ಸೌದಿಯಲ್ಲಿ ಭಾರತೀಯನ ಬಂಧನ: ಕುಲಭೂಷಣ್ ಮಾದರಿಯಲ್ಲಿ ರಾಜತಾಂತ್ರಿಕ ಕ್ರಮವೇಕಿಲ್ಲ ಎಂದ ಕರ್ನಾಟಕ ಹೈಕೋರ್ಟ್
ನಕಲಿ ಫೇಸ್‌ಬುಕ್ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣದಲ್ಲಿ ಭಾರತದ ಪ್ರಜೆ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಪಾಕ್ ಬಂಧಿಸಿರುವ ಕುಲಭೂಷಣ್ ಯಾದವ್ ಮಾದರಿಯಲ್ಲಿ ರಾಜತಾಂತ್ರಿಕ ಕ್ರಮವೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ವಿದೇಶಾಂಗ ಇಲಾಖೆಯನ್ನು ಪ್ರಶ್ನಿಸಿದೆ.
ಬೆಂಗಳೂರು: ನಕಲಿ ಫೇಸ್‌ಬುಕ್ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ ಎಂಬ ಸುಳ್ಳು ಆರೋಪದ ಮೇಲೆ ಸೌದಿ ಅರೇಬಿಯಾದಲ್ಲಿ (Saudi Arabia) ಬಂಧಿತನಾಗಿರುವ ಭಾರತೀಯನ ವಿಚಾರದಲ್ಲಿ ಕುಲಭೂಷಣ್ ಯಾದವ್ ಮಾದರಿಯಲ್ಲಿ ರಾಜತಾಂತ್ರಿಕ ಕ್ರಮವೇಕಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಪ್ರಶ್ನಿಸಿದೆ.
ನಕಲಿ ಪೋಸ್ಟ್ ಬಗ್ಗೆ ಶೀಘ್ರ ತನಿಖೆ ಕೋರಿ ಸೌದಿಯಲ್ಲಿ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಶೈಲೇಶ್ ಕುಮಾರ್ ಅವರ ಪತ್ನಿ ಕವಿತಾ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್ ದೀಕ್ಷಿತ್, ರಾಜತಾಂತ್ರಿಕ ಕ್ರಮದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ, ನಕಲಿ ಪೋಸ್ಟ್ ಮಾಡಿದವರ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಬಂಧಿತ ಶೈಲೇಶ್ ವಿರುದ್ಧ ಪೂರ್ವಾಗ್ರಹದ ಕ್ರಮವಾಗಬಾರದು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ವಿದೇಶಾಂಗ ಇಲಾಖೆಗೆ ಸೂಚನೆ ನೀಡಿದ್ದಾರೆ.
ಮಂಗಳೂರಿನ ಬಿಕರ್ನಕಟ್ಟೆ ವಾಸಿ ಶೈಲೇಶ್ ಕುಮಾರ್ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ಕುಬರ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಸಿಎಎ ಮತ್ತು ಎನ್ಆರ್ಸಿ ಜಾರಿಗೆ ಮುಂದಾಗಿತ್ತು. ಇದನ್ನು ಬೆಂಬಲಿಸಿ ಶೈಲೇಶ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ನೋಡಿದ ಮಂಗಳೂರು ಮೂಲದ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಶೈಲೇಶ್ಗೆ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: ಜಗಳದ ವೇಳೆ ಮರ್ಮಾಂಗ ಹಿಸುಕಿದ ಕೃತ್ಯ ಕೊಲೆ ಯತ್ನವಲ್ಲ: ಆರೋಪಿಯ ಶಿಕ್ಷೆ ಕಡಿತಗೊಳಿಸಿದ ಹೈಕೋರ್ಟ್
ಅಲ್ಲದೆ, 2022ರ ಫೆಬ್ರವರಿಯಲ್ಲಿ ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸೌದಿ ಅರೇಬಿಯಾ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಹಾಕಲಾಗಿತ್ತು. ಪ್ರಕರಣ ಸಂಬಂಧ ಸೌದಿ ಪೊಲೀಸರು ಶೈಲೇಶ್ನನ್ನು ಬಂಧಿಸಿದ್ದರು. ಇತ್ತ ಶೈಲೇಶ್ ಪತ್ನಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.
ಅದಾಗ್ಯೂ, ಯಾವುದೇ ಮಾಹಿತಿ ನೀಡದ ಫೇಸ್‌ಬುಕ್ ಸಂಸ್ಥೆ ವಿರುದ್ಧ ಹೈಕೋರ್ಟ್ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಗರಂ ಆಗಿತ್ತು. ಜೂನ್ 15ರಂದು ನಡೆದ ಈ ವಿಚಾರಣೆ ವೇಳೆ, ಪ್ರಕರಣದ ಬಗ್ಗೆ ಮಾಹಿತಿ ಇಲ್ಲವೆಂದು ಫೇಸ್‌ಬುಕ್ ಪರ ವಕೀಲುರು ತಿಳಿಸಿದ್ದರು. ಈ ಉತ್ತರಕ್ಕೆ ಗರಂ ಆದ ನ್ಯಾಯಮೂರ್ತಿ, ತನಿಖೆಗೆ ಸಹಕರಿಸದಿದ್ದರೆ ಇಡೀ ದೇಶದಲ್ಲಿ ಸಂಸ್ಥೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಅಲ್ಲದೆ, ವರದಿಯನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿ, ಶೈಲೇಶ್ ಬಿಡುಗಡೆಗೆ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Tue, 27 June 23