ವಾರದ ನಂತರ ಮತ್ತೆ ಓಪನ್ ಆದ ಮಂತ್ರಿ ಮಾಲ್; ಕೋರ್ಟ್ ಸೂಚನೆಯಂತೆ ಬೀಗ ತೆಗೆದ ಬಿಬಿಎಂಪಿ
ಬಿಬಿಎಂಪಿಗೆ ಬರೋಬ್ಬರಿ 50 ಕೋಟಿ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಮಂತ್ರಿ ಮಾಲ್ ಅನ್ನು ಮೇ.10ರ ಶುಕ್ರವಾರ ಅಕ್ಷಯ ತೃತೀಯದ ದಿನವೇ ಬಂದ್ ಮಾಡಲಾಗಿತ್ತು. ಸದ್ಯ ವಾರದ ಬಳಿಕ ಇಂದು ಮತ್ತೆ ಮಂತ್ರಿ ಮಾಲ್ ಓಪನ್ ಮಾಡಲಾಗಿದೆ. ಮಂತ್ರಿ ಮಾಲ್ 50 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಈ ಪೈಕಿ 20 ಕೋಟಿ ರೂ.ಗಳನ್ನ ಜುಲೈ 31 ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಲ್ ತೆರೆಯಲು ಸೂಚನೆ ನೀಡಲಾಗಿದೆ.
ಬೆಂಗಳೂರು, ಮೇ.17: ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಬಂದ್ ಮಾಡಲಾಗಿದ್ದ ಪ್ರತಿಷ್ಠಿತ ಮಂತ್ರಿಮಾಲ್ (Mantri Mall) ಇವತ್ತಿನಿಂದ ಮತ್ತೆ ಓಪನ್ ಆಗಿದೆ. ಒಂದು ವಾರದ ನಂತರ ಮಂತ್ರಿ ಮಾಲ್ ಮತ್ತೆ ಓಪನ್ ಆಗಿದೆ. ಮಂತ್ರಿ ಮಾಲ್ಗೆ ಹಾಕಲಾಗಿರುವ ಬೀಗವನ್ನ ತೆರೆಯುವಂತೆ ಬಿಬಿಎಂಪಿಗೆ (BBMP) ಹೈ ಕೋರ್ಟ್ (High Court) ಸೂಚನೆ ನೀಡಿದ್ದು ಮಾಲ್ಗೆ ಹಾಕಿದ್ದ ಬೀಗ ಓಪನ್ ಮಾಡಲಾಗಿದೆ. ಎಂದಿನಂತೆ ಶಾಪಿಂಗ್ ಮಾಡಲು ಜನ ಮುಂದಾಗಿದ್ದಾರೆ.
ಮಂತ್ರಿ ಮಾಲ್ 50 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಈ ಪೈಕಿ 20 ಕೋಟಿ ರೂ.ಗಳನ್ನ ಜುಲೈ 31 ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಲ್ ತೆರೆಯಲು ಸೂಚನೆ ನೀಡಲಾಗಿದೆ. 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಮಾಲ್ ತೆರೆಯುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ದುರ್ಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಐತಿಹಾಸಿಕ ಬಾವಿ, ಪುಷ್ಕರಣಿಗಳು ಅವಸಾನದ ಅಂಚಿಗೆ
ಬಿಬಿಎಂಪಿಗೆ ಬರೋಬ್ಬರಿ 50 ಕೋಟಿ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಮಾಲ್ ಮಾಲೀಕರಿಗೆ ಮೇ.10ರ ಶುಕ್ರವಾರ ಅಕ್ಷಯ ತೃತೀಯದ ದಿನವೇ ಪಾಲಿಕೆ ಅಧಿಕಾರಿಗಳು ಶಾಕ್ ಕೊಟ್ಟಿದ್ದರು. ಈ ಹಿಂದೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಬಾಕಿ ತೆರಿಗೆ ಪಾವತಿಸದ ಮಾಲ್ ಗೆ ಎಂಟನೇ ಬಾರಿಗೆ ಪಾಲಿಕೆ ಬೀಗ ಹಾಕಿತ್ತು.
ಬೆಳಗ್ಗೆಯೇ ಮಾಲ್ ಗೆ ಬೀಗ ಹಾಕಿದ ಅಧಿಕಾರಿಗಳು, ನಿಮ್ಮ ಆಸ್ತಿ ಸೀಜ್ ಮಾಡಿದ್ದೇವೆ, ಉದ್ಯಮಪರವಾನಗಿ ರದ್ದಾಗಿದೆ ಅಂತಾ ಬೋರ್ಡ್ ಹಾಕಿ ಮಾರ್ಷಲ್ ಗಳನ್ನ ಕಾವಲಿಗಿಟ್ಟಿದ್ದರು. ಎಂದಿನಂತೆ ಕೆಲಸಕ್ಕೆ ಬಂದ ಮಾಲ್ ಸಿಬ್ಬಂದಿ ದಿಢೀರ್ ಅಂತಾ ಮಾಲ್ ಬಂದ್ ಆಗಿದ್ದರಿಂದ ರಸ್ತೆಯಲ್ಲೇ ಕಾದುನಿಂತಿದ್ರು. ಮಾಲ್ ಗೆ ಬೀಗ ಬಿದ್ದಿದ್ದಕ್ಕೆ ಕಂಗಾಲಾದ ಸಿಬ್ಬಂದಿ, ಪದೇ ಪದೇ ಹೀಗೆ ಮಾಲ್ ಬಂದ್ ಆದ್ರೆ ನಮ್ಮ ಕತೆಯೇನು, ಮಾಲ್ ನಲ್ಲಿರುವ ನಮ್ಮ ಸ್ಟಾಲ್ ಗಳ ಮಾಲೀಕರು ಏನ್ ಮಾಡೋದು ಅಂತಾ ಬೇಸರ ತೋಡಿಕೊಂಡಿದ್ದರು. ಸದ್ಯ ಒಂದು ವಾರದ ಬಳಿಕ ಇಂದು ಮಂತ್ರಿ ಮಾಲ್ ಮತ್ತೆ ಓಪನ್ ಆಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:55 am, Fri, 17 May 24