ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟ CWRC: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಕಾವೇರಿ ನೀರು ನಿರ್ವಹಣಾ ನಿಯಂತ್ರಣ ಪ್ರಾಧಿಕಾರವು ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಮತ್ತೆ ಸೂಚನೆ ನೀಡಿದೆ. ಈಗಾಗಲೇ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಈ ಹಿಂದೆ CWMA ಆದೇಶ ನೀಡಿದ್ದ ಹಿನ್ನೆಲೆ, ನೀರಿನ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್ಗೆ ಇಳಿಸುವಂತೆ ಕರ್ನಾಟಕ ಇತ್ತೀಚೆಗಷ್ಟೇ ಮನವಿ ಮಾಡಿತ್ತು ಎಂಬುದಿಲ್ಲಿ ಗಮನಾರ್ಹ.

ಬೆಂಗಳೂರು, ಅಕ್ಟೋಬರ್ 08: ಮಾನ್ಸೂನ್ ಮಳೆಯ ಅಭಾವದ ಕಾರಣ ಸುಮಾರು ಮುಕ್ಕಾಲು ಕರ್ನಾಟಕವನ್ನು ಅದಾಗಲೇ ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರದ ಘೋಷಿಸಿದೆ. ಕೇಂದ್ರದ ತಂಡದಿಂದ ಹಲವೆಡೆ ಸರ್ವೆ ಕಾರ್ಯವೂ ನಡೆಯುತ್ತಿದೆ. ಈ ನಡುವೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (CWRC) ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟಿದೆ. ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ನೆರೆ ರಾಜ್ಯ ತಮಿಳುನಾಡಿಗೆ ಹರಿಸಲು ಸೂಚಿಸಿದೆ.
ನೀರಿನ ಪ್ರಮಾಣ ಇಳಿಕೆಗೆ ಆಗ್ರಹಿಸಿದ್ದ ಕರ್ನಾಟಕ
ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಈ ಹಿಂದೆ CWMA ಆದೇಶ ನೀಡಿದ್ದ ಹಿನ್ನೆಲೆ, ನೀರಿನ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್ಗೆ ಇಳಿಸುವಂತೆ ಕರ್ನಾಟಕ ಇತ್ತೀಚೆಗಷ್ಟೇ ಮನವಿ ಮಾಡಿತ್ತು. ಕಾವೇರಿ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕ್ಷೀಣಿಸಿದೆ. ಕೆಆರ್‌ಎಸ್ ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ 4 ಜಲಾಶಯಗಳಲ್ಲಿ ಲಭ್ಯವಿರುವ ನೀರು ಕೇವಲ 49 ಟಿಎಂಸಿ ಮಾತ್ರವಾಗಿದೆ. ಈ ಪೈಕಿ ನೀರನ್ನು ಮುಂದಿನ ಜೂನ್ವರೆಗೆ ಕುಡಿಯಲು ಕಾಯ್ದಿರಿಸುವುದು ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿತ್ತು. ಕಣಿವೆಯ 47 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಮತ್ತೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಗಣನೀಯ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಉತ್ತಮವಾಗಿರುವ ಭರವಸೆ ಇರುವ ಕಾರಣ ಬಿಳಿಗುಂಡ್ಲುವಿನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು ಇಳಿಸಿ ಎಂದು ಆಗ್ರಹಿಸಿತ್ತು.
ಇದನ್ನೂ ಓದಿ: ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ
ಮತ್ತೊಂದೆಡೆ ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂಕೋರ್ಟ್ನಲ್ಲಿಯೂ ಅರ್ಜಿ ವಿಚಾರಣೆ ನಡೆಯುತ್ತಿದ್ದು, CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ತಮಿಳುನಾಡಿನ ಆಕ್ಷೇಪಕ್ಕೆ ಒಂದು ವಾರದಲ್ಲಿ ಅಫಿಡವಿಟ್ ಸಲ್ಲಿಸಲು ತಿಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿಕೆ ಮಾಡಿತ್ತು.
ವರದಿ: ನಟರಾಜ್, ಟಿವಿ9 ನವದೆಹಲಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:58 pm, Thu, 8 October 26




