
ಬೆಂಗಳೂರು: ಮಳೆಯಿಂದಾಗಿ ಬೆಂಗಳೂರಿನಲ್ಲಿ (Bengaluru Rain) ಅಪಾರ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಗೃಹ ಕಚೇರಿ ಕೃಷ್ಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಗರದ ವಿವಿಧ ಬಡಾವಣೆಗಳಲ್ಲಿ 122ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆಯಾಗಿದೆ. ಕಂದಾಯ ಸಚಿವರು ಪರಿಶೀಲಿಸಿ, ಸಂತ್ರಸ್ತರಿಗೆ ಪರಿಹಾರ ನೀಡಲಿದ್ದಾರೆ. ಮಹದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹಾನಿಯ ಪ್ರಮಾಣ ಹೆಚ್ಚು ಎಂದು ಹೇಳಿದರು.
ಮಹದೇವಪುರದ 9, ಬೊಮ್ಮನಹಳ್ಳಿಯ 11 ಕಡೆ ಹಾನಿ ಆಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ನಾನು ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಸವಳೆ ಕೆರೆಯ ನೀರು ಹರಿದು ಹಲವೆಡೆ ಸಮಸ್ಯೆಯಾಗಿದೆ. ನೀರು ಹರಿಯಲು ಸಮಸ್ಯೆಯಿರುವ ಮುಖ್ಯ ಕಾಲುವೆಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಗರದ ವಿವಿಧ ಪ್ರದೇಶಗಳಿಗೆ ನಾಳೆ (ಸೆಪ್ಟೆಂಬರ್ 1) ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ರಾಜಕಾಲುವೆಗಳ ನಿರ್ಮಾಣಕ್ಕೆ ಈಗಾಗಲೇ ₹ 1,500 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.
ನಗರದ ಹಲವೆಡೆ ಮುಖ್ಯ ಕಾಲುವೆಗಳು ಮುಚ್ಚಿಕೊಂಡಿವೆ. ಕೆಲವೆಡೆ ಕಾಲುವೆಗಳ ಅಗಲ ಕಡಿಮೆಯಿರುವುದರಿಂದ ತೊಂದರೆಯಾಗುತ್ತಿದೆ. ನೀರು ಹರಿಯಲು ಇರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಸೂಚನೆ ನೀಡಿದ್ದೇನೆ. ಹೊರ ವರ್ತುಲ ರಸ್ತೆಯಲ್ಲಿ ನಿಂತಿರುವ ನೀರನ್ನು ಸಮರ್ಪಕವಾಗಿ ಹರಿಸಲು ಸೂಚನೆ ನೀಡಿದ್ದೇನೆ. ಮಳೆ ನೀರು ಸಾಗಿಸುವ ಚರಂಡಿಗಳನ್ನು ಪರಸ್ಪರ ಸಂಬಂಧ ಕಲ್ಪಿಸದಿರುವ ಕಾರಣ ಲೇಔಟ್ಗಳಲ್ಲಿ ನೀರು ನಿಂತಿದೆ ಎಂದು ಹೇಳಿದರು.
ರಾಜಕಾಲುವೆಯ ಜೊತೆಗೆ ನೀರು ಹರಿಯುವ ನೀರು ಹರಿವಿನ ಇತರ ಚರಂಡಿ, ಕಾಲುವೆಗಳನ್ನೂ ಸರಿಯಾಗಿ ನಿರ್ವಹಿಸಬೇಕು. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಮಳೆ ಹೆಚ್ಚಾಗಿದೆ. ಕಳೆದ ಬಾರಿ ಮಲ್ಲೇಶ್ವರಂ ಹಾಗೂ ಯಶವಂತಪುರ ಭಾಗದಲ್ಲಿ ತೊಂದರೆಯಾಗಿತ್ತು. ಈ ಬಾರಿ ಅಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ. ನಗರ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ರಾಜಕಾಲುವೆ ನಿರ್ವಹಣೆ ಹೆಚ್ಚುವರಿ ಹಣ ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.
Published On - 10:15 pm, Wed, 31 August 22