ದೇವರೇ, ನಾಳೆ ಮ್ಯಾಚ್ ಗೆಲ್ಸಪ್ಪಾ: ಆರ್ಸಿಬಿ ಅಭಿಮಾನಿಗಳಿಂದ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆ
RCB vs CSK: ಗೆಲ್ಲಲೇಬೇಕಾದ ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಒಂದು ವೇಳೆ ಸೋತರೆ ಎಂಬ ಆತಂಕ ಆರ್ಸಿಬಿ ಅಭಿಮಾನಿಗಳದ್ದು. ಹೀಗಾಗಿ ಶನಿವಾರದ ಪಂದ್ಯಕ್ಕೆ ಯಾವುದೇ ಅಡ್ಡಿಯಾಗದಿರಲಿ, ಆರ್ಸಿಬಿ ಗೆಲ್ಲಲಿ ಎಂದು ವಿಘ್ನ ನಿವಾರಕನ ಮೊರೆ ಹೋಗಿದ್ದಾರೆ ಅಭಿಮಾನಿಗಳು. ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಆರ್ಸಿಬಿ ಅಭಿಮಾನಿಗಳು ಪೂಜೆ ಸಲ್ಲಿಸಿ ಪ್ರಸಾದ ಹಂಚಿದ ವಿಡಿಯೋ ಇಲ್ಲಿದೆ.
ಬೆಂಗಳೂರು, ಮೇ 17: ಐಪಿಎಲ್ (IPL 2024) ಟೂರ್ನಿಯ ಸಾಂಪ್ರದಾಯಿಕ ಎದುರಾಳಿಗಳೆಂದೇ ಪರಿಗಣಿಸಲ್ಪಟ್ಟಿರುವ ಚೆನ್ನೈ ಸೂಪರ್ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿವೆ. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದು ಪಂದ್ಯದ ದಿನವೂ ಮಳೆಯ ಮುನ್ಸೂಚನೆ ಇದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಯಾಕೆಂದರೆ, ಈ ಪಂದ್ಯ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಆರ್ಸಿಬಿಗೆ ಬಹಳ ಮಹತ್ವದ್ದು. ಹೀಗಾಗಿ ಇದೀಗ ಆರ್ಸಿಬಿ ಅಭಿಮಾನಿಗಳು ಮಳೆಯಾಗದಂತೆ ಮತ್ತು ಪಂದ್ಯದಲ್ಲಿ ಬೆಂಗಳೂರು ತಂಡ ಗೆಲ್ಲುವಂತೆ ದೇವರ ಮೊರೆ ಹೋಗಿದ್ದಾರೆ.
ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಆರ್ಸಿಬಿ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ. ಮಳೆಯಿಂದ ಪಂದ್ಯ ರದ್ದಾಗಬಾರದು, ಚೆನ್ನೈ ವಿರುದ್ಧ ಆರ್ಸಿಬಿ ವಿಜಯ ಸಾಧಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ದೊಡ್ಡಗಣಪತಿ ದೇವಸ್ಥಾನದ ಎದುರು ಪ್ರಸಾದ ವಿತರಿಸುವ ಮೂಲಕ ತಂಡದ ಪರ ಪ್ರಾರ್ಥನೆ ಮಾಡಿದ್ದಾರೆ.
ಅಭಿಮಾನಿಗಳು ಆರ್ಸಿಬಿ ತಂಡದ ಆಟಗಾರರ ಫೋಟೋ ಹಿಡಿದು ಪೂಜೆ ಸಲ್ಲಿಸಿದ್ದು, ಪ್ರಸಾದ ವಿತರಣೆ ಮಾಡಿದ್ದಾರೆ.
ಇದನ್ನೂ ಓದಿ: ಕೊನೆಯ ಪಂದ್ಯಕ್ಕೆ ಆರ್ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್: ಸಿಎಸ್ಕೆಗೆ ನಡುಕ ಶುರು
ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಆರ್ಸಿಬಿಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ನೂರೊಂದು ತೆಂಗಿನಕಾಯಿ, ಕುಂಬಳಕಾಯಿ ಒಡೆದು ಅಭಿಮಾನಿಗಳು ಆಟಗಾರರ ದೃಷ್ಟಿ ತೆಗೆದಿದ್ದಾರೆ. ಗೆದ್ದು ಬಾ ಆರ್ಸಿಬಿ ಎಂದು ಬೋರ್ಡ್ ಹಿಡಿದು ಘೋಷಣೆ ಕೂಗಿದ್ದಾರೆ. ಪೂಜೆಯಲ್ಲಿ ಮಹಿಳೆಯರು, ಮಕ್ಕಳು ಸಹ ಭಾಗಿಯಾಗಿದ್ದಾರೆ.
ನಾಳಿನ ಪಂದ್ಯ ಮಳೆ ಬಂದು ರದ್ದಾಗಿ ಪಾಯಿಂಟ್ ಹಂಚಿಕೆಯಾದಲ್ಲಿ ಆರ್ಸಿಬಿ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ. ಮತ್ತೊಂದೆಡೆ, ಚೆನ್ನೈ ವಿರುದ್ಧ ಸೋತರೂ ಪ್ಲೇ ಆಫ್ ಪ್ರವೇಶ ಅಸಾಧ್ಯ. ಹೀಗಾಗಿ ಅಭಿಮಾನಿಗಳು ಆತಂಕಿತರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ