ಕೊವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 54ಕ್ಕೇರಿದ ಸಾವಿನ ಸಂಖ್ಯೆ – ಇರಾಕ್ನ ನಾಸಿರಿಯಾ ನಗರದಲ್ಲಿ ಅವಘಡ
ನಾಸಿರಿಯಾ ನಗರದ ಹಯಾದರ್ ಅಲ್ ಜಮೀಲಿ ಆಸ್ಪತ್ರೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸ್ ತನಿಖೆಯ ಆರಂಭಿಕ ವರದಿಗಳು ತಿಳಿಸಿರುವಂತೆ ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡಿದ್ದು ಅವಘಡಕ್ಕೆ ಮೂಲಕ ಕಾರಣ ಎನ್ನಲಾಗಿದೆ.
ಇರಾಕ್ನ ನಾಸಿರಿಯಾ (Iraq Nasiriyah) ನಗರದಲ್ಲಿ ಘಟಿಸಿದ ಭೀಕರ ಅಗ್ನಿ ದುರಂತದಲ್ಲಿ ಕೊವಿಡ್ ಆಸ್ಪತ್ರೆ (Covid Hospital) ಹೊತ್ತಿ ಉರಿದಿದ್ದು 50 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ತಡರಾತ್ರಿ ವೇಳೆ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಕೊವಿಡ್ ಐಸೋಲೇಶನ್ ವಾರ್ಡ್ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಉರಿಯಲಾರಂಭಿಸಿದ ಪರಿಣಾಮ ಕಟ್ಟಡದೊಳಗಿದ್ದವರು ಸಿಲುಕಿಹಾಕಿಕೊಂಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲಾಗದೇ ಅಸಹಾಯಕರಾಗಿ ಪ್ರಾಣಬಿಟ್ಟಿದ್ದಾರೆ. ಆರಂಭದಲ್ಲಿ 35 ಜನ ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದರು, ಇದೀಗ ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಮೃತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಸಿರಿಯಾ ನಗರದ ಹಯಾದರ್ ಅಲ್ ಜಮೀಲಿ ಆಸ್ಪತ್ರೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸ್ ತನಿಖೆಯ ಆರಂಭಿಕ ವರದಿಗಳು ತಿಳಿಸಿರುವಂತೆ ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡಿದ್ದು ಅವಘಡಕ್ಕೆ ಮೂಲಕ ಕಾರಣ ಎನ್ನಲಾಗಿದೆ. ಆಸ್ಪತ್ರೆಯ ಒಳಗಿದ್ದ ಆಕ್ಸಿಜನ್ ಟ್ಯಾಂಕ್ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದು ಸಿಡಿದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಆದರೆ, ನಿರ್ದಿಷ್ಟ ಕಾರಣವನ್ನು ದೃಢಪಡಿಸುವುದಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬೆಂಕಿ ಹೊತ್ತಿ ಉರಿಯಲಾರಂಭಿಸಿದ ನಂತರ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಸುಮಾರು 16ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಅಗ್ನಿ ದುರಂತವನ್ನು ಕಣ್ಣಾರೆ ನೋಡಿದ ಆಸ್ಪತ್ರೆ ಸಿಬ್ಬಂದಿ ನಡೆದಿದ್ದನ್ನು ಹೇಳುತ್ತಾ, ಕೊವಿಡ್ ವಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ್ದು, ರಕ್ಷಣಾ ಪಡೆಯ ಸಿಬ್ಬಂದಿ ಒಳಹೋಗಲು ಹರಸಾಹಸ ಪಡಬೇಕಾಯಿತು. ಒಳಗಿದ್ದವರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಏನೇನೂ ಕಾಣಿಸುತ್ತಿರಲಿಲ್ಲ. ಹೀಗಾಗಿ ಹೊರ ಬರುವುದು ಕಷ್ಟವಾಗಿ ಅನೇಕರು ಉಸಿರು ಚೆಲ್ಲಿದ್ದಾರೆ ಎಂದು ಘಟನೆಯನ್ನು ವಿವರಿಸಿದ್ದಾರೆ.
ಅಗ್ನಿ ಅವಘಡದ ದೃಶ್ಯಾವಳಿಗಳನ್ನು ಇರಾಕ್ನ ಸ್ಥಳೀಯ ಮಾಧ್ಯಮಗಳು ಹಂಚಿಕೊಂಡಿದ್ದು, ಯಾವ ಮಟ್ಟದಲ್ಲಿ ಆಸ್ಪತ್ರೆ ಕಟ್ಟಡವನ್ನು ಹೊಗೆ ಆವರಿಸಿಕೊಂಡಿತ್ತು ಎನ್ನುವುದನ್ನು ತೋರಿಸಿಕೊಟ್ಟಿವೆ. ಕಳೆದ ಏಪ್ರಿಲ್ ತಿಂಗಳಿನಲ್ಲೂ ಇರಾಕ್ನ ಬಾಗ್ದಾದ್ ಬಳಿಯ ಆಸ್ಪತ್ರೆಯಲ್ಲಿ ಇಂಥದ್ದೇ ಅನಾಹುತ ಸಂಭವಿಸಿದ್ದು ಸುಮಾರು 82 ಜನ ಮೃತಪಟ್ಟು, 110ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದಿನ ಘಟನೆಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟವೇ ಕಾರಣ ಎಂದು ಹೇಳಲಾಗಿದ್ದು, ಆಕ್ಸಿಜನ್ ಸಿಲಿಂಡರ್ಗಳನ್ನು ಬೇಕಾಬಿಟ್ಟಿ ಸಂಗ್ರಹಿಸಿಟ್ಟಿದ್ದು ತಪ್ಪು ಎಂದು ಅಧಿಕಾರಿಗಳು ತಿಳಿಸಿದ್ದರು. ಸದ್ಯ ಕೊರೊನಾ ಹೊಡೆತದಿಂದ ತತ್ತರಿಸಿರುವ ಇರಾಕ್ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಆಸ್ಪತ್ರೆ ಸಿಬ್ಬಂದಿ, ಅಗ್ನಿಶಾಮದ ದಳದ ಸಮಯಪ್ರಜ್ಞೆಯಿಂದ ಮೈಸೂರಿನಲ್ಲಿ 300ಕ್ಕೂ ಹೆಚ್ಚು ರೋಗಿಗಳು ಬಚಾವ್
200 ಅಡಿ ಉದ್ದದ ಪೈಪ್ ಲೈನ್ನಲ್ಲಿ ಸಿಲುಕಿದ ರೈತ; ಅಗ್ನಿಶಾಮಕ ದಳದ ಸಾಹಸದಿಂದ ರೈತ ಬಚಾವ್