ಕ್ಯೂಬಾದಲ್ಲಿ ಸರ್ಕಾರದ ವಿರುದ್ಧ ಪ್ರಬಲ ಚಳವಳಿ: ಹತ್ತಾರು ಜನರ ಬಂಧನ, ಮಧ್ಯಪ್ರವೇಶಕ್ಕೆ ಆಸಕ್ತಿ ತೋರಿದ ಅಮೆರಿಕ

ಈಚಿನ ವರ್ಷಗಳಲ್ಲಿ ದೊಡ್ಡಮಟ್ಟದ್ದು ಎನ್ನಲಾದ ಈ ಹೋರಾಟವು ಜನರ ಸಂಕಷ್ಟವನ್ನು ಬಿಂಬಿಸುವುದರ ಜೊತೆಗೆ ಸರ್ಕಾರದ ನಿಲುವುಗಳನ್ನು ಪ್ರಶ್ನಿಸುತ್ತಿದೆ.

ಕ್ಯೂಬಾದಲ್ಲಿ ಸರ್ಕಾರದ ವಿರುದ್ಧ ಪ್ರಬಲ ಚಳವಳಿ: ಹತ್ತಾರು ಜನರ ಬಂಧನ, ಮಧ್ಯಪ್ರವೇಶಕ್ಕೆ ಆಸಕ್ತಿ ತೋರಿದ ಅಮೆರಿಕ
ಕ್ಯೂಬಾದಲ್ಲಿ ಪ್ರತಿಭಟನೆಗಳ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 13, 2021 | 5:16 PM

ಪ್ಯುಟ್ರೊ ರಿಕೊ: ಕಮ್ಯುನಿಸ್ಟ್​​ ಪಕ್ಷದ ಆಡಳಿತದಲ್ಲಿರುವ ಕ್ಯೂಬಾ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿದ್ದು, ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳನ್ನು ಅಲ್ಲಿನ ಸರ್ಕಾರ ಭಾಗಶಃ ನಿರ್ಬಂಧಿಸಿದ್ದು, ಹತ್ತಾರು ಹೋರಾಟಗಾರರನ್ನು ಬಂಧಿಸಿದೆ. ಈಚಿನ ವರ್ಷಗಳಲ್ಲಿ ದೊಡ್ಡಮಟ್ಟದ್ದು ಎನ್ನಲಾದ ಈ ಹೋರಾಟವು ಜನರ ಸಂಕಷ್ಟವನ್ನು ಬಿಂಬಿಸುವುದರ ಜೊತೆಗೆ ಸರ್ಕಾರದ ನಿಲುವುಗಳನ್ನು ಪ್ರಶ್ನಿಸುತ್ತಿದೆ.

ಕ್ಯೂಬಾದಲ್ಲಿ ಸಾಮಾಜಿಕ ಮಾಧ್ಯಮ ನಿರ್ಬಂಧಿಸಿರುವುದನ್ನು ಇಂಟರ್ನೆಟ್​ ಬಳಕೆ ಗಮನಿಸುವ ಸರ್ಕಾರೇತರ ಸಂಸ್ಥೆ ಇಂಟರ್ನೆಟ್​ ಬ್ಲಾಕ್ಸ್ ದೃಢಪಡಿಸಿದೆ. ಫೇಸ್​ಬುಕ್, ಇನ್​ಸ್ಟಾಗ್ರಾಂ, ವಾಟ್ಸ್ಯಾಪ್ ಮತ್ತು ಟೆಲಿಗ್ರಾಂಗಳು ಕ್ಯೂಬಾದಲ್ಲಿ ಈಗ ಕಾರ್ಯನಿರ್ವಹಿಸುತ್ತಿವೆ. ಈ ಕಂಪನಿಗಳ ಕಾರ್ಯನಿರ್ವಹಣೆಯನ್ನು ಭಾಗಶಃ ಸ್ಥಗಿತಗೊಂಡಿದೆ ಅಥವಾ ಸರ್ಕಾರದ ನಿಗಾವಣೆಯಲ್ಲಿ ನಡೆಯುತ್ತಿದೆ ಎಂದು ಸಂಸ್ಥೆಯು ಹೇಳಿದೆ.

ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಾಮಾಜಿಕ ಮಾಧ್ಯಮಗಳ ಚಿತಾವಣೆ ಕಾರಣ ಎಂದು ಕ್ಯೂಬಾ ಅಧ್ಯಕ್ಷ ಮಿಗ್ಯುಲ್ ಡಯಾಜ್ ಕೆನೆಲ್ ಸಾಮಾಜಿಕ ಮಾಧ್ಯಮಗಳನ್ನು ದೂರಿದ್ದರು. ಸಣ್ಣಮಟ್ಟದಲ್ಲಿ ಆರಂಭವಾದ ಭಿನ್ನಮತವು ವಾರಾಂತ್ಯ ಪ್ರತಿಭಟನೆಗಳಾಗಿ ಬೆಳೆದವು. ಈ ಕುರಿತು ಪ್ರತಿಕ್ರಿಯಿಸುವಂತೆ ಕೋರಿ ಸುದ್ದಿಸಂಸ್ಥೆಯ ವರದಿಗಾರರು ಕಳಿಸಿದ್ದ ಇಮೇಲ್​ಗೆ ಫೇಸ್​ಬುಕ್ ಪ್ರತಿಕ್ರಿಯಿಸಲಿಲ್ಲ.

ಕ್ಯೂಬಾ ಸರ್ಕಾರವು ಆನ್​ಲೈನ್​ ಅಥವಾ ವಾಸ್ತವ ಜಗತ್ತಿನಲ್ಲಿ ನಮ್ಮ ಮೇಲೆ ಹಲ್ಲೆ ನಡೆಸುವವರಿಗೆ ನಾವು ಮತ್ತೊಂದು ಕೆನ್ನೆ ತೋರಿಸುವುದಿಲ್ಲ. ಹಿಂಸಾಚಾರ ತಡೆಯಲು ಕ್ರಮ ತೆಗೆದುಕೊಳ್ಳುತ್ತೇವೆ, ನಮ್ಮ ದೇಶದ ಆಶಯಗಳನ್ನು ವಿರೋಧಿಸುವಂಥ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುವ ಸಂಗತಿಗಳನ್ನು ಹತ್ತಿಕ್ಕುತ್ತೇವೆ ಎಂದು ಕ್ಯೂಬಾ ಸರ್ಕಾರವು ಟ್ವೀಟ್​ ಒಂದರಲ್ಲಿ ಸ್ಪಷ್ಟಪಡಿಸಿದೆ.

ಸರ್ಕಾರ ಈವರೆಗೆ ಎಷ್ಟು ಮಂದಿಯನ್ನು ಬಂಧಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಪ್ರಜಾಪ್ರಭುತ್ವಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ‘ಕ್ಯೂಬಾ ಡಿಸೈಡ್’ ಸಂಘಟನೆಯು 57 ಬಂಧಿತರ ಹೆಸರುಗಳನ್ನು ಬಹಿರಂಗಪಡಿಸಿದೆ. ಸರ್ಕಾರದ ನಿಲುವುಗಳನ್ನು ವಿರೋಧಿಸುತ್ತಿರುವ ಕ್ಯೂಬಾ ಪೇಟ್ರಿಯಾಟಿಕ್ ಯೂನಿಯನ್​ ಗುಂಪಿನ ಚಳವಳಿಕಾರರಾದ ಜೋಸ್ ಡೇನಿಯನ್ ಫೆರರ್​ ಮತ್ತು ಅವರ ಮಗನ ಹೆಸರು ಸಹ ಈ ಪಟ್ಟಿಯಲ್ಲಿದೆ.

ಬೆಲೆ ಏರಿಕೆ, ಜೀವನಾವಶ್ಯಕ ವಸ್ತುಗಳ ಅಲಭ್ಯತೆ ಮತ್ತು ಆಗಿಂದ್ದಾಗ್ಗೆ ಇಂಟರ್ನೆಟ್ ನಿರ್ಬಂಧಿಸುವ ಸರ್ಕಾರದ ಕ್ರಮ ವಿರೋಧಿಸಿ ಭಾನುವಾರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದರು. ಭಿನ್ನಮತ ಮತ್ತು ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕುವ ಕ್ಯೂಬಾದಲ್ಲಿ ಬಹಿರಂಗ ಪ್ರತಿಭಟನೆಗಳು ಅಪರೂಪ. ಆದರೆ ಭಾನುವಾರ ಮಾತ್ರ ಜನರು ಸಿಟ್ಟಿಗೆದ್ದು ರಸ್ತೆಗೆ ಬಂದಿದ್ದರು. ತಮ್ಮನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಒಂದು ಸ್ಥಳದಲ್ಲಿ ಪೊಲೀಸ್ ವಾಹನವನ್ನು ಉರುಳಿಸಿ ಆಕ್ರೋಶ ಹೊರಹಾಕಿದರು.

ಕ್ಯೂಬಾ ದೇಶದ ಜನರ ಸಂಕಷ್ಟಕ್ಕೆ ಅಮೆರಿಕ ವಿಧಿಸಿರುವ ವಾಣಿಜ್ಯ ನಿರ್ಬಂಧಗಳು ಕಾರಣ ಎಂದು ಕ್ಯೂಬಾ ಅಧ್ಯಕ್ಷ ಡಯಾಸ್​ ಕೆನೆಲ್ ಆರೋಪಿಸಿದ್ದಾರೆ. ನಮ್ಮ ದ್ವೀಪ ರಾಷ್ಟ್ರವು ಇಂಧನ ಮತ್ತು ವಿದ್ಯುತ್​ ಕೊರತೆಯಿಂದ ಬಳಲುತ್ತಿದೆ. ಇದರ ಜೊತೆಗೆ ಕೊವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದಲ್ಲಿ ಲಭ್ಯವಿರುವ ವಿದ್ಯುಚ್ಚಕ್ತಿಯನ್ನು ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಪೂರೈಸಲಾಗುತ್ತಿದೆ. ಸಾಮಾನ್ಯ ಕ್ಯೂಬನ್ನರು ಅನಿವಾರ್ಯವಾಗಿ ತ್ಯಾಗ ಮಾಡಬೇಕಾಗಿದೆ ಎಂದು ವಿಷಾದಿಸಿದರು.

ಏಕ ಪಕ್ಷದ ಆಡಳಿತ 1959ರ ಕ್ರಾಂತಿಯ ನಂತರ ಕ್ಯೂಬಾದಲ್ಲಿ ಒಂದೇ ಪಕ್ಷದ ಆಡಳಿತವಿದೆ. ಪ್ರವಾಸೋದ್ಯಮ ಕ್ಯೂಬಾದ ಮುಖ್ಯ ಆದಾಯ ಮೂಲ. ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಕ್ಯೂಬಾ ವಿರುದ್ಧ ನಿರ್ಬಂಧ ಬಿಗಿಗೊಳಿಸಿದ ನಂತರ ಅಮೆರಿಕದ ಪ್ರವಾಸಿಗರು ಕ್ಯೂಬಾಗೆ ಬರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. ಆರ್ಥಿಕ ಕುಸಿತದ ವೇಗಕ್ಕೆ ಕಡಿವಾಣ ಹಾಕಲೆಂದು ಕ್ಯೂಬಾ ಕಳೆದ ವರ್ಷ ತುರ್ತು ಆರ್ಥಿಕ ಸುಧಾರಣೆಗಳನ್ನು ಜಾರಿ ಮಾಡಿತು. ಸಬ್ಸಿಡಿಗಳನ್ನು ಕಡಿತಗೊಳಿಸುವ ಜೊತೆಗೆ, ಬೆಲೆ ಮತ್ತು ವೇತನವನ್ನು ಪರಿಷ್ಕರಿಸಿತು. ಎರಡು ಹಂತದ ಕರೆನ್ಸಿ ವ್ಯವಸ್ಥೆಗೂ ಮಂಗಳ ಹಾಡಿತು.

2018ರಲ್ಲಿ ಅಧಿಕಾರಕ್ಕೆ ಬಂದ ಕ್ಯೂಬಾ ಅಧ್ಯಕ್ಷ ಡಯಾಜ್ ಕೆನೆಲ್ ಅವರಿಗೆ ಈ ಪ್ರತಿಭಟನೆಗಳು ದೊಡ್ಡ ಸವಾಲನ್ನೇ ಒಡ್ಡಿವೆ. ಪಕ್ಷದ ಅಧ್ಯಕ್ಷರಾಗಿದ್ದ ರೌಲ್ ಕ್ಯಾಸ್ಟ್ರೋ ಅವರ ಸ್ಥಾನವನ್ನೂ ಕಳೆದ ಏಪ್ರಿಲ್ ತಿಂಗಳಿನಿಂದ ಡಯಾಜ್ ನಿರ್ವಹಿಸುತ್ತಿದ್ದಾರೆ.

ಕ್ಯೂಬಾ ಜನರ ಅಸಂತುಷ್ಟಿಗೆ ನೈಜ ಕಾರಣಗಳಿವೆ ಎಂದು ಅಧ್ಯಕ್ಷ ಡಯಾಜ್ ಕೆನೆಲ್ ಒಪ್ಪಿಕೊಳ್ಳುತ್ತಾರೆ. ಆದರೆ ಈ ಪ್ರತಿಭಟನೆಗಳ ಹಿಂದೆ ಅಮೆರಿಕ ಆರಂಭಿಸಿರುವ ಅಸಾಂಪ್ರದಾಯಿಕ ಯುದ್ಧದ ನೆರಳು ಕಾಣುತ್ತಿದೆ ಎಂದೂ ದೂರುತ್ತಾರೆ. ವೆನೆಜುವೆಲಾದಲ್ಲಿ ಆದ ಪ್ರತಿಭಟನೆಗಳ ಉದಾಹರಣೆ ನೀಡಲೂ ಕೆನೆಲ್ ಮರೆಯುವುದಿಲ್ಲ.

ಕ್ಯೂಬಾದ ಜನರು ತಮ್ಮ ಮೂಲಭೂತ ಮತ್ತು ಸಾರ್ವತ್ರಿಕ ಹಕ್ಕುಗಳಿಗಾಗಿ ಧೈರ್ಯದಿಂದ ಹೋರಾಡುತ್ತಿದ್ದಾರೆ. ನಾವು ಕ್ಯೂಬಾ ಜನರೊಂದಿಗೆ ಇದ್ದೇವೆ. ಹತ್ತಾರು ವರ್ಷಗಳಿಂದ ಕ್ಯೂಬಾದ ಸರ್ವಾಧಿಕಾರಿ ಆಡಳಿತ, ಆರ್ಥಿಕ ಸಂಕಷ್ಟ ಮತ್ತು ತುಳಿತಗಳ ಜೊತೆಗೆ ಇದೀಗ ಕೊರೊನಾ ಸಂಕಷ್ಟವೂ ಅವರನ್ನು ಕಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

ಕ್ಯೂಬಾದ ಸಂಕಷ್ಟ ಸ್ಥಿತಿಗೆ ಸ್ಪಂದಿಸಿರುವ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುವಲ್ ಲೊಪೆಜ್ ಆರ್ಬಡೊರ್ ಅಮೆರಿಕದ ಕ್ರಮಗಳ ವಿರುದ್ಧ ದನಿ ಎತ್ತಿದ್ದಾರೆ. ಕ್ಯೂಬಾ ಮೇಲೆ ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಶೀಘ್ರ ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ಅವರು, ಕ್ಯೂಬಾ ಆಡಳಿತ ವಿನಂತಿಸಿದರೆ ಶೀಘ್ರದಲ್ಲಿಯೇ ಔಷಧಿ, ಲಸಿಕೆ ಮತ್ತು ಆಹಾರ ಕಳಿಸಿಕೊಡುವ ಭರವಸೆ ನೀಡಿದ್ದಾರೆ.

(Biggest anti govt protests in Cuba Dozens of Activists Arrested America Mexico tries to interfere)

ಇದನ್ನೂ ಓದಿ: Explainer: ಅಸ್ಸಾಂನಲ್ಲಿ ಗೋಮಾಂಸ ಸೇವಿಸದ ಸಮುದಾಯದವರ ಪ್ರದೇಶದಲ್ಲಿ ಗೋಮಾಂಸ ನಿಷೇಧ; ಏನಿದು ಜಾನುವಾರು ಸಂರಕ್ಷಣಾ ಮಸೂದೆ?

ಇದನ್ನೂ ಓದಿ: Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು