200 ಅಡಿ ಉದ್ದದ ಪೈಪ್ ಲೈನ್ನಲ್ಲಿ ಸಿಲುಕಿದ ರೈತ; ಅಗ್ನಿಶಾಮಕ ದಳದ ಸಾಹಸದಿಂದ ರೈತ ಬಚಾವ್
200 ಅಡಿ ಉದ್ದದ ಪೈಪ್ ಲೈನ್ನಲ್ಲಿ ಸಿಲುಕಿದ ರೈತ ಜೊರಾಗಿ ಕೂಗಿದ್ದು, ಹೊರಭಾಗದಲ್ಲಿ ಇದ್ದ ಗೋವಿಂದ್ ರಾಜು ಅವರ ಪುತ್ರ ವೇಣುಗೋಪಾಲ್ಗೆ ಕೇಳಿಸಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ರಾಮನಗರ: ಜಮೀನಿಗೆ ನೀರಿನ ಪೈಪ್ ಅಳವಡಿಸಬೇಕು ಎಂಬ ಗಡಿಬಿಡಿಯಲ್ಲಿದ್ದ ರೈತ 200 ಅಡಿ ಉದ್ದದ ಪೈಪ್ ಲೈನ್ನ ಒಳಭಾಗಕ್ಕೆ ಸಿಲುಕಿದ ಘಟನೆ ರಾಮನಗರದ ಕೊಂಕಾಣಿದೊಡ್ಡಿ ಗ್ರಾಮದ ಬಳಿಯ ಬೆಂಗಳೂರು-ಮೈಸೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಸಿಂಗ್ರಿಭೋವಿದೊಡ್ಡಿ ಗ್ರಾಮದ ಗೊವೀಂದ ರಾಜು ಎಂಬ ರೈತ ತನ್ನ ಜಮೀನಿನಿಂದ ಮತ್ತೊಂದು ಭಾಗದ ಜಮೀನಿಗೆ ಬೋರ್ವಲ್ ಮೂಲಕ ನೀರಿನ ಪೈಪ್ ಅಳವಡಿಸಲು ಬೈಪಾಸ್ ರಸ್ತೆಯ ಕೆಳಭಾಗದಲ್ಲಿ ಇದ್ದ ಸುಮಾರು 200 ಅಡಿ ಉದ್ದದ ಪೈಪ್ ಲೈನ್ ಒಳಭಾಗದಲ್ಲಿ ಪೈಪ್ ಎಳೆದುಕೊಂಡು ಹೋಗಿದ್ದಾರೆ. ಆದರೆ 170 ಅಡಿ ದೂರಕ್ಕೆ ಹೋದಾಗ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡಿದ್ದಾರೆ.
200 ಅಡಿ ಉದ್ದದ ಪೈಪ್ ಲೈನ್ನಲ್ಲಿ ಸಿಲುಕಿದ ರೈತ ಜೊರಾಗಿ ಕೂಗಿದ್ದು, ಹೊರಭಾಗದಲ್ಲಿ ಇದ್ದ ಗೋವಿಂದ್ ರಾಜು ಅವರ ಪುತ್ರ ವೇಣುಗೋಪಾಲ್ಗೆ ಕೇಳಿಸಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳ್ಕಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಎರಡು ಜೆಸಿಬಿಗಳ ಮೂಲಕ 20 ಅಡಿ ಮಣ್ಣು ತೆಗೆದು, ಕೆಳಭಾಗದಲ್ಲಿ ಅವಳಡಿಸಿದ್ದ ಪೈಪ್ಗಳನ್ನು ತೆಗೆದು ಒಳಭಾಗಕ್ಕೆ ಗಾಳಿಯನ್ನು ಕೊಟ್ಟು ಆನಂತರ ರೈತ ಗೋವಿಂದರಾಜು ಅವರನ್ನು ರಕ್ಷಣೆ ಮಾಡಿದ್ದಾರೆ. ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ರೈತ ಬದುಕುಳಿದಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರು-ಮೈಸೂರು ಬೈಪಾಸ್ ರಸ್ತೆಯನ್ನು ಮಾಡಲಾಗಿದೆ. ಹೀಗಾಗಿ ಮಳೆಯ ನೀರು ಹೋಗಲಿ ಎಂದು ಬೈಪಾಸ್ ರಸ್ತೆಯ ಕೆಳಭಾಗದಲ್ಲಿ ಸುಮಾರು 200 ಅಡಿ ಉದ್ದದ ನಾಲ್ಕು ಅಡಿ ಅಗಲದ ಪೈಪ್ ಲೈನ್ ಮಾಡಲಾಗಿದೆ. ಆದರೆ ಬೈಪಾಸ್ ರಸ್ತೆಯ ಎರಡು ಭಾಗದಲ್ಲೂ ಗೊವೀಂದ್ ರಾಜು ಜಮೀನು ಇದೆ. ಒಂದು ಜಮೀನಿನಿಂದ ಮತ್ತೊಂದು ಭಾಗದ ಜಮೀನಿಗೆ ನೀರಿನ ಪೈಪ್ ಅವಳಡಿಸಲು ಗೋವಿಂದ್ ರಾಜು ಪೈಪ್ ಲೈನ್ ಒಳಭಾಗಕ್ಕೆ ಬೆಳಗ್ಗೆ 11 ಗಂಟೆ ಸುಮಾರಿಗೆ ಹೋಗಿದ್ದಾರೆ. ಈ ವೇಳೆ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣೆ ಬಳಿಕ ಗೋವಿಂದ್ ರಾಜು ನನಗೆ ಏನು ಆಗಿಲ್ಲವೆಂದು ತನ್ನ ಜಮೀನಿನಲ್ಲಿಯೇ ಹೋಗಿ ಬೋರ್ವಲ್ನಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಒಟ್ಟಾರೆ ನೀರಿನ ಪೈಪ್ ಅವಳಡಿಸಲು ಹೋಗಿದ್ದ ರೈತ, ಪೈಪ್ ಲೈನ್ ಒಳಭಾಗದಲ್ಲಿ ಸಿಲುಕಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಸಾವಿನ ದವಡೆಯಿಂದ ರೈತ ಪಾರಾಗಿದ್ದಾರೆ.
ಇದನ್ನೂ ಓದಿ:
ರೈತರ ಜಮೀನು ಉಳುಮೆಗೆ ಉಚಿತ ಟ್ರಾಕ್ಟರ್; ಓಲಾ, ಉಬರ್ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬುಕಿಂಗ್