4 ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ
ನಾಲ್ಕು ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಬೆಂಗಳೂರಿನ ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಿದೆ. ಹಾಗಾಗಿದ್ರೆ, ಬೆಂಗಳೂರಿನಲ್ಲಿ ಒಟ್ಟು ಎಷ್ಟು ಮತದಾರರು ಇದ್ದಾರೆ? ಪುರಷರು ಎಷ್ಟು ಮಹಿಳಾ ಮತದಾರರ ಸಂಖ್ಯೆ ಎಷ್ಟು? ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು ಇದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಜನವರಿ 22): ಲೋಕಸಭೆ ಚುನಾವಣೆ (Loksabha Elections 2024) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತದಾರರ ಪರಿಷ್ಕರಣೆ ಪಟ್ಟಿಯನ್ನು ಪ್ರಕಟಿಸಿದೆ. ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 98,43,577 ಮತದಾರರಿದ್ದಾರೆ. ಈ ಪೈಕಿ 50,78,525 ಪುರುಷ ಮತದಾರರು ಇದ್ದರೆ, 47,63,268 ಮಹಿಳಾ ಮತದಾರರು ಇದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿ ನಾಥ್ ಮಾಹಿತಿ ನೀಡಿದ್ದಾರೆ.
ಇನ್ನು ಲೋಕಸಭಾ ಕ್ಷೇತ್ರವಾರು ಮತದಾರರ ಅಂಕಿಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 18,09,372 ಮತದಾರರು ಇದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರ- 22,18,437, ಬೆಂಗಳೂರು ದಕ್ಷಿಣ-20,56,109, ಬೆಂಗಳೂರು ನಗರ-ಬೆಂಗಳೂರು ನಗರ ಲೋಕಸಭಾ ಕ್ಷೇತ್ರದಲ್ಲಿ 37,19,723 ಮತದಾರರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮತದಾರರು ಇದ್ದಾರೆ. ಇನ್ನು ಬೆಂಗಳೂರು ಕೇಂದ್ರ ಕ್ಷೇತ್ರ ಕಡಿಮೆ ಮತದಾರರನ್ನು ಹೊಂದಿದೆ.
ಇನ್ನೂ ಓದಿ: ರಾಜ್ಯದ ಮತದಾರರ ಪಟ್ಟಿ ಸಿದ್ಧ: ಮಹಿಳಾ ಮತದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ
ಮೇಲೆ ತಿಳಿಸಿದ ಮತದಾರರನ್ನು 2024, ಜನವರಿ 1ರ ವರೆಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಎಲ್ಲಾ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಸಲಹೆಗಳನ್ನು ಸ್ವೀಕರಿಸಿದ ನಂತರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಬಿಬಿಎಂಪಿ ಕಳೆದ ವರ್ಷ ಅಕ್ಟೋಬರ್ 27 ರಂದು ಕರಡು ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಅದರಲ್ಲಿ 97,90,499 ಮತದಾರರು ಇದ್ದರು. ಇದೀಗ ಹೊಸದಾಗಿ 53,000ಕ್ಕೂ ಹೆಚ್ಚು ಮತದಾರರು ಹೆಚ್ಚಳವಾಗಿದ್ದಾರೆ. ಇನ್ನು ಇದೀಗ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದವರು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಮೂಲಕ ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Mon, 22 January 24