ಬೆಂಗಳೂರು, ಜನವರಿ 22): ಕಾಂಗ್ರೆಸ್ (Congress) ಹಿಂದೂ ವಿರೋಧಿಗಳು ಎನ್ನುವ ಬಿಜೆಪಿ (BJP) ಆರೋಪದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಇಂದು (ಜನವರಿ 22) ಬೆಂಗಳೂರಿನ ರಾಮಮಂದಿರ(Ram Mandir) ಉದ್ಘಾಟಿಸಿದರು. ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಜೈ ಶ್ರೀರಾಮ್ ಅಂತ ನಾವೂ ಹೇಳೋಲ್ವಾ? ಜೈ ಶ್ರೀರಾಮ್ ಎಂಬುದು ಒಬ್ಬರ ಸ್ಲೋಗನ್ ಅಲ್ಲ, ನಾನೂ ಹೇಳುತ್ತೇನೆ. ಕೆಲವರು ಜೈ ಶ್ರೀರಾಮ್ ಸ್ಲೋಗನ್ ತಮ್ಮ ಸ್ವತ್ತು ಅಂದುಕೊಂಡಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಹೇಳುತ್ತಾ ತಾವು ಸಹ ಜೈ ಶ್ರೀರಾಮ್ ಎಂದು ಕೂಗಿದರು.
ಇದನ್ನೂ ಓದಿ: ಬೆಂಗಳೂರು: ಶ್ರೀರಾಮ ಮಂದಿರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ನಾನು ನಾಸ್ತಿಕನಲ್ಲ-ಆಸ್ತಿಕ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳು ಇವೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತೇವೆ, ಗುಡಿ ಕಟ್ಟುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾರತದ ಮೇಲೆ ವಿದೇಶಿಗರು ಎಷ್ಟು ಬಾರಿ ದಾಳಿ ಮಾಡಿದ್ದಾರೆ. ಫ್ರೆಂಚರು, ಡಚ್ಚರು ಸೇರಿದಂತೆ ಹಲವರು ನಿರಂತರ ದಾಳಿ ಮಾಡಿದ್ರು. ಆದರೆ ನಮ್ಮ ಸಂಸ್ಕೃತಿ, ನಮ್ಮ ಧರ್ಮ ಎಲ್ಲವನ್ನೂ ಕಟ್ಟಿಹಾಕಿದೆ. ಹೀಗಾಗಿ ನಾವೆಲ್ಲಾ ಉಳಿದುಕೊಂಡಿದ್ದೇವೆ ಎಂದರು.
ಬಳಿಕ ತಮಗೆ ತಿಳಿದಿರುವ ಶ್ರೀರಾಮನ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ನಾನು ಪೂಜಿಸುವ ರಾಮ ವಚನ ಪರಿಪಾಲನೆ ತನ್ನ ಉಸಿರಾಗಿಸಿಕೊಂಡವನು. ನನಗೆ ತಿಳಿದಿರುವ ಹನುಮ, ಪೂಜಿಸುವ ಹನುಮ ರಾಮನಾಮಕ್ಕಿಂತ ಮಿಗಿಲಿಲ್ಲ. ರಾಮನೇ ಜಗವೆಲ್ಲಾ ಎಂದು ತಿಳಿದು ರಾಮಭಕ್ತಿ ಎದೆಯೊಳಗೆ ಇಳಿಸಿಕೊಂಡವನು. ಹನುಮನ ನಾಡಿನವರಾದ ನಮಗೆ ರಾಮಭಕ್ತಿ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಅದೊಂದು ತೋರ್ಪಡಿಕೆಯ ವಿದ್ಯಮಾನವೂ ಅಲ್ಲ, ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು ರಾಮನಿಂದ ವಚನ ಪರಿಪಾಲನೆಯನ್ನು ಹಾಗೂ ಡಾ.ಅಂಬೇಡ್ಕರ್ರ ಸಮತೆ ಅನುಷ್ಠಾನವನ್ನು, ಬಸವಣ್ಣನವರಿಂದ ನುಡಿ ನಡೆಯ ನಡುವೆ ಅಂತರವಿಲ್ಲದೆ ಬದುಕುವುದನ್ನು ಅಳವಡಿಸಿಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಹನುಮನ ನಾಡಿನವರಾದ ನಾವು ಹನುಮನ ಎದೆಗಿಂತ ಮಿಗಿಲಾದ ಗುಡಿ. ರಾಮನಿಗೆ ಬೇರಾವುದೂ ಇಲ್ಲ ಎಂದು ತಿಳಿದೇ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ಊರೂರಿನಲ್ಲೂ ಹನುಮನಿಗೆ ಗುಡಿ ಕಟ್ಟಿದೆವು-ಸಿಎಂ ಸಿದ್ದರಾಮಯ್ಯ. ರಾಮನಿಗೆ ಹನುಮನ ಎದೆಗಿಂತ ಬೇರಾವುದಾದರೂ ಶ್ರೇಷ್ಠ ಗುಡಿ ಕಟ್ಟಲು ಸಾಧ್ಯವೇ? ನಿಜ ರಾಮಭಕ್ತರು ಉತ್ತರ ಹೇಳಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Mon, 22 January 24