ಬೆಂಗಳೂರು, ಜನವರಿ 22: ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿ ಗ್ರಾಮದಲ್ಲಿರುವ ಶ್ರೀರಾಮ ದೇವಸ್ಥಾನವನ್ನು (Sri Ram Mandir) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಭೈರತಿ ಸುರೇಶ್, ಈಶ್ವರ್ ಖಂಡ್ರೆ, ರಾಮಲಿಂಗರೆಡ್ಡಿ ಮತ್ತು ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗಿಯಾಗಿದ್ದರು. ದೇವಾಲಯವನ್ನು ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿದೆ. ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ 33 ಅಡಿ ಎತ್ತರ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಪೂಜೆ ಪುನಸ್ಕಾರಗಳು ನಡೆದವು.
ಮುಖ್ಯಮಂತ್ರಿ @siddaramaiah ಅವರು ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ಸೀತಾರಾಮ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡರು.
ಸಚಿವರಾದ… pic.twitter.com/W1FHPJbpSV
— CM of Karnataka (@CMofKarnataka) January 22, 2024
ಉದ್ಘಾಟನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗಾಂಧಿಜಿ ಪ್ರಾಣ ಬಿಡುವಾಗಲೂ ಹೇ ರಾಮ್ ಎಂದು ಪ್ರಾಣ ಬಿಟ್ಟರು. ನಾವು ಗಾಂಧಿಜಿಯವರ ರಾಮನನ್ನು ಪೂಜಿಸುತ್ತೇವೆ. ಬಿಜೆಪಿಯ ರಾಮನನ್ನು ಪೂಜಿಸಲ್ಲ. ನಾವೆಲ್ಲ ರಾಮನ ಭಕ್ತರೆ, ಆದರೆ ಬಿಜೆಪಿಯವರು ಹೇಳುವಂತೆ ಅಲ್ಲ. ಅಯೋಧ್ಯೆಗೆ ಹೋಗುತ್ತೇವೆ ಎಂದರು.
ಈ ದೇವಾಲಯ ರಾಜಕಾರಣಕ್ಕೊಸ್ಕರ ಮಾಡಿಲ್ಲ, ರಾಜ್ಯದಲ್ಲಿ ಬಹಳಷ್ಟು ರಾಮನ ದೇವಾಲಯ ಇದೆ. ನಾನು ರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ನಾನು ಅಯೋಧ್ಯೆಗೇ ಹೋಗುತ್ತೇನೆ. ಆದರೆ ಎಲ್ಲಕಡೆ ರಾಮನ ಮೂರ್ತಿ ಒಂದೇ ಅಲ್ವಾ? ಅಯೋಧ್ಯೆಯಲ್ಲಿ ಪೂಜೆ ಮಾಡಿದರು ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರು ಒಂದೆ ಎಂದು ಹೇಳಿದರು.
ಅಯೊಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಹೀಗಾಗಿ ಇಂದು (ಸೋಮವಾರ) ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸಬೇಕೆಂದಯ ಬಿಜೆಪಿ ಆಗ್ರಹಿಸಿದ್ದವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಜೆ ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಇದರೊಂದಿಗೆ ಸರ್ಕಾರಿ ರಜೆ ಬಗ್ಗೆ ಸಿಎಂ ಸಿದ್ದರಾಮಯ್ಯನವರು ತಮ್ಮ ನಿಲುವು ಪ್ರಕಟಿಸಿದ್ದರು.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಸೇರಿದ 545 ಪಿಎಸ್ಐ ನೇಮಕಾತಿ ಅಕ್ರಮದ ತನಿಖಾ ವರದಿ
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ದಿನ ರಾಜ್ಯದಲ್ಲಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಗ್ರಹಿಸಿದ್ದರು. ಈ ಸಂಬಂಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಹಿಂದೂಪರ ಸಂಘಟನೆಗಳು, ಬೆಂಗಳೂರು ವಕೀಲರ ಸಂಘವು ಸಹ ರಜೆ ನೀಡುವಂತೆ ಮನವಿ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Mon, 22 January 24