ಬೆಂಗಳೂರು: ಕೊವಿಡ್ 19 ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಮುಂದಿನ ನಾಲ್ಕು ತಿಂಗಳು ಭಾರಿ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಮುಂದಿನ 4 ತಿಂಗಳು ಹೆಚ್ಚು ನಿಗಾ ವಹಿಸುವ ಅಗತ್ಯ ಇದೆ ಎಂದು ಸರ್ಕಾರಕ್ಕೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳು ಹಾಗೂ ಜನವರಿ ತಿಂಗಳು ತುಂಬಾ ಅಪಾಯ ಎಂದು ಸಮಿತಿ ತಿಳಿಸಿದೆ. ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆ ನಿಗಾವಹಿಸಬೇಕು ಎಂದು ಸರ್ಕಾರಕ್ಕೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.
ಕೊರೊನಾ ಸೋಂಕು ಇಳಿಕೆಯಾಯ್ತು ಎಂದು ಅಜಾಗರೂಕರಾಗಿ ವರ್ತಿಸಿದರೆ ಅಪಾಯ ಎದುರಾಗಬಹುದು. ಸದ್ಯ ನಿತ್ಯ 500ರ ಆಸುಪಾಸು ಹೊಸ ಪಾಸಿಟಿವ್ ಕೇಸ್ ಪತ್ತೆ ಆಗುತ್ತಿದೆ. ಮುಂದಿನ 4 ತಿಂಗಳು ಹೆಚ್ಚು ನಿಗಾ ವಹಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ದಸರಾ, ದೀಪಾವಳಿ, ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಜಾಗ್ರತೆ ಅಗತ್ಯವಾಗಿದೆ.
ಪಟಾಕಿ ಖರೀದಿಗೆ ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಹೊಸ ವರ್ಷ ಆಚರಣೆಗೆ ಮೋಜು, ಮಸ್ತಿ ಮಾಡುವವರ ಸಂಖ್ಯೆ ಅಧಿಕವಾಗಿ ಇರಲಿದೆ. ಸದ್ಯ ರಾಜ್ಯದಲ್ಲಿ 70 ಸಾವಿರ ಕೊರೊನಾ ಟೆಸ್ಟ್ ಮಾತ್ರ ನಡೆಸಲಾಗುತ್ತಿದೆ. ಅದನ್ನು 1.20 ಲಕ್ಷ ಟೆಸ್ಟಿಂಗ್ಗೆ ಏರಿಸಬೇಕು ಎಂದು ಸಲಹೆ ನೀಡಲಾಗಿದೆ. ಮೂರನೇ ಅಲೆ ಸಮೀಪಿಸದಂತೆ ಏನು ಕ್ರಮ ವಹಿಸಬೇಕು ಎಂದು ಸಲಹಾ ಸಮಿತಿ ತಿಳಿಸಿದೆ.
3ನೇ ಅಲೆ ಸಮೀಪಿಸದಂತೆ ಕೈಗೊಳ್ಳಲು ನೀಡಿರುವ ಸೂಚನೆ:
– ಒಬ್ಬ ಸೋಂಕಿತನಿಗೆ 30 ಜನ ಸಂಪರ್ಕಿತರನ್ನ ಪತ್ತೆ ಮಾಡಬೇಕು
– ರೇಂಡಮ್ನಲ್ಲಿ ನೆಗೆಟಿವ್ ಬಂದರೆ, ಕಡ್ಡಾಯವಾಗಿ ಆರ್ಟಿಪಿಸಿಆರ್ ಟೆಸ್ಟ್ ಮಾಡಬೇಕು
– ಒಟ್ಟು ಟೆಸ್ಟ್ಗಳಲ್ಲಿ ಶೇ.30 ರಷ್ಟು ಮಾತ್ರ ಆ್ಯಂಟಿಜನ್ ಟೆಸ್ಟ್ ಮಾಡಬೇಕು
– ಸ್ಯಾಂಪಲ್ ಕಲೆಕ್ಟ್ ಮಾಡಿದ 24 ಗಂಟೆಯೊಳಗೆ ಫಲಿತಾಂಶ ನೀಡಬೇಕು
– ತಾಲೂಕುಗಳಲ್ಲಿ ಶೇ.2ಕ್ಕಿಂತ ಟೆಸ್ಟಿಂಗ್ ರೇಟ್ ಬಂದರೆ, ಒಬ್ಬರಿಗೆ 5 ಜನರ ಪರೀಕ್ಷೆ ಮಾಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: Covid 19 Guidelines: ಕೊವಿಡ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ; ಈಜುಕೊಳ ಕಾರ್ಯಾಚರಣೆಗೆ ಅವಕಾಶ
ಇದನ್ನೂ ಓದಿ: School Reopen: ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ
Published On - 8:41 pm, Mon, 18 October 21