ಬೆಂಗಳೂರು: ಉತ್ತರಪ್ರದೇಶದಲ್ಲಿ ಲಖೀಮ್‌ಪುರ್ ಖೇರಿಯಲ್ಲಿ ಹಿಂಸಾಚಾರ ಹಾಗೂ ಪ್ರಿಯಾಂಕಾ ಗಾಂಧಿ ಗೃಹಬಂಧನ ಖಂಡಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋಗೆ ಮುಂದಾಗಿದ್ದಾರೆ. ಪಂಜಿನ ಮೆರವಣಿಗೆ ಮೂಲಕ ನಾಯಕರ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮೆರವಣಿಗೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಮತ್ತಿತರರು ಭಾಗಿಯಾಗಲಿದ್ದಾರೆ. ಸದ್ಯ ರಾಜ್ಯಪಾಲರ ಭೇಟಿಗೆ ಬಸ್ನಲ್ಲಿ ನಾಯಕರು ಆಗಮಿಸಿದ್ದು ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಸೇರಿ 15 ನಾಯಕರಿಗೆ ಮಾತ್ರ ರಾಜ್ಯಪಾಲರ ಭೇಟಿಗೆ ಅವಕಾಶ ನೀಡಲಾಗಿದೆ.
ಟ್ರಾಫಿಕ್‌ಜಾಮ್‌ನಿಂದ ವಾಹನ ಸವಾರರು ತೀವ್ರ ಪರದಾಟ
ಕಾಂಗ್ರೆಸ್ ಪಂಜಿನ ಮೆರವಣಿಗೆಯಿಂದ ಟ್ರಾಫಿಕ್‌ಜಾಮ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್‌ಜಾಮ್‌ನಿಂದ ವಾಹನ ಸವಾರರು ತೀವ್ರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ವೀನ್ಸ್ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಹಾಗೂ ರಾಜಭವನದ ಸುತ್ತಮುತ್ತಲಿನ ರಸ್ತೆಗಳಲ್ಲೂ ಟ್ರಾಫಿಕ್‌ಜಾಮ್ ಸಮಸ್ಯೆ ಕಾಡುತ್ತಿದೆ.
ರಾಜಭವನಕ್ಕೆ ಪೊಲೀಸ್ ಬಂದೋಬಸ್ತ್
ಕಾಂಗ್ರೆಸ್ ನಾಯಕರ ರಾಜಭವನ ಚಲೋ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದ ರಾಜಭವನಕ್ಕೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ರೈತರ ಕೊಲೆ ನಡೆದಿರುವುದು ಇಡೀ ಮಾನವ ಕುಲಕ್ಕೆ ಅಪಮಾನ
ಇನ್ನು ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ರೈತರು ಹೋರಾಟ ಮಾಡಬೇಕಾದರೆ ಪ್ರಧಾನಿಯಾಗಲಿ, ಒಬ್ಬರಾಗಲಿ ಗೌರವದಿಂದ ನೋಡಲಿಲ್ಲ. ನೋವು ಕೇಳಲಿಲ್ಲ. ರೈತರ ಕೊಲೆ ನಡೆದಿರುವುದು ಇಡೀ ಮಾನವ ಕುಲಕ್ಕೆ ಅಪಮಾನ. ಕಾರ್ಯಕರ್ತರು ಕೂಡ ಮೃತಪಟ್ಟಿದ್ದು ನಮಗೆ ದುಃಖವಾಗಿದೆ. ಆದರೆ ಈ ಸಾವು ಯಾರಿಂದ ಆಯ್ತು ಎನ್ನೋದು ಪ್ರಶ್ನೆ. ಒಬ್ಬ ಕೊಲೆ ಮಾಡಿದ ಮಂತ್ರಿಯನ್ನು ಅರೆಸ್ಟ್ ಮಾಡಲಿಲ್ಲ. ಹಾಗಿದ್ದರೆ ಇದು ಇವರದು ಬೇರೆ ಕಾನೂನು ಇದೆಯಾ? ಮಣ್ಣಿನ ಮಕ್ಕಳಿಗೆ ಗೌರವ ನೀಡಿ ರಾಜೀನಾಮೆ ಕೊಡಬೇಕಿತ್ತು. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಅದು ಯಾವುದನ್ನೂ ಕೂಡ ಅವರು ಮಾಡಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇನ್ನು ಇದೇ ವೇಳೆ ಮಾತನಾಡುತ್ತ, ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುತ್ತಿಗೆ ಹಾಕುವಂತೆ ಕರೆ ನೀಡಲಾಗಿದೆ. ಮಂತ್ರಿಗಳಿಗೆ ಮುತ್ತಿಗೆ ಹಾಕಿ ಮನವಿ ಕೊಡಬೇಕು. ಇಡೀ ದೇಶ ಪ್ರಿಯಾಂಕಾ, ಸೋನಿಯಾ, ರಾಹುಲ್ ಜತೆಗಿದ್ದೇವೆ ಎಂದರು.
ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಬಿಜೆಪಿಯವರು
ಉತ್ತರಪ್ರದೇಶ ಘಟನೆಗೆ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು. ಹೋರಾಟ, ಪ್ರತಿಭಟನೆ ನಡೆಸೋದು ಭಾರತೀಯರ ಹಕ್ಕು. ಸೌಜನ್ಯಕ್ಕಾದರೂ ರೈತರೊಂದಿಗೆ ಮಾತನಾಡಬೇಕಲ್ಲವೇ, ಇದೇನು ಸರ್ವಾಧಿಕಾರವಾ, ಹಿಟ್ಲರ್ ಆಡಳಿತವಾ? ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಬಿಜೆಪಿಯವರು. ಬಿಜೆಪಿ ಗುಂಡು ಹಾಕಿ ಗೆಲ್ತೀವಿ ಅಂದ್ರೆ ಬೆಲೆ ತೆರಬೇಕಾಗುತ್ತದೆ. ಕೂಡಲೇ ಯೋಗಿ ಆದಿತ್ಯನಾಥ್ ರಾಜೀನಾಮೆ ಕೊಡಬೇಕು. ನಾಳೆ ಎಲ್ಲ ಜಿಲ್ಲೆಗಳಲ್ಲಿ ಡಿಸಿ ಕಚೇರಿಗೆ ಘೇರಾವ್ ಹಾಕುತ್ತೇವೆ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಬಳಿಕ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಶ್ರೀಮತಿ ಪ್ರಿಯಾಂಕಾ ಗಾಂಧಿಯವರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರೊಡನೆ ರಾಜಭವನದೆಡೆಗೆ ಪ್ರತಿಭಟನೆ ನಡೆಸುತ್ತ ಸಾಗುತ್ತಿದ್ದೇವೆ.
#LakhimpurKheri pic.twitter.com/ricbFLq3Vr
— DK Shivakumar (@DKShivakumar) October 4, 2021
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕೈಯಲ್ಲಿ ಪೊರಕೆ! ರೂಮನ್ನು ಕ್ಲೀನ್ ಮಾಡಿದ ಪರಿ ಹೇಗಿತ್ತು ನೀವೇ ನೋಡಿ
Published On - 7:38 pm, Mon, 4 October 21