ಬೆಂಗಳೂರು: ಮದ್ಯ ತಯಾರಿಕೆಗೆ ಬಳಸಲಾಗುವ ಕಾಕಂಬಿ ರಫ್ತಿನಲ್ಲಿ (Molasses export) ಅಕ್ರಮ ನಡೆಸಿದ ಆರೋಪ ಸಂಬಂಧ ಮಾಜಿ ಸಚಿವ ಕೆ.ಗೋಪಾಲಯ್ಯ (K Gopalaiah) ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನಿಖಾ ಪ್ರಗತಿ ವರದಿ ನೀಡುವಂತೆ ಲೋಕಾಯುಕ್ತ ಎಸ್‌ಪಿಗೆ ಸೂಚಿಸಿದೆ.
ಕಾಕಂಬಿ ರಫ್ತಿನಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿ ಮಂಜುನಾಥ.ಎಸ್ ಎಂಬುವವರು ಫೆಬ್ರವರಿ 7 ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೆ.ಎನ್.ರಿಸೋರ್ಸಸ್ ಸಂಸ್ಥೆ ಮೂಲಕ ನಿಯಮಬಾಹಿರವಾಗಿ 2 ಲಕ್ಷ ಟನ್ ಕಾಕಂಬಿ ರಫ್ತಿಗೆ ಅವಕಾಶ ನೀಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ ದೂರು ನೀಡಿದ್ದರೂ ತನಿಖೆ ನಡೆಸದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್, ಜುಲೈ 25ಕ್ಕೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಎಸ್‌ಪಿಗೆ ಸೂಚಿಸಿದೆ.
ಖಾಸಗಿ ಕಂಪನಿಯೊಂದಕ್ಕೆ ಲಾಭ ಮಾಡಿಕೊಡಲು ಹಾಗೂ ಕಿಕ್ ಬ್ಯಾಕ್ ಪಡೆಯಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತ್ತು. ಕಾಕಂಬಿ ಎಂದು ಕರೆಯಲ್ಪಡುವ ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನವನ್ನು ಹೊರರಾಜ್ಯಕ್ಕೆ ಹೊರ ರಾಷ್ಟ್ರಗಳಿಗೆ ರಫ್ತು ಮಾಡಲು ಕಿಕ್ ಬ್ಯಾಕ್ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಸೌದಿಯಲ್ಲಿ ಭಾರತೀಯನ ಬಂಧನ: ಕುಲಭೂಷಣ್ ಮಾದರಿಯಲ್ಲಿ ರಾಜತಾಂತ್ರಿಕ ಕ್ರಮವೇಕಿಲ್ಲ ಎಂದ ಕರ್ನಾಟಕ ಹೈಕೋರ್ಟ್
ಹೊರರಾಷ್ಟ್ರಕ್ಕೆ ಕಾಕಂಬಿಯನ್ನು ರಫ್ತು ಮಾಡುತ್ತಿದ್ದ ರಾಜ್ಯದ ಸ್ಥಳೀಯ ಕಂಪನಿಗಳು ಮತ್ತು ರಾಜ್ಯದ ಬಂದರನ್ನು ಹೊರಗಿಟ್ಟು ಮುಂಬೈನ ಕೆ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಅನುಮತಿ ನೀಡಲಾಗಿತ್ತು. ಅನುಮತಿ ನೀಡುವ ಪ್ರಸ್ತಾವನೆಗೆ ಸಹಿ ಹಾಕುವ ಮೂಲಕ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಗೋಪಾಲಯ್ಯ ಅವರು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಗುರುತರವಾದ ಆರೋಪಕ್ಕೂ ಗುರಿಯಾಗಿದ್ದರು.
ಅಷ್ಟೇ ಅಲ್ಲದೆ, ಕಾಕಂಬಿ ರಫ್ತು ಗುತ್ತಿಗೆದಾರ ಹಾಗೂ ಖಾಸಗಿ ಕಂಪನಿಗೆ ಸೇರಿದ್ದ ಇಬ್ಬರು ಮಾತನಾಡಿದ ಎನ್ನಲಾಗಿದ್ದ ಆಡಿಯೋವನ್ನು ಈ ಹಿಂದೆ ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಅಲ್ಲದೆ, ನಮ್ಮಲ್ಲಿ ಕಾರವಾರ ಬಂದರು ಇರುವಾಗ ಗೋವಾದಿಂದ ಯಾಕೆ ರಫ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ