ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರ: ಸಿಎಂ ಅಂಕಲ್​ ಅಭಿಯಾನ ಆರಂಭಿಸಿದ ಕಾಂಗ್ರೆಸ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 14, 2022 | 9:10 PM

ಕಾಂಗ್ರೆಸ್​ನಿಂದ ಸಿಎಂ ಅಂಕಲ್ ಅಭಿಯಾನ ಶುರು ಮಾಡಿದ್ದು, ಮಕ್ಕಳು ಸಿಎಂಗೆ ಪ್ರಶ್ನೆ ಕೇಳುವ ಮಾದರಿಯಲ್ಲೇ ಪ್ರಶ್ನೆ ಕೇಳಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರ: ಸಿಎಂ ಅಂಕಲ್​ ಅಭಿಯಾನ ಆರಂಭಿಸಿದ ಕಾಂಗ್ರೆಸ್​​
ಶಾಲೆಗಳಿಗೆ ಕೇಸರಿ ಬಣ್ಣ, ಸಿಎಂ ಬೊಮ್ಮಾಯಿ
Follow us on

ಬೆಂಗಳೂರು: ಶಾಲೆಗಳಿಗೆ ಕೇಸರಿ ಬಣ್ಣ (saffron paint) ಬಳಿಯುವ ವಿಚಾರ ಸದ್ಯ ರಾಜಕೀಯ ವಲಯದಲ್ಲಿ ಭಾರಿ ವಿವಾದ ಹುಟ್ಟು ಹಾಕಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೂ ಇದು ಕಾರಣವಾಗಿದೆ. ಸದ್ಯ ಇದೇ ವಿಚಾರವಾಗಿ ಕಾಂಗ್ರೆಸ್​ನಿಂದ ಸಿಎಂ ಅಂಕಲ್ ಅಭಿಯಾನ ಶುರು ಮಾಡಿದ್ದು, ಮಕ್ಕಳು ಸಿಎಂಗೆ ಪ್ರಶ್ನೆ ಕೇಳುವ ಮಾದರಿಯಲ್ಲೇ ಪ್ರಶ್ನೆ ಕೇಳಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ ಸಿಎಂ ಅಂಕಲ್. ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು ಶುಚಿಯಾದ ನೀರು ಕೊಡಿ. ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡಿಕೊಡಿ ಎಂದು ಟ್ವೀಟ್​ ಮೂಲಕ ಕಾಂಗ್ರೆಸ್​ ಕಾಲೆಳೆದಿದೆ.

ಕರೋನಾನಂತರದ ಶೈಕ್ಷಣಿಕ ಬಿಕ್ಕಟ್ಟುಗಳನ್ನು ಗಮನಿಸುವುದನ್ನು ಬಿಟ್ಟು ಪಠ್ಯಪುಸ್ತಕದಲ್ಲಿ ಅವಾಂತರ ಸೃಷ್ಟಿಸಿತ್ತು ಸರ್ಕಾರ. ಶಾಲೆ ಶುರುವಾಗಿ ಅರ್ಧ ವರ್ಷ ಕಳೆದರೂ ಪಠ್ಯಪುಸ್ತಕದ ಗೊಂದಲ ಬಗೆಹರಿಸಲಿಲ್ಲ, ಮಕ್ಕಳಿಗೆ ಪಠ್ಯಪುಸ್ತಕ ನೀಡಲಿಲ್ಲ ಸಿಎಂ ಅಂಕಲ್. ಮಕ್ಕಳು ಏನನ್ನ ಓದಬೇಕು, ಪರೀಕ್ಷೆಗೆ ಹೇಗೆ ಸಜ್ಜಾಗಬೇಕು? ನೀವು ಪುಸ್ತಕ ಕೊಡುವುದೆಂದು? ಬಡ ಮಕ್ಕಳ ಶಿಕ್ಷಣಕ್ಕೆ ಬಡತನ, ಹಸಿವು ಅಡ್ಡಿಯಾಗಬಾರದು ಎಂಬ ದೃಷ್ಟಿಯಲ್ಲಿ ಜಾರಿಗೆ ತಂದ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಬಡ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಸರ್ಕಾರ ಎಂದು ಪ್ರಶ್ನಿಸಿದೆ.

ಒಳ್ಳೆಯ ಪಾಠವೂ ಇಲ್ಲ, ಬಿಸಿ ಊಟವೂ ಇಲ್ಲ. ಊಟ, ಪಾಠದ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಳ್ಳುವಿರಿ ಸಿಎಂಅಂಕಲ್? ಅಪೌಷ್ಟಿಕತೆಯ ನಿವಾರಣೆಗಾಗಿ ಶಾಲೆ ಮಕ್ಕಳಿಗೆ ಮೊಟ್ಟೆ ವಿತರಣೆಯ ಯೋಜನೆಗೆ ಗ್ರಹಣ ಹಿಡಿಸಿದೆ ಸರ್ಕಾರ ಸಿಎಂಅಂಕಲ್​. ಸಮರ್ಪಕವಾಗಿ ಮೊಟ್ಟೆ ವಿತರಣೆಗೆ ಕ್ರಮ ಕೈಗೊಳ್ಳಿ, ಅನುದಾನ ಬಿಡುಗಡೆ ಮಾಡಿ, ಮೊಟ್ಟೆಯಲ್ಲೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ ಎಂದು ವಾಗ್ದಾಳಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:04 pm, Mon, 14 November 22