Metro Cash & Carry: 2,850 ಕೋಟಿಗೆ ರಿಲಯನ್ಸ್ ರಿಟೇಲ್ ಪಾಲಾದ ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ
2003ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಮೆಟ್ರೊ, ನಂತರ ಕ್ಯಾಶ್ ಆ್ಯಂಡ್ ಕ್ಯಾರಿ ಉದ್ಯಮ ಆರಂಭಿಸಿತು. ಪ್ರಸ್ತುತ ದೇಶದ 21 ನಗರಗಳಲ್ಲಿ 31 ಬೃಹತ್ ಮಳಿಗೆಗಳನ್ನು ಹೊಂದಿರುವ ಮೆಟ್ರೊ 3,500 ಉದ್ಯೋಗಿಗಳನ್ನು ಹೊಂದಿದೆ.
ನವದೆಹಲಿ: ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Metro Cash & Carry India) ಅನ್ನು ರಿಲಯನ್ಸ್ ಇಂಡಸ್ಟ್ರೀಸ್ನ (Reliance Industries) ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ 2,850 ಕೋಟಿ ರೂ.ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಮೂಲಕ ಭಾರತದ ಸಗಟು ಮತ್ತು ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಉದ್ಯಮ ವಿಸ್ತರಿಸಲು ಮುಕೇಶ್ ಅಂಬಾನಿ (Mukesh Ambani) ನೇತೃತ್ವದ ಕಂಪನಿ ಮುಂದಾಗಿದೆ. ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ ಇಂಡಿಯಾವು ಜರ್ಮನಿಯ ಕಂಪನಿ ‘ಮೆಟ್ರೊ ಎಜಿ’ಯ ಭಾರತದ ಘಟಕವಾಗಿದ್ದು, ಇಲ್ಲಿ ಸಗಟು ವಹಿವಾಟು ನಡೆಸುತ್ತಿದೆ.
ರಿಲಯನ್ಸ್ ರಿಟೇಲ್ ಸದ್ಯ ದೇಶದಲ್ಲಿ 16,600 ಮಳಿಗೆಗಳನ್ನು ಹೊಂದಿದ್ದು, ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ ಖರೀದಿಯೊಂದಿಗೆ ಚಿಲ್ಲರೆ ವಹಿವಾಟಿನ ಜತೆಗೆ ಸಗಟು ವಹಿವಾಟು ಕ್ಷೇತ್ರದಲ್ಲಿಯೂ ಮತ್ತಷ್ಟು ಬಲಗೊಳ್ಳಲಿದೆ.
2003ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಮೆಟ್ರೊ, ನಂತರ ಕ್ಯಾಶ್ ಆ್ಯಂಡ್ ಕ್ಯಾರಿ ಉದ್ಯಮ ಆರಂಭಿಸಿತು. ಪ್ರಸ್ತುತ ದೇಶದ 21 ನಗರಗಳಲ್ಲಿ 31 ಬೃಹತ್ ಮಳಿಗೆಗಳನ್ನು ಹೊಂದಿರುವ ಮೆಟ್ರೊ 3,500 ಉದ್ಯೋಗಿಗಳನ್ನು ಹೊಂದಿದೆ. ಈ ಮಳಿಗೆಗಳು ಹಣ್ಣುಗಳು, ತರಕಾರಿ, ದಿನಸಿ ಸಾಮಗ್ರಿ, ಎಲೆಕ್ಟ್ರಾನಿಕ್ಸ್, ಗೃಹ ಬಳಕೆಯ ಸರಕುಗಳನ್ನು ಮಾರಾಟ ಮಾಡುತ್ತಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕಚೇರಿಗಳು, ಕಂಪನಿಗಳು, ಸಣ್ಣ ಚಿಲ್ಲರೆ ವ್ಯಾಪಾರಿಗಳು ಮತ್ತು ಕಿರಾನಾ ಸ್ಟೋರ್‌ಗಳಂತಹ ವ್ಯಾಪಾರ ಗ್ರಾಹಕರಿಗೂ ವಸ್ತುಗಳ ಮಾರಾಟ ಮಾಡುತ್ತಿದೆ. ಒಟ್ಟು ಮಳಿಗೆಗಳ ಪೈಕಿ ಅರ್ಧದಷ್ಟು ದಕ್ಷಿಣ ಭಾರತದಲ್ಲೇ ಇವೆ.
ಇದನ್ನೂ ಓದಿ: Reliance FMCG Independence: ಗುಜರಾತ್ನಲ್ಲಿ ‘ಇಂಡಿಪೆಂಡೆನ್ಸ್’ ಬ್ರ್ಯಾಂಡ್ ಬಿಡುಗಡೆ ಮಾಡಿದ ರಿಲಯನ್ಸ್
ಬಿ2ಬಿ ಕ್ಯಾಶ್ ಆ್ಯಂಡ್ ಕ್ಯಾರಿ ಮೂಲಕ ಕಂಪನಿಯು ಭಾರತದಲ್ಲಿ 30 ಲಕ್ಷ ಗ್ರಾಹಕರನ್ನು ಹೊಂದಿದೆ. ಈ ಪೈಕಿ 10 ಲಕ್ಷ ಮಂದಿ ಇಬಿ2ಬಿ ಆ್ಯಪ್ ಮೂಲಕ ಸತತವಾಗಿ ಖರೀದಿ ಮಾಡುವ ಗ್ರಾಹಕರಾಗಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
2022ರಲ್ಲಿ ಮೆಟ್ರೊ ಇಂಡಿಯಾ 7,700 ಕೋಟಿ ರೂ. ವಹಿವಾಟು ನಡೆಸಿದೆ. ಇದು ಭಾರತದಲ್ಲಿ ಘಟಕ ಆರಂಭಿಸಿದ ಬಳಿಕ ಕಂಪನಿ ನಡೆಸಿದ ಗರಿಷ್ಠ ವಹಿವಾಟಾಗಿದೆ.
ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ ಮೂಲಕ ಉದ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ದಾಪುಗಾಲಿಕ್ಕಲು ಯತ್ನಿಸಿದೆ. ಇತ್ತೀಚೆಗೆಷ್ಟೇ ಕಂಪನಿಯು ಜಸ್ಟ್ ಡಯಲ್, ಡುಂಜೊ ಸ್ವಾಧೀನಪಡಿಸಿಕೊಂಡಿತ್ತು. ಜತೆಗೆ ಗುಜರಾತ್ನಲ್ಲಿ ‘ಇಂಡಿಪೆಂಡೆನ್ಸ್’ ಹೆಸರಿನ ಎಫ್ಎಂಸಿಜಿ ಗ್ರಾಹಕ ಸರಕು ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿತ್ತು. ಇದನ್ನು ಸದ್ಯದಲ್ಲೇ ದೇಶದಾದ್ಯಂತ ವಿಸ್ತರಿಸುವುದಾಗಿ ಕಂಪನಿ ಹೇಳಿದೆ.