ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಸಿಎಂ

|

Updated on: Sep 22, 2024 | 8:14 AM

ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಅವರ ನಿಧನದಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.

ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಸಿಎಂ
ಸಿದ್ದರಾಮಯ್ಯ
Follow us on

ಬೆಂಗಳೂರು, ಸೆಪ್ಟೆಂಬರ್​ 22: ಹಾಸನ‌ (Hassan) ಜಿಲ್ಲೆ ಚನ್ನರಾಯಪಟ್ಟಣದ (Channaraypattan) ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಅವರ ನಿಧನದಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎರಡು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.

ಜ್ಞಾನ ದೀಪ, ಜನಮಿತ್ರ, ಹಾಸನ‌ಮಿತ್ರ, ನಾಡಸಹ್ಯಾದ್ರಿ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಹೇಮಕುಮಾರ್ ಅವರಿಗೆ ಪತ್ನಿ ಮತ್ತು ಮಗಳಿದ್ದಾರೆ. ಅಪ್ಪನ ಸಾವಿನ ಬಳಿಕ ಕುಟುಂಬ ನಿರ್ವಹಣೆಗಾಗಿ ಅದೇ ವೃತ್ತಿಯನ್ನು (ಪತ್ರಿಕೆ ಹಾಕುವುದು‌ ಸೇರಿ) ಪುತ್ರಿ ವಿದ್ಯಾ ಮುಂದುವರಿಸಿದ್ದಾರೆ. ಕುಟುಂಬ ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ತಂದಿದ್ದ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪರಿಹಾರ ಕೋರಿದ್ದರು.

ಇದನ್ನೂ ಓದಿ: KUWJ ವಾರ್ಷಿಕ ಪ್ರಶಸ್ತಿ:TV9 ಕನ್ನಡ ಡಿಜಿಟಲ್​ನ ಡೆಪ್ಯೂಟಿ ಎಡಿಟರ್ ಜಗದೀಶ್ ​​​ಬೆಳ್ಳಿಯಪ್ಪಗೆ ರವಿ ಬೆಳಗೆರೆ ಪ್ರಶಸ್ತಿ

ಕೆಯುಡಬ್ಲೂಜೆ ಸಲ್ಲಿಸಿದ ಕೋರಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ಪರಿಹಾರ ಮಂಜೂರು ಮಾಡಿದ್ದಾರೆ. ಪರಿಹಾರ ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ‌, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಕೃತಜ್ಞತೆ ಸಲ್ಲಿಸಿದೆ.

ಟಿಎಸ್‌ಆರ್, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರಿಗೆ KUWJ ಅಭಿನಂದನೆ

ಟಿ.ಎಸ್.ರಾಮಚಂದ್ರರಾವ್ (ಟಿಎಸ್‌ಆರ್)ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಅಭಿನಂದಿಸಿದೆ.

ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರುಗಳಾದ ಶಿವಾಜಿ ಎಸ್. ಗಣೇಶನ್, ಶ್ರೀಕಾಂತಾಚಾರ್ಯ.ಆರ್.ಮಣೂರ, ಡಾ.ಆರ್.ಪೂರ್ಣಿಮಾ, ಪದ್ಮರಾಜ ದಂಡಾವತಿ ಹಾಗೂ ಡಾ.ಸರಜೂ ಕಾಟ್ಕರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ರಾಜೀವ್ ಕಿದಿಯೂರ, ಇಂದೂಧರ ಹೊನ್ನಾಪುರ, ಎನ್.ಮಂಜುನಾಥ, ಚಂದ್ರಶೇಖರ್ ಪಾಲೆತ್ತಾಡಿ ಹಾಗೂ ಶಿವಲಿಂಗಪ್ಪ ದೊಡ್ಡಮನಿ ಅವರುಗಳಿಗೆ ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆ ಸಲ್ಲಿಸಿದ್ದಾರೆ.

ಪತ್ರಕರ್ತರುಗಳ ಸುಧೀರ್ಘ ಅವಧಿಯ ವೃತ್ತಿ ಸೇವೆಯನ್ನು ಪರಿಗಣಿಸಿ ಹಿರಿಯ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಿರುವ ಸಮಿತಿಗೂ ಧನ್ಯವಾದ ತಿಳಿಸಿದ್ದಾರೆ.

ಪ್ರಶಸ್ತಿ ಮೊತ್ತವನ್ನು 5 ಲಕ್ಷಕ್ಕೆ ಹೆಚ್ಚಿಸಲು ಒತ್ತಾಯ:

ರಾಜ್ಯೋತ್ಸವದಿಂದ ಹಿಡಿದು ಹಲವು ಇಲಾಖೆಗಳಲ್ಲಿ ನೀಡುವ ಪ್ರಶಸ್ತಿ ಮೊತ್ತವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಆದರೆ, ಟಿಎಸ್‌ಆರ್‌ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿಗೆ ತಲಾ 2 ಲಕ್ಷ ನಗದು ನೀಡಲಾಗುತ್ತಿದೆ. ಈ ಪ್ರಶಸ್ತಿ ಮೊತ್ತವನ್ನು ಈ ಸಾಲಿನಿಂದಲೇ ಜಾರಿಗೆ ಬರುವಂತೆ ಕನಿಷ್ಠ 5 ಲಕ್ಷ ರೂಗೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ