತ್ತು. ಈಗ ಪಾಪರ್ ಆಗಿ ಖಾಲಿ ಖಜಾನೆಯಲ್ಲಿ ಚಿಲ್ಲರೆ ಎಷ್ಟು ಉಳಿದಿದೆ ಎಂದು ಎಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೂ ಮಿಡಿಯದೆ ಸುಮ್ಮನಿದ್ದಾರೆ ಎಂದು ಟೀಕಿಸಿದ್ದಾರೆ.
Also Read: ದುರ್ಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಐತಿಹಾಸಿಕ ಬಾವಿ, ಪುಷ್ಕರಣಿಗಳು ಅವಸಾನದ ಅಂಚಿಗೆ
ಸಹಾಯಧನ ಘೋಷಿಸಿ: ಕಳೆದ ವರ್ಷ ಹಿಂಗಾರು, ಮುಂಗಾರು ಎರಡೂ ಕೈ ಕೊಟ್ಟಿದ್ದರಿಂದ ಈ ವರ್ಷ ರೈತರ ಬಳಿ ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳಲು, ಉಳುಮೆ ಮಾಡಲೂ ಸಹ ಹಣವಿಲ್ಲದ ಪರಿಸ್ಥಿತಿ ಇದೆ. ಆದ್ದರಿಂದ ಈ ಕೂಡಲೇ ಎಕರೆಗೆ 5,000 ರೂ. ನಂತೆ ರೈತರಿಗೆ ವಿಶೇಷ ಸಹಾಯಧನ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಈ ಬಾರಿಯೂ ಕೃಷಿ ಬೆಳೆಗಳು ಕೈ ಕೊಟ್ಟು ಆಹಾರ ಪದಾರ್ಥಗಳ ಕೊರತೆಯಿಂದ ಹಣದುಬ್ಬರ ಉಂಟಾಗಿ ತೀವ್ರ ಬೆಲೆ ಏರಿಕೆ ಆಗುವುದು ನಿಶ್ಚಿತ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನ ಕೃಷಿ ಚಟುವಟಿಕೆಯನ್ನು ಉಳಿಸಬೇಕು ಎಂದು ಆರ್.ಅಶೋಕ ಆಗ್ರಹಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ