ಬೆಂಗಳೂರು: ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ ಬಿಬಿಎಂಪಿ ಚುನಾವಣೆ (BBMP Elections) ನಡೆಸಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಸೋಮವಾರ ಸಂಜೆ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿನ ಬಿಎಂಆರ್ಡಿಎ ಕಚೇರಿಯಲ್ಲಿ ಶಾಸಕರು, ಅಧಿಕಾರಿಗಳು ಮತ್ತು ಸಚಿವರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನ್ಯಾಯಾಲಯದ ಆದೇಶದಂತೆಯೇ ಬಿಬಿಎಂಪಿ ಚುನಾವಣೆ ನಡೆಸಲಿದ್ದೇವೆ. ಗ್ಯಾರಂಟಿ ಜಾರಿ ವಿಚಾರವಾಗಿ ಬಿಜೆಪಿ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ. ನಮ್ಮ ಯೋಜನೆಗಳಿಗೆ ಬಿಜೆಪಿಯವರು ಒಳ್ಳೆ ಪ್ರಚಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಡಿಕೆ ಶಿವಕುಮಾರ್ ನಡೆಸಿದ ಸಭೆಯಲ್ಲಿ ಬೆಂಗಳೂರು ಶಾಸಕರು, ಅಧಿಕಾರಿಗಳು, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಸಂಸದ ಡಿ.ಕೆ.ಸುರೇಶ್, ಶಾಸಕ ರಿಜ್ವಾನ್ ಅರ್ಷದ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಈ ಹಿಂದೆಯೂ ಡಿಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಹಲವು ಸಭೆಗಳನ್ನು ನಡೆಸಿದ್ದು, ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Bengaluru Rains: ಬೆಂಗಳೂರಿನ ಹಲವೆಡೆ ಬಿರುಗಾಳಿ ಸಹಿತ ಮಳೆ; ಬನ್ನೇರುಘಟ್ಟ ಪಾರ್ಕ್ನಲ್ಲಿ ಪ್ರವಾಸಿಗರ ಪರದಾಟ
ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಆ ನಂತರ ಚುನಾವಣೆ ನಡೆಯಲಿದೆ. ವಾರ್ಡ್ ಪುನರ್ ವಿಂಗಡಣೆ ವಿಚಾರವಾಗಿ ಇತ್ತೀಚೆಗೆ ಹೈಕೋರ್ಟ್ ಆದೇಶ ನೀಡಿದ್ದು, ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದೆ. ಅದರಂತೆ ವಾರ್ಡ್ ಪುನರ್ ವಿಂಗಡಣೆ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ಸರ್ಕಾರ ರಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ