ಸಣ್ಣ ಸಮುದಾಯಗಳ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್​ ಪಕ್ಷವನ್ನು ಸೇರಿದ್ದೇನೆ: ಸಿ.ಎಸ್.ದ್ವಾರಕನಾಥ್

| Updated By: Skanda

Updated on: Aug 20, 2021 | 4:21 PM

ನಾನು 40 ವರ್ಷ ಸಾಮಾಜಿಕ ಹೋರಾಟ ಮಾಡಿದವನು. ಪತ್ರಕರ್ತನಾಗಿ 20 ವರ್ಷ ಕೆಲಸ ಮಾಡಿದವನು. ಇಂದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಬಹುಮುಖ್ಯವಾಗಿ ಸಣ್ಣ ಸಮುದಾಯಗಳನ್ನು ಗುರುತಿಸಿದ್ದೇ ಕಾಂಗ್ರೆಸ್ ಪಕ್ಷ. ಅರಸು ಅವರಿಂದ ಹಿಡಿದು ಮನಮೋಹನ್​ ಅವರ ತನಕವೂ ಆ ಸಮುದಾಯಗಳ ಬೆಳವಣಿಗೆಗೆ ಕಾಂಗ್ರೆಸ್​ ಪೂರಕವಾಗಿದೆ.

ಸಣ್ಣ ಸಮುದಾಯಗಳ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್​ ಪಕ್ಷವನ್ನು ಸೇರಿದ್ದೇನೆ: ಸಿ.ಎಸ್.ದ್ವಾರಕನಾಥ್
ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡ ಸಿ.ಎಸ್​.ದ್ವಾರಕಾನಾಥ್
Follow us on

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದು (ಆಗಸ್ಟ್​ 20) ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಬಳಿಕ ಮಾತನಾಡಿರುವ ಅವರು, ಇಂದು ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಜಾತಿ ಸಮೀಕರಣ,ಸಂಪನ್ಮೂಲ ಕ್ರೋಡೀಕರಣ ಮಾಡಿದ ಅರಸು ಆಡಳಿತದಲ್ಲಿ‌ ಯಶಸ್ವಿಯಾದರು. ನಾನು ಅದೇ ಗುರಿ ಇಟ್ಟುಕೊಂಡು‌ ಇಂದು ಕಾಂಗ್ರೆಸ್ ಪಕ್ಷವನ್ನ ಸೇರಿದ್ದೇನೆ ಎಂದು ತಿಳಿಸಿದ್ದಾರೆ.

ನಾನು 40 ವರ್ಷ ಸಾಮಾಜಿಕ ಹೋರಾಟ ಮಾಡಿದವನು. ಪತ್ರಕರ್ತನಾಗಿ 20 ವರ್ಷ ಕೆಲಸ ಮಾಡಿದವನು. ಇಂದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಬಹುಮುಖ್ಯವಾಗಿ ಸಣ್ಣ ಸಮುದಾಯಗಳನ್ನು ಗುರುತಿಸಿದ್ದೇ ಕಾಂಗ್ರೆಸ್ ಪಕ್ಷ. ಅರಸು ಅವರಿಂದ ಹಿಡಿದು ಮನಮೋಹನ್​ ಅವರ ತನಕವೂ ಆ ಸಮುದಾಯಗಳ ಬೆಳವಣಿಗೆಗೆ ಕಾಂಗ್ರೆಸ್​ ಪೂರಕವಾಗಿದೆ. ನಾನು ಅರಸು ಅವರ ಗುರಿಯಲ್ಲೇ ನಡೆಯುವ ಉದ್ದೇಶ ಇಟ್ಟುಕೊಂಡು ಬಂದಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಮ್ಮ ಪಕ್ಷ ಬಿಜೆಪಿಯಂತಲ್ಲ
ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ರಾಜೀವ್, ಅರಸು ಜನ್ಮಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್​, ಸಣ್ಣ ಸಮುದಾಯಗಳಿಗೆ ನಮ್ಮ ಪಕ್ಷ ಹೊಣೆ ನೀಡಲಿದೆ. ಸಣ್ಣ ಸಮುದಾಯಗಳನ್ನೂ ನಮ್ಮ ಪಕ್ಷ ಗುರುತಿಸುತ್ತದೆ. ನಮ್ಮ ಪಕ್ಷ ಬಿಜೆಪಿಯಂತೆ ಅಲ್ಲ ಎಂದು ಹೇಳಿದ್ದಾರೆ.

ನಮ್ಮಲ್ಲಿ ಖರ್ಗೆಯವರು ರಾಜ್ಯಸಭೆ ಪ್ರತಿಪಕ್ಷ ನಾಯಕರು. ಇಂತಹ ಜವಾಬ್ದಾರಿ ಸಿಗಲು ನಿಷ್ಠೆ ಬೇಕಾಗುತ್ತದೆ. ಸಣ್ಣ ಸಮುದಾಯದ ನಾಯಕರಿಗೆ ಇಲ್ಲಿ ಅವಕಾಶ ಇದೆ, ನಮ್ಮ ಪಕ್ಷ ಯಾವಾಗಲೂ ಉತ್ತಮ ಅವಕಾಶ ನೀಡುತ್ತದೆ. ರಾಜೀವ್, ಅರಸರು ಕೂಡ ಇದನ್ನೇ ಮಾಡಿದ್ದು, ಎಲ್ಲಾ ಸಣ್ಣ ವರ್ಗಗಳನ್ನ ಮೇಲೆತ್ತಿದ್ದರು. ಕಾಂಗ್ರೆಸ್​ ಅದೇ ಹಾದಿಯಲ್ಲಿ ನಡೆಯಲಿದೆ ಎಂದು ಪುನರುಚ್ಛರಿಸಿದರು.

ಇದೇ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಅರಸು, ರಾಜೀವ್ ಜತೆ ಕೆಲಸ ಮಾಡಿಲ್ಲ. ಆದರೆ, ಪ್ರತಿಪಕ್ಷದಲ್ಲಿದ್ದಾಗ ಅವರ ಕೆಲಸಗಳನ್ನ ಕೇಳಿದ್ದೇನೆ. ನಾನು ಕಾಂಗ್ರೆಸ್ ಸೇರಿದ್ದು 2006 ರಲ್ಲಿ. ಅದಕ್ಕೂ ಮುನ್ನ ಜನತಾ ಪರಿವಾರದಲ್ಲಿದ್ದೆ. ರಾಜೀವ್ 43 ವರ್ಷಕ್ಕೆ ಪ್ರಧಾನಿಯಾದವರು. ಯುವ ಸಮೂಹದ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ಕೊಟ್ಟರು. ಆದರೆ, ಇದನ್ನ ಬಹಳ ಮಂದಿ ಟೀಕೆ ಮಾಡಿದ್ದರು. ಸಾಮಾಜಿಕ‌ ನ್ಯಾಯಕ್ಕೆ ವಿರುದ್ಧವಾಗಿರೋ ಬಿಜೆಪಿಯವರು ಈಗ ಸಾಮಾಜಿಕ‌ ನ್ಯಾಯದ ಬಗ್ಗೆ ಮಾತನಾಡ್ತಾರೆ ಎಂದು ಕುಟುಕಿದರು.

ಇದನ್ನೂ ಓದಿ:
ಅತ್ಯಂತ ಕ್ರಾಂತಿಕಾರಿಯಾದ ಕಾನೂನನ್ನು ದಿಟ್ಟವಾಗಿ ತಂದವರು ದೇವರಾಜ ಅರಸು: ಸಚಿವ ಕೋಟ ಶ್ರೀನಿವಾಸ ಪೂಜಾರಿ 

Rajiv Gandhi Birth Anniversary: ಡ್ರೈವಿಂಗ್, ಸಂಗೀತ, ಫೋಟೊಗ್ರಫಿ ಆಸಕ್ತಿ; ರಾಜೀವ್ ಗಾಂಧಿ ಬಗ್ಗೆ ಇನ್ನಷ್ಟು ತಿಳಿಯಿರಿ

(CS Dwarakanath joins Congress on the occasion of Rajiv Gandhi and Devaraj Urs Birth Anniversary)