AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi: ಶವೋಮಿಗೆ ಬಿಗ್ ರಿಲೀಫ್; 3,700 ಕೋಟಿ ವಶಕ್ಕೆ ಪಡೆಯುವ ಐಟಿ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

ಭಾರತದಿಂದ ಹೊರಗಡೆ ಇರುವ ಕಂಪನಿಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ರಾಯಧನ ಹಾಗೂ ಇನ್ಯಾವುದೇ ರೂಪದಲ್ಲಿ ಸ್ಥಿರ ಠೇವಣಿ ಇಡುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ.

Xiaomi: ಶವೋಮಿಗೆ ಬಿಗ್ ರಿಲೀಫ್; 3,700 ಕೋಟಿ ವಶಕ್ಕೆ ಪಡೆಯುವ ಐಟಿ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಶವೋಮಿImage Credit source: Reuters
TV9 Web
| Updated By: Ganapathi Sharma|

Updated on:Dec 22, 2022 | 5:10 PM

Share

ಬೆಂಗಳೂರು: ಶವೋಮಿ ಟೆಕ್ನಾಲಜಿ ಇಂಡಿಯಾದ (Xiaomi Technology India) ಸ್ಥಿರ ಠೇವಣಿಗಳಿಂದ (FD) 3,700 ಕೋಟಿ ರೂ. ವಶಕ್ಕೆ ಪಡೆಯುವ ಆದಾಯ ತೆರಿಗೆ ಇಲಾಖೆ (Income Tax) ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಪಡಿಸಿದೆ. ಇದರೊಂದಿಗೆ, ಚೀನಾ ಮೂಲದ ಕಂಪನಿ ನಿರಾಳವಾದಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರು ಡಿಸೆಂಬರ್ 16ರಂದು ತೀರ್ಪು ನೀಡಿದ್ದು, 2022ರ ಆಗಸ್ಟ್ 11ರಂದು ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ನೀಡಿದ್ದ ಆದೇಶವನ್ನು ರದ್ದುಪಡಿಸಿದ್ದಾರೆ. ಆದರೆ, ಮೂರು ಷರತ್ತುಗಳನ್ನು ವಿಧಿಸಿದ್ದಾರೆ.

ಭಾರತದಿಂದ ಹೊರಗಡೆ ಇರುವ ಕಂಪನಿಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ರಾಯಧನ (Royalty) ಹಾಗೂ ಇನ್ಯಾವುದೇ ರೂಪದಲ್ಲಿ ಸ್ಥಿರ ಠೇವಣಿ ಇಡುವಂತಿಲ್ಲ ಎಂದು ಮೊದಲ ಷರತ್ತನ್ನು ಕೋರ್ಟ್ ವಿಧಿಸಿದೆ. ಸಬ್ಜೆಕ್ಟ್ ಫಿಕ್ಸೆಡ್ ಡಿಪಾಸಿಟ್​ ಖಾತೆಗಳಿಂದ ಓವರ್​ಡ್ರಾಫ್ಟ್​ಗಳನ್ನು ಪಡೆಯಲು ಮತ್ತು ಅಂಥ ಓವರ್​ಡ್ರಾಫ್ಟ್​ಗಳನ್ನು ಮಾತ್ರವೇ ಭಾರತದಿಂದ ಹೊರಗಡೆ ಇರುವ ಕಂಪನಿಗಳಿಗೆ ಕಳುಹಿಸಬಹುದು ಎಂದು ಎರಡನೇ ಷರತ್ತಿನಲ್ಲಿ ಹೈಕೋರ್ಟ್​ ಶವೋಮಿಗೆ ತಿಳಿಸಿದೆ. ಮೂರನೇ ಷರತ್ತಿನಲ್ಲಿ 2019-20, 2020-21 ಮತ್ತು 2021-22 ಮೌಲ್ಯಮಾಪನ ವರ್ಷಗಳ ಮೌಲ್ಯಮಾಪನವನ್ನು ಆದಾಯ ತೆರಿಗೆ ಇಲಾಖೆಯು 2023ರ ಮಾರ್ಚ್ 31ರ ಒಳಗಾಗಿ ಮಾಡಬೇಕು ಎಂದೂ ನಿರ್ದೇಶಿಸಿದೆ.

ಇದನ್ನೂ ಓದಿ: Xiaomi Layoffs: ಉದ್ಯೋಗಿಗಳಿಗೆ ಶಾಕ್ ನೀಡಿದ ಶವೋಮಿ; ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ

ಚೀನಾ ಮೂಲದ ಕಂಪನಿಯು ರಾಯಲ್ಟಿ ಹೆಸರಿನಲ್ಲಿ ಹೊರ ದೇಶಗಳಿಗೆ ಹಣ ಕಳುಹಿಸುತ್ತಿದೆ. ಆ ಮೂಲಕ ತೆರಿಗೆ ವಂಚಿಸುತ್ತಿದೆ ಎಂದು ಆಪಾದಿಸಿದ್ದ ಆದಾಯ ತೆರಿಗೆ ಇಲಾಖೆ ಶವೋಮಿ ವಿರುದ್ಧ ಆದೇಶ ನೀಡಿತ್ತು.

ಇಂಥದ್ದೇ ಮತ್ತೊಂದು ಪ್ರಕರಣವನ್ನು ಜಾರಿ ನಿರ್ದೇಶನಾಲಯದಿಂದ (ಇ.ಡಿ) ಶವೋಮಿ ಎದುರಿಸುತ್ತಿದೆ. ಶವೋಮಿಯ 5,551 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯ ಆದೇಶಿಸಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನಡೆಸಿದ್ದಾರೆ. ವಿಚಾರಣೆ ನವೆಂಬರ್ 17ರಂದು ಮುಕ್ತಾಯಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Thu, 22 December 22