ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಕೊವಿಡ್ ನಿಯಮ ಜಾರಿಗೆ ಹೋಟೆಲ್ ಮಾಲೀಕರ ಸಂಘ ವಿರೋಧ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2022 | 4:04 PM

ರಾಜ್ಯದಲ್ಲಿ ಮತ್ತೆ ಕೋವಿಡ್ ಹೆಚ್ಚಳ ಭೀತಿ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡ್ಡಿ ಪಡಿಸದಂತೆ ಹೋಟೆಲ್ ಅಸೋಸಿಯೇಷನ್​ನಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಕೊವಿಡ್ ನಿಯಮ ಜಾರಿಗೆ ಹೋಟೆಲ್ ಮಾಲೀಕರ ಸಂಘ ವಿರೋಧ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಚೀನಾ, ಜಪಾನ್, ಕೊರಿಯಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು (Coronavirus) ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮುಂದಾಗಿದ್ದು ಈ ಬಗ್ಗೆ ಇಂದು (ಡಿ.22) ಸಭೆ ನಡೆಸಿ ಚರ್ಚಿಸಲಿದ್ದಾರೆ. ಮತ್ತೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆತಂಕ ಮನೆ ಮಾಡಿದ್ದು, ಮುಂಬರುವ ಕ್ರಿಸ್ಮಸ್, ಹೊಸವರ್ಷಾಚರಣೆಗೆ ಕೊರೊನಾ ಅಡ್ಡಿಪಡಿಸಬಹುದಾ ಎಂಬ ಗೊಂದಲ ಉಂಟಾಗಿದೆ. ಸದ್ಯ ರಾಜ್ಯದಲ್ಲಿ ಮತ್ತೆ ಕೋವಿಡ್ ಹೆಚ್ಚಳ ಭೀತಿ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡ್ಡಿ ಪಡಿಸದಂತೆ ಹೋಟೆಲ್ ಅಸೋಸಿಯೇಷನ್​ನಿಂದ ಮನವಿ ಮಾಡಲಾಗಿದೆ.

ಕೊವಿಡ್ ನಿಯಮ ಜಾರಿಗೆ ಹೋಟೆಲ್ ಮಾಲೀಕರ ಸಂಘ ವಿರೋಧ

ಈ ಕುರಿತಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್​ ಅವರು ಮಾತನಾಡಿ, ಕಳೆದ 2 ವರ್ಷದಲ್ಲಿ ಕೊರೊನಾ ಸಂಕಷ್ಟದಿಂದ ಹೊಸ ವರ್ಷದ ಆಚರಣೆ ಮಾಡಿಲ್ಲ. ಹೀಗಾಗಿ ಉದ್ಯಮ‌ ಪೂರ್ತಿ ನೆಲಕಚ್ಚಿತ್ತು. ಈಗ ಮತ್ತೆ ನೆರೆ ರಾಷ್ಟ್ರದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನಲೆ ನಮ್ಮ ರಾಜ್ಯದಲ್ಲೂ ಕೆಲ ಕೋವಿಡ್ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧಾರ ಮಾಡುತ್ತಿದೆ. ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳುವಂತ ನಿರ್ಧಾರ ಬೇಡ. ಅವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹೋಟೆಲ್ ಸಂಘದ ಜೊತೆ ಸಭೆ ನಡೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್ ಹೊಸ ತಳಿ: ಎರಡು ವಾರ ಕಾದು ನೋಡುವ ತಂತ್ರಕ್ಕೆ ಮುಂದಾದ ತಜ್ಞರು

ಹೊಸ ಮಾರ್ಗಸೂಚಿ ಬಿಡುಗಡೆಗೆ ಮುಂದಾದ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾದ ಹಿನ್ನೆಲೆ ಕೊರೊನಾ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಚೀನಾ ಹಾಗೂ ಅಮೇರಿಕಾದಲ್ಲಿ ಸೋಂಕು ಗಣನೀಯ ಏರಿಕೆ ಕಾಣುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಹೊಸ ರೂಪಾಂತರಿಗಳ ಪತ್ತೆಗೆ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದೆ. ಎಲ್ಲಾ ಪಾಸಿಟಿವ್ ಕೇಸ್ ಸಾಂಪಲ್ ಗಳನ್ನ ಜೀನೋಮ್ ಸೀಕ್ವೆನ್ಸಿಂಗ್ ಕಳಿಸುವಂತೆ ಸೂಚನೆ ನೀಡಿದ್ದು ಸೀಕ್ವೆನ್ಸಿಂಗ್ ಮಾಡಲು INSCOG ನ ಅನುಮತಿ ಪಡೆದ ಲ್ಯಾಬ್ ಗಳಿಗೆ ಕಳಿಸುವಂತೆ ಸೂಚನೆ ನೀಡಿದೆ.

ದೇಶದಲ್ಲಿ 5 ಪೋಲ್ಡ್ ಸೂತ್ರ ಪಾಲನೆ ಮಾಡೋ ಮೂಲಕ ಕೊವಿಡ್ ಆರ್ಭಟಕಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ. ಕಳೆದ ಸಭೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಗೆ ಹೊಸ ರೂಪಾಂತರಿಗಳ ಬಗ್ಗೆ ಎಚ್ಚರಿಕೆ ನೀಡಿದ್ದು ಟೆಸ್ಟ್, ಟ್ರಾಕ್, ಟ್ರೀಟ್, ವ್ಯಾಕ್ಸಿನೇಷನ್ ಅನುಸರಣೆ ಮಾಡುವಂತೆ ಸೂಚನೆ ಕೊಟ್ಟಿದೆ. ಮತ್ತೆ ಕೊರೊನಾ ಏರಿಕೆ ಕಂಡ್ರೆ ಕೊರೊನಾ ಮಾರ್ಗಸೂಚಿಗಳ ಜಾರಿ ಅಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಆತಂಕ: ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್? ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಶುರು

ನಾವು ಕೂಡ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ

ಇನ್ನು ಕೊರೊನಾ ಸಂಬಂಧ ಮಾತನಾಡಿದ ಸಚಿವ ಸುಧಾಕರ್, ಕೊವಿಡ್ ಬಗ್ಗೆ ರಾಜ್ಯದ ಜನರು ಆತಂಕಪಡಬೇಕಿಲ್ಲ. ಕೊವಿಡ್ ಸಂಬಂಧ ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಧಾನಿ ಮೋದಿ ಕೂಡ ಸಲಹೆಗಳನ್ನು ನೀಡಲಿದ್ದಾರೆ. ನಾವು ಕೂಡ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:03 pm, Thu, 22 December 22