ಒಂಟಿ ಪೋಷಕ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ; ಕರ್ನಾಟಕ ಸರ್ಕಾರದಿಂದ ಹೊಸ ಆದೇಶ
ಮಹಿಳೆಯರಿಗೆ ಮಾತ್ರವಲ್ಲ, ಇನ್ನು ಮುಂದೆ ಒಂಟಿ ಪೋಷಕ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನ ರಜೆ ಸಿಗಲಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಮಹಿಳೆಯರಿಗೆ ಮಾತ್ರವಲ್ಲ, ಇನ್ನು ಮುಂದೆ ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನ ರಜೆ (Childcare leave) ಸಿಗಲಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಒಂಟಿ ಪೋಷಕರಾಗಿರುವ ಅವಿವಾಹಿತ, ವಿವಾಹ-ವಿಚ್ಛೇದಿತ ಅಥವಾ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ, ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್ ಕೊರಡೆ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ, 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದೇ ರೀತಿ, ಒಂಟಿ ಪೋಷಕರಾಗಿರುವ ಅವಿವಾಹಿತ ಅಥವಾ ವಿವಾಹ-ವಿಚ್ಛೇದಿತ ಅಥವಾ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ರಜೆ ಅವಶ್ಯಕತೆ ಇರುತ್ತದೆ ಎಂಬ ಪ್ರಸ್ತಾವನೆಗಳು ಸಲ್ಲಿಸಲಾಗಿವೆ.
ಇದನ್ನೂ ಓದಿ: ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರ್ಕಾರ
ಶಿಶುಪಾಲನಾ ರಜೆಯ ಸೌಲಭ್ಯವನ್ನು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ಇದ್ದರೂ ಏಕಪೋಷಕರಾಗಿರುವ ಪುರುಷ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ನ್ಯಾಯಸಮ್ಮತವಾಗಿದೆ ಎಂದು ಸರ್ಕಾರ ಪರಿಗಣಿಸಿದೆ. ಅದರಂತೆ, ಶಿಶುಪಾಲನಾ ರಜೆಯ ಸೌಲಭ್ಯವನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಒಂಟಿ ಪೋಷಕರಾಗಿರುವ ಪುರುಷ ಸರ್ಕಾರಿ ನೌಕರರಿಗೂ ವಿಸ್ತರಿಸಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ.
ಷರತ್ತುಗಳನ್ನು ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆಯನ್ನು ಮಂಜೂರು ಮಾಡಬೇಕು. ಯಾವುದೇ ಸಂದರ್ಭದಲ್ಲಿ ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲಾ ರಜೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Fri, 9 June 23