ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಜನ ಸ್ಪಂದನ ವೆಬ್ ಪೋರ್ಟಲ್ ಉದ್ಘಾಟನೆ

| Updated By: preethi shettigar

Updated on: Nov 01, 2021 | 1:24 PM

1902 ಸಹಾಯವಾಣಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ ಸಹಾಯವಾಣಿಗೆ ಮೊದಲ ಕರೆ ಮಾಡಿದ್ದಾರೆ. ಜತೆಗೆ ಸಹಾಯವಾಣಿ ಸಿಬ್ಬಂದಿ ಜತೆ ಫೋನ್‌ನಲ್ಲಿ ವಿವರ ಪಡೆದಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಜನ ಸ್ಪಂದನ ವೆಬ್ ಪೋರ್ಟಲ್ ಉದ್ಘಾಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಇಂದು ( ನವೆಂಬರ್​ 1) ಜನ ಸ್ಪಂದನ ವೆಬ್ ಪೋರ್ಟಲ್ ಅನ್ನು ಉದ್ಘಾಟನೆ ಮಾಡಿದ್ದಾರೆ. 1902 ಸಹಾಯವಾಣಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ ಸಹಾಯವಾಣಿಗೆ ಮೊದಲ ಕರೆ ಮಾಡಿದ್ದಾರೆ. ಜತೆಗೆ ಸಹಾಯವಾಣಿ ಸಿಬ್ಬಂದಿ ಜತೆ ಫೋನ್‌ನಲ್ಲಿ ವಿವರ ಪಡೆದಿದ್ದಾರೆ. ಗಿಡಗಳಿಗೆ ನೀರು ಹಾಕಿ ವಿಧಾನಸೌಧದಲ್ಲಿ ಜನ ಸ್ಪಂದನ ಲೋಕಾರ್ಪಣೆ ಮಾಡಿದ್ದಾರೆ. ಸಚಿವ ಬಿ.ಸಿ.ನಾಗೇಶ್, ಡಾ.ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ರಿಜ್ವಾನ್ ಅರ್ಷದ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜನ ಸೇವಕ ಯೋಜನೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಮಲ್ಲೇಶ್ವರಂ ಕ್ಷೇತ್ರದ ಎರಡು ರಸ್ತೆಗಳಲ್ಲಿ ಪ್ರಾಯೋಗಿಕ ಜನ ಸೇವಕ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಸ್ಕೂಟರ್ ಚಲಾಯಿಸಿಕೊಂಡು ಮನೆ ಮನೆಗೆ ಯೋಜನೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ವೇಳೆ ಸಿಎಂಗೆ ರಸ್ತೆಯುದ್ದಕ್ಕೂ ಹೂ ಸುರಿಮಳೆ ಮಾಡಲಾಗಿದೆ. ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಉದ್ಯೋಗ ಕಾರ್ಡ್, ವಿಧವಾ ವೇತನ, ಪಹಣಿ, ಪಿಂಚಣಿಯನ್ನು ಆ ಮೂಲಕ ಜನರಿಗೆ ತಲುಪಿಸಲು ಸಿಎಂ ಮುಂದಾಗಿದ್ದಾರೆ.

ಜನರ ಮನೆ ಬಾಗಲಿಗೆ ಸರ್ಕಾರವನ್ನು ಒಯ್ಯುವ ಕೆಲಸ ಮಾಡ್ತಿದ್ದೇವೆ: ಸಿಎಂ ಬೊಮ್ಮಾಯಿ
ಜನರ ಸುತ್ತಲೂ ಆಡಳಿತ ಇರಬೇಕು, ಅಭಿವೃದ್ಧಿ ಇರಬೇಕು. ಜನರ ಮನೆ ಬಾಗಿಲಿಗೆ ಸರ್ಕಾರ ಹೋಗುವಂತಹ ಕೆಲಸ ಇದಾಗಿದೆ. ಜನಸೇವಕ, ಜನ ಸ್ಪಂದನೆ, ಸಾರಿಗೆ ಇಲಾಖೆ ಯೋಜನೆ. ಈ ಯೋಜನೆ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರ ಹೋಗುತ್ತದೆ ಎಂದು ಯೋಜನೆಗೆ ಚಾಲನೆ ನೀಡಿದ ಬಳಿಕ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಾನು ಸಿಎಂ ಆಗಿದ್ದಾಗ ಜನಪರ ಆಡಳಿತ ನೀಡುತ್ತೇನೆ ಎಂದಿದ್ದೆ. ಅದರಂತೆಯೇ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಇದು ಕ್ರಾಂತಿಕಾರಕ ಬದಲಾವಣೆ. ಜನರಿಂದ ಜನರಿಗಾಗಿ ಆಡಳಿತ ಮಾಡಲು ನಾವು ಹೊರಟಿದ್ದೇವೆ. ಆಡಳಿತ ಕೇವಲ ಕೆಲವೇ ಜನರ ಕಪಿಮುಷ್ಟಿಯಲ್ಲಿರಬಾರದು. ಜನ ಕೇಳುವ ಸೇವೆ ಮನೆಯ ಬಾಗಿಲಿಗೆ ಬಂದರೆ ಅನುಕೂಲವಾಗುತ್ತದೆ. ಇದರಿಂದ ಭ್ರಷ್ಟಾಚಾರವೂ ನಿಲ್ಲುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕ್ರಾಂತಿಕಾರಿ ಬದಲಾವಣೆ ಆಗುವ ದಿನ ಇದು: ಸಿಎಂ ಬಸವರಾಜ ಬೊಮ್ಮಾಯಿ
ಜನ ಸೇವಕ ಕಾರ್ಯಕ್ರಮ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಬೇಕು. ಇಲ್ಲಿ ಯಶಸ್ವಿಯಾದರೆ ಜಿಲ್ಲೆಗಳಿಗೆ ವಿಸ್ತರಿಸುವುದು ಸುಲಭ. ಜನವರಿ 26 ರಂದು ಗ್ರಾಮೀಣ ಪ್ರದೇಶಗಳಿಗೆ ಈ ಕಾರ್ಯಕ್ರಮ ವಿಸ್ತರಿಸುತ್ತೇವೆ. ಕ್ರಾಂತಿಕಾರಿ ಬದಲಾವಣೆ ಆಗುವ ದಿನ ಇದು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶಕ್ತಿ ಕೇಂದ್ರದ ಹತ್ತಿರವೇ ಮಾಡುತ್ತಿರುವ ಈ ಯೋಜನೆ ಯಶಸ್ವಿ ಆಗಲೇಬೇಕು. ಮುಂದಿನ ದಿನಗಳಲ್ಲಿ ಇಡೀ ವ್ಯವಸ್ಥೆ ಬದಲಾವಣೆಗೆ ಇದು ಭದ್ರಬುನಾದಿ ಆಗುತ್ತದೆ. ಸ್ಪಷ್ಟ ದಿಕ್ಸೂಚಿ, ನಿರ್ದಿಷ್ಟ ಗುರಿ, ಸಮಸ್ಯೆ ಬಗೆಹರಿಸುವ ಭದ್ದತೆ ಮೂಲಕ ನಾವು ಮುನ್ನಡೆಯುತ್ತೇವೆ. ಕೇವಲ ರಾಜ್ಯೋತ್ಸವ ಮಾಡಿದರೆ ಸಾಲದು ಅದು ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ಆದಾಗ ರಾಜ್ಯೋತ್ಸವ ಜನೋತ್ಸವ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಾಹನವನ್ನು ಯಾರು ಮಾರುತ್ತಾರೋ ಅವರೇ ರಿಜಿಸ್ಟ್ರೇಷನ್ ನೀಡುವ ವ್ಯವಸ್ಥೆ ತರುತ್ತಿದ್ದೇವೆ: ಸಿಎಂ ಬೊಮ್ಮಾಯಿ
ಸಾರಿಗೆ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ಮಾಡಲು ಸಾರಿಗೆ ಸಚಿವರು ಮುಂದಾಗಿದ್ದಾರೆ. 60 ಲಕ್ಷ ರೂ. ಜನ ಸಾರಿಗೆ ಕಚೇರಿಗೆ ಹೋಗುತ್ತಾರೆ. ಅದನ್ನು ತಪ್ಪಿಸಬೇಕು. 30 ಸೇವೆಗಳನ್ನು ಇದರ ಅಡಿಯಲ್ಲಿ ತರುತ್ತಿದ್ದೇವೆ. ವಾಹನವನ್ನು ಯಾರು ಮಾರುತ್ತಾರೋ ಅವರೇ ರಿಜಿಸ್ಟ್ರೇಷನ್ ನೀಡುವ ವ್ಯವಸ್ಥೆ ತರುತ್ತಿದ್ದೇವೆ. 10 ಸಂಸ್ಥೆಗಳಿಗೆ ಮಾತ್ರ ಇದೀಗ ರಿಜಿಸ್ಟ್ರೇಷನ್ ಅವಕಾಶ ನೀಡುತ್ತಿದ್ದೇವೆ. ಇವೆಲ್ಲವೂ ಜನಪರವಾದ ಸರ್ಕಾರದ ನಿರ್ಣಯ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಪಡಿತರ ಆಹಾರ ಧಾನ್ಯ ವಿತರಣೆ ಕೂಡ ಪ್ರಾರಂಭ ಮಾಡಿದ್ದೇವೆ. ಬಿಬಿಎಂಪಿ ಖಾತಾ ಕೊಡುವಂತದ್ದು ಕಷ್ಟದ ಕೆಲಸ, ಜನ ಸುಸ್ತಾಗಿ ಹೋಗಿದ್ದಾರೆ. 4.11 ಲಕ್ಷ ಪಡಿತರ ಕಾರ್ಡ್​ಗಳಿಗೆ ಅನುಮೋದನೆ ನೀಡಿದ್ದೇನೆ. 2.66 ಲಕ್ಷ ಬಿಪಿಎಲ್, 1.45 ಲಕ್ಷ ಎಪಿಎಲ್ ಕಾರ್ಡ್​ಗಳಿವೆ. ಈ ಎಲ್ಲ ಸೇವೆಗಳ ಪರಿಶೀಲನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಜನರೇ ಶ್ರೀಮಂತ ಆದರೆ ತಲಾ ಆದಾಯ ಹೆಚ್ಚಾಗುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ
ಸರ್ಕಾರ ಶ್ರೀಮಂತವಾದರೆ ಸರ್ಕಾರಕ್ಕೆ ಬೇಕಾದ ಕಾರ್ಯಕ್ರಮ ಮಾಡುತ್ತದೆ. ಜನರೇ ಶ್ರೀಮಂತ ಆದರೆ ತಲಾ ಆದಾಯ ಹೆಚ್ಚಾಗುತ್ತದೆ. ಕುಟುಂಬಗಳ ಆದಾಯ ಹೆಚ್ಚಾದರೆ ಅವರು ಸುಧಾರಿಸುತ್ತಾರೆ. ಆ ಮೂಲಕ ಕುಟುಂಬಗಳ ಆರೋಗ್ಯವೂ ಸುಧಾರಣೆಯಾಗುತ್ತದೆ. ಕುಟುಂಬಗಳು ಶ್ರೀಮಂತವಾದರೆ ಸರ್ಕಾರದ ಬೊಕ್ಕಸಕ್ಕೆ ಹಣ ಸಿಗುತ್ತದೆ. ಈ ಮೂಲಕ ಸರ್ಕಾರವೂ ಶ್ರೀಮಂತವಾಗುತ್ತದೆ. ಇನ್ನು ಹೆಣ್ಣು ಮಕ್ಕಳ ಆರ್ಥಿಕ ಸಾಮರ್ಥ್ಯ ಕೂಡ ಹೆಚ್ಚಾಗಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ ಹೆಣ್ಣುಮಕ್ಕಳ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ಚಿಂತನೆ ಇದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ:

ಕೋಲಾರ: ಕೇಂದ್ರ ಕೃಷಿ ಸಚಿವೆ ಶೋಭಾ ಕರಾಂದ್ಲಾಜೆಯಿಂದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನೂತನ ಕೆವಿಕೆ ಉದ್ಘಾಟನೆ

ಕನ್ನಡ ನಮ್ಮ ದೇವರು, ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು; ಬಸವರಾಜ ಬೊಮ್ಮಾಯಿ ಭಾಷಣ

Published On - 12:54 pm, Mon, 1 November 21