ಬೆಂಗಳೂರು, ಸೆ.7: ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ ಮಹಿಳೆ ಮತ್ತು ಈಕೆಯ ಲೀವ್ ಇನ್ ಸಂಗಾತಿಗೆ ಬೆಂಗಳೂರಿನ (Bengaluru) ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದ ಹಿಂದೆ ಸ್ಥಳೀಯರು ಮಹಾನ್ ಕಾರ್ಯವೂ ಇದೆ. ಮಕ್ಕಳು ಕಿರುಕುಳ ಅನುಭವಿಸುತ್ತಿರುವುದನ್ನು ನೋಡಿದ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಸ್ವತಃ ಪೊಲೀಸರಿಗೆ ದೂರು ನೀಡಿ ಸಾಕ್ಷ್ಯ ನುಡಿದಿದ್ದರು.
ಏಪ್ರಿಲ್ 2021 ರಲ್ಲಿ ವರದಿಯಾದ ಪ್ರಕರಣದ ವಿಚಾರಣೆಯ ನಂತರ, ವಿಶೇಷ ನ್ಯಾಯಾಧೀಶ ಕೆ.ಎನ್.ರೂಪಾ ಅವರು ಅಪರಾಧಿಗಳಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸೆಪ್ಟೆಂಬರ್ 2 ರಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಈ ವೇಳೆ ಆರೋಪಿಗಳು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಇದನ್ನೂ ಓದಿ: ತುಮಕೂರು: ಮಗಳನ್ನು ಹತ್ಯೆಗೈದಿದ್ದ ತಂದೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
2021 ಏಪ್ರಿಲ್ 1 ರಂದು ಆರ್ಆರ್ ನಗರದ ಸ್ಥಳೀಯ ನಿವಾಸಿಗಳು ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ, ತಮ್ಮ ನೆರೆಹೊರೆಯ ಇಬ್ಬರು ಹೆಣ್ಣು ಮಕ್ಕಳಿಗೆ ಅವರ ತಾಯಿಯ ಸ್ನೇಹಿತ ಕಿರುಕುಳ ನೀಡಿ ಗಾಯಗೊಳಿಸಿದ್ದಾಗಿ ದೂರು ನೀಡಿದ್ದರು.
ಪಕ್ಕದ ಅಂಗಡಿಯಿಂದ ಸಿಗರೇಟುಗಳನ್ನು ಖರೀದಿಸಲು ಹೆಣ್ಣು ಮಕ್ಕಳನ್ನು ಕಳುಹಿಸುತ್ತಿದ್ದರು. ಈ ವೇಳೆ ಅಂಗಡಿ ಮಾಲೀಕರು ಬಾಲಕಿಯರ ಕಾಲುಗಳ ಮೇಲೆ ಸುಟ್ಟ ಗಾಯಗಳನ್ನು ಗಮನಿಸಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.
ಸ್ಥಳೀಯರು ಮಾಹಿತಿ ಆಧರಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ -2012 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮಹಿಳೆ ಮತ್ತು ಆಕೆಯ ಲೀವ್ ಇನ್ ಸಂಗಾತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ನ್ಯಾಯಾಲಯದ ಮುಂದೆ ಒಟ್ಟು 12 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ