Che Guevara: ಬೆಂಗಳೂರು, ಬಾಗೇಪಲ್ಲಿಯಲ್ಲಿ ಇಂದು ಕ್ಯೂಬಾದ ಕ್ರಾಂತಿಕಾರಿ ಚೆಗೆವಾರ ಮಗಳು, ಮೊಮ್ಮಗಳಿಗೆ ನಾಗರಿಕ ಸನ್ಮಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 19, 2023 | 10:21 AM

Dr Aleida Guevara: ಕನ್ನಡದ ಸೃಜನಶೀಲ ಮತ್ತು ವೈಚಾರಿಕ ಸಾಹಿತ್ಯದ ಮೇಲೆ ಚೆಗೆವಾರ ಪ್ರಭಾವ ಬಹುಕಾಲದಿಂದಲೂ ಉಳಿದುಬಂದಿದೆ.

Che Guevara: ಬೆಂಗಳೂರು, ಬಾಗೇಪಲ್ಲಿಯಲ್ಲಿ ಇಂದು ಕ್ಯೂಬಾದ ಕ್ರಾಂತಿಕಾರಿ ಚೆಗೆವಾರ ಮಗಳು, ಮೊಮ್ಮಗಳಿಗೆ ನಾಗರಿಕ ಸನ್ಮಾನ
ಕ್ಯೂಬಾದ ಕ್ರಾಂತಿಕಾರಿ ಚೆಗೆವಾರ
Follow us on

ಬೆಂಗಳೂರು: ಕ್ಯೂಬಾದ ಕ್ರಾಂತಿಕಾರಿ ಚೆಗೆವಾರ (Che Guevara) ಅವರ ಮಗಳು ಮತ್ತು ಮೊಮ್ಮಗಳು ಇಂದು ನಗರಕ್ಕೆ ಭೇಟಿ ನಿಡಲಿದ್ದಾರೆ. ಚೆ ಅವರ ಮಗಳು ಖ್ಯಾತ ಶಿಶುವೈದ್ಯೆ ಹಾಗೂ ಜನಪರ ವೈದ್ಯೆ ಡಾ ಅಲಿಡಾ ಗೆವಾರ (Dr Aleida Guevara) , ಚೆ ಅವರ ಮೊಮ್ಮಗಳು ಅರ್ಥಶಾಸ್ತ್ರಜ್ಞೆ ಎಸ್ತಿಫಾನಿಯಾ (Estefania Guevara) ಅವರಿಗೆ ನಗರದ ಅರಮನೆ ರಸ್ತೆಯಲ್ಲಿರುವ ‘ಭಾರತ್ ಸ್ಕೌಟ್​ ಅಂಡ್ ಗೈಡ್ಸ್’ ಸಭಾಂಗಣದಲ್ಲಿ ಸಂಜೆ 4.30ಕ್ಕೆ ನಾಗರಿಕ ಸನ್ಮಾನ ಆಯೋಜಿಸಲಾಗಿದೆ. ಇದೇ ವೇಳೆ ಕ್ಯೂಬಾ ಸೌಹಾರ್ದತೆಯ ಸಮಾರಂಭವೂ ನಡೆಯಲಿದ್ದು ಎರಡೂ ದೇಶಗಳ ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರು ಕಾರ್ಯಕ್ರಮಕ್ಕೂ ಮೊದಲು ಇವರಿಬ್ಬರೂ ಬಾಗೇಪಲ್ಲಿಗೆ ಭೇಟಿ ನೀಡಲಿದ್ದಾರೆ. ಬಾಗೇಪಲ್ಲಿಯ ಸೂರ್ಯ ಕನ್ವನ್ಷನ್ ಹಾಲ್​ನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ‘ಸಹಬಾಳ್ವೆಗಾಗಿ ಚೆ ಹಬ್ಬ’ ಕಾರ್ಯಕ್ರಮದಲ್ಲಿ ಚೆ ಗೆವಾರ ಅವರ ಮಗಳು, ಮೊಮ್ಮಗಳು ಪಾಲ್ಗೊಳ್ಳಲಿದ್ದಾರೆ. ಇವರಿಬ್ಬರಿಗೂ ಬಾಗೇಪಲ್ಲಿಯ ಜನರು ಸಾರ್ವಜನಿಕ ಗೌರವ ಸನ್ಮಾನ ಅರ್ಪಿಸಲಿದ್ದಾರೆ. ಇವನ್ನು ಸ್ವಾಗತಿಸಲೆಂದು ವಿಶೇಷ ಬೈಕ್ ಜಾಥಾ ಆಯೋಜಿಸಲಾಗಿದೆ. ಬಾಗೇಪಲ್ಲಿ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಕ್ಯೂಬಾ ಸೌಹಾರ್ದ ಸಮಿತಿಯ ಮುಖ್ಯಸ್ಥೆ ಎಂ.ಎ.ಬೇಬಿ ಮತ್ತು ಸಾಹಿತಿ ಜಿ.ಎನ್.ಮೋಹನ್ ಭಾಗವಹಿಸಲಿದ್ದಾರೆ.

ಬಾಗೇಪಲ್ಲಿ, ಬೆಂಗಳೂರು ಭೇಟಿಗೂ ಮೊದಲು ಚೆನ್ನೈಗೆ ತೆರಳಿದ್ದ ಚೆಗೆವಾರ ಕುಡಿಗಳಿಗೆ ಭವ್ಯ ಸ್ವಾಗತ ದೊರೆತಿತ್ತು. ಚೆನ್ನೈನ ‘ಏಷ್ಯನ್ ಕಾಲೇಜ್​ ಆಫ್ ಜರ್ನಲಿಸಂ’ನ ವಿದ್ಯಾರ್ಥಿಗಳೊಂದಿಗೆ ಡಾ ಅಲಿಡಾ ಸಂವಾದ ನಡೆಸಿದ್ದರು. ರಾಜಾ ಅಣ್ಣಾಮಲೈ ಸಭಾಂಗಣದಲ್ಲಿ ವಿಶೇಷ ಸಮಾರಂಭ ನಡೆಯಿತು. ಬೆಂಗಳೂರು ಭೇಟಿಯ ನಂತರ ಇವರಿಬ್ಬರೂ ಹೈದರಾಬಾದ್​ಗೆ ತೆರಳಲಿದ್ದು, ಅಲ್ಲಿ ಜ 22ರಂದು ಸರ್ವಪಕ್ಷದ ಸಭೆಯಲ್ಲಿ ಡಾ ಅಲಿಡಾ ಮತ್ತು ಎಸ್ತಿಫಾನಿಯಾ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಖ್ಯಾತ ರಂಗಕರ್ಮಿ ಡಾ ಶ್ರೀಪಾದಭಟ್ ನಿರ್ದೇಶನದಲ್ಲಿ ಜಿ.ಎನ್.ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿಯ ಆಯ್ದ ಭಾಗ ‘ಜೆ ಎಂಬ ಪ್ರೀತಿ’ಯ ರಂಗಪ್ರಸ್ತುತಿಯೂ ನಡೆಯಲಿದೆ.

ಕರ್ನಾಟಕದಲ್ಲಿ ಮರುಕಳಿಸಿದ ಚೆಗೆವಾರ ನೆನಪು

ಕನ್ನಡದ ಸೃಜನಶೀಲ ಮತ್ತು ವೈಚಾರಿಕ ಸಾಹಿತ್ಯದ ಮೇಲೆ ಚೆಗೆವಾರ ಪ್ರಭಾವ ಬಹುಕಾಲದಿಂದಲೂ ಉಳಿದುಬಂದಿದೆ. ಇದೀಗ ಡಾ ಅಲಿಡಾ ಗೆವಾರ ಮತ್ತು ಎಸ್ತಿಫಾನಿಯಾ ಭೇಟಿಯ ಹಿನ್ನೆಲೆಯಲ್ಲಿ ಹಲವರು ಈ ಪುಸ್ತಕಗಳನ್ನು ಮೆಲುಕು ಹಾಕುತ್ತಿದ್ದಾರೆ. ಕನ್ನಡದಲ್ಲಿ ಚೆ ಚೆಗೆವಾರ ಜೀವನ ಚರಿತ್ರೆ, ಕ್ಯೂಬಾದ ಇತಿಹಾಸ, ಹೋರಾಟದ ಪುಟಗಳನ್ನು ಕಟ್ಟಿಕೊಡುವ ಹಲವು ಪುಸ್ತಕಗಳು ಪ್ರಕಟವಾಗಿವೆ. ‘ನನ್ನೊಳಗಿನ ಹಾಡು ಕ್ಯೂಬಾ’ (ಜಿ.ಎನ್.ಮೋಹನ್), ವಿ ಸುಜ್ಞಾನಮೂರ್ತಿ ಅವರ ‘ಕ್ಯೂಬಾ ಕ್ರಾಂತಿ’ (ಅನುವಾದ), ಸೃಜನ್ ಅವರ ‘ಮೋಟಾರ್ ಸೈಕಲ್ ಡೈರೀಸ್’ (ಅನುವಾದ), ಡಾ ಎಚ್​.ಎಸ್.ಅನುಪಮಾ ಅವರ ‘ಮೋಟಾರ್ ಸೈಕಲ್ ಡೈರಿ’ (ಅನುವಾದ) ಕೃತಿಗಳ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಾಕಿದ್ದಾರೆ. ಜಿ.ಎನ್.ಮೋಹನ್ ಅವರು ಅಲಿಡಾ ಅವರ ಕರ್ನಾಟಕ ಭೇಟಿಯ ನೆನಪು ಹಂಚಿಕೊಂಡಿದ್ದಾರೆ.

ಅಲಿಡಾ ಗೆವಾರಾಗೆ ಗೌರಿ ಅಮ್ಮ ಪುರಸ್ಕಾರ

ಅಂಗವಿಕಲ ಮಕ್ಕಳಿಗಾಗಿ ವಿಶೇಷ ಆಶ್ರಮಗಳನ್ನು ನಡೆಸುತ್ತಿರುವ ಕ್ಯೂಬಾದ ಸಾಮಾಜಿಕ ಹೋರಾಟಗಾರ್ತಿ ಹಾಗೂ ಶಿಶುವೈದ್ಯೆ ಡಾ ಅಲಿಡಾ ಗೆವಾರ ಅವರಿಗೆ ಕೇರಳದ ಪ್ರತಿಷ್ಠಿತ ಕೆ.ಆರ್.ಗೌರಿ ಅಮ್ಮ ರಾಷ್ಟ್ರೀಯ ಪುರಸ್ಕಾರವನ್ನು ಇತ್ತೀಚೆಗೆ ನೀಡಿ ಗೌರವಿಸಲಾಯಿತು. ಜನವರಿ 5ರಂದು ನಡೆದ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುರಸ್ಕಾರ ಪ್ರದಾನ ಮಾಡಿದರು. ಈ ಪ್ರಶಸ್ತಿಯು 3,000 ಅಮೆರಿಕನ್ ಡಾಲರ್ ಮೊತ್ತದ ನಗದು ಪುರಸ್ಕಾರ ಮತ್ತು ಸ್ಮರಣಿಕೆಯನ್ನು ಹೊಂದಿದೆ.

ಇದನ್ನೂ ಓದಿ: ಕ್ಯೂಬಾದಲ್ಲಿ ಸರ್ಕಾರದ ವಿರುದ್ಧ ಪ್ರಬಲ ಚಳವಳಿ: ಹತ್ತಾರು ಜನರ ಬಂಧನ, ಮಧ್ಯಪ್ರವೇಶಕ್ಕೆ ಆಸಕ್ತಿ ತೋರಿದ ಅಮೆರಿಕ

ಮತ್ತಷ್ಟು ಕರ್ನಾಟಕ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ