ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಟಿಕೆಟ್ ಘೋಷಣೆ ಮುನ್ನವೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಒಂದೇ ಒಂದು ಖುರ್ಚಿಗಾಗಿ ಟವೆಲ್ ಹಿಡಿದುಕೊಂಡು ಕಾಯ್ತಿರೋರ ಕ್ಯೂ ದೊಡ್ಡದಿದೆ. ಮುಂದೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರತ್ತೆ ಎನ್ನೋ ಲೆಕ್ಕಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಹೀಗಾಗಿ ಬಿಜೆಪಿ ಮೇಲೆ ಬಾಣ ಬಿರುಸು ಬಿಡುತ್ತಿರೋ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಸುತ್ತಲೇ ಒಂದು ಬಾರಿ ಎಚ್ಚರಿಕೆಯಿಂದ ನೋಡಿಕೊಳ್ತಿದ್ದಾರೆ. ತಮ್ಮ ಸುತ್ತಲೇ ಕುಳಿತು ತಮ್ಮ ಬುಡಕ್ಕೇ ಯಾರಾದರೂ ಕಡ್ಡಿ ಹಚ್ಚಿಬಿಡ್ತಾರಾ ಅಂತ ತಲೆ ಕೆಡಿಸಿಕೊಳ್ತಿದ್ದಾರೆ.
ಮುಂಬರುವ ಚುನಾವಣೆ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವುದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್. ಸಿದ್ದರಾಮಯ್ಯ ಅಪ್ರತಿಮ ಜನ ನಾಯಕ. ಆದ್ರೆ ಇತ್ತ ಸಿದ್ದುಗೆ ಸವಾಲು ಒಡ್ಡಿರೋ ಡಿಕೆಶಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿ ಸಂಘಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ತಾವು ಮತ್ತೆ ಸಿಎಂ ಪಟ್ಟಕ್ಕೇ ಏರಲೇಬೇಕು ಎನ್ನೋ ಮಹತ್ವಕಾಂಕ್ಷೆ, ಕನಕಪುರ ಬಂಡೆಗೆ ಮನೆಯಲ್ಲಿ ಕೂರದೇ ಸಂಘಟನೆ ಮಾಡುತ್ತಿರುವ ತಮ್ಮನ್ನು ಯಾರೂ ಓವರ್ಟೇಕ್ ಮಾಡಲ್ಲ ಅನ್ನೋ ಹುಮ್ಮಸ್ಸು-ಛಲ ಇದೆ. ಹೀಗಾಗಿ ಒಂದರ ಮೇಲೊಂದು ತಂತ್ರಗಾರಿಕೆ ಕಾಂಗ್ರೆಸ್ ಪಾಳಯದ ಒಳಗೇ ನಡೆಯುತ್ತಿದೆ.
ಕಾಂಗ್ರೆಸ್ ನಾಯಕರ ನಡುವಿನ ಮುಸುಕಿನ ಗುದ್ದಾಟ ಈಗ ಬಯಲಿಗೆ ಬಂದಿರೋದು ಮಠದ ಭೇಟಿಯ ವಿಚಾರದಲ್ಲಿ. ಚಿತ್ರದುರ್ಗದ ರಾಷ್ಟ್ರಖ್ಯಾತಿಯ ಮುರುಘಾ ಶರಣರ ಮೇಲೆ ಕೇಸು ದಾಖಲಾಯಿತೋ ಅಂದಿನಿಂದ ಕಾಂಗ್ರೆಸ್ ನಾಯಕರ ವರಸೆಯೇ ಬದಲಾಗಿಬಿಟ್ಟಿದೆ. ಮುರುಘಾಶ್ರೀಗಳ ಜೊತೆಗೆ ಇತ್ತೀಚೆಗೆ ರಾಹುಲ್ ಗಾಂಧಿ ವೇದಿಕೆ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಖುದ್ದಾಗಿ ಬರುವಂತೆ ರಾಹುಲ್ ಗಾಂಧಿಗೆ ಸ್ವತಃ ಸಿದ್ದರಾಮಯ್ಯನವರೇ ಆಹ್ವಾನ ನೀಡಿದ್ದರು. ರಾಹುಲ್ ಗಾಂಧಿ ಕೂಡ ಸಿದ್ದರಾಮೋತ್ಸವಕ್ಕೆ ಬಂದೇ ಬರುವುದಾಗಿ ಮಾತು ನೀಡಿದ್ದರು.
ರಾಹುಲ್ ಗಾಂಧಿ ಮುರುಘಾ ಮಠಕ್ಕೆ ಹೋಗಿದ್ದೇ ತಪ್ಪಾ
ಸಿದ್ದರಾಮಯ್ಯನವರ ಲೆಕ್ಕದ ಪ್ರಕಾರ ರಾಹುಲ್ ಗಾಂಧಿ ಕೇವಲ ಸಿದ್ದರಾಮೋತ್ಸವ ಮಾತ್ರ ಅಟೆಂಡ್ ಮಾಡಬೇಕಿತ್ತು. ಆದರೆ ಡಿಕೆ ಶಿವಕುಮಾರ್ ಒತ್ತಡಕ್ಕೆ ರಾಹುಲ್ ಗಾಂಧಿ ಸಿದ್ದರಾಮೋತ್ಸವಕ್ಕೆ ಮಾತ್ರವಲ್ಲ ಚಿತ್ರದುರ್ಗದ ಮುರುಘಾ ಮಠಕ್ಕೂ ಭೇಟಿ ಕೊಡಬೇಕಾಯ್ತು. ರಾಹುಲ್ ಗಾಂಧಿ ಭೇಟಿ ಕೇವಲ ಸಿದ್ದರಾಮೋತ್ಸವಕ್ಕೆ ಮಾತ್ರವಲ್ಲ ಮುರುಘಾ ಮಠಕ್ಕೂ ಪ್ರಮುಖ ಭೇಟಿ ನೀಡಲೆಂದೇ ರಾಜ್ಯಕ್ಕೆ ಆಗಮಿಸಿದ್ದರು ಎಂಬ ಸಂದೇಶವನ್ನು ಡಿಕೆಶಿವಕುಮಾರ್ ಬಳಗ ಬಿಂಬಿಸಲು ಹೊರಟಿತ್ತು. ಡಿಕೆ ಶಿವಕುಮಾರ್ ಒತ್ತಡಕ್ಕೆ ಮಣಿದೇ ಚಿತ್ರದುರ್ಗದ ಮುರುಘಾ ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಪ್ರಜ್ಞಾಪೂರ್ವಕವಾಗಿಯೇ ಮುರುಘಾ ಶರಣರಿಂದ ಇಷ್ಟಲಿಂಗ ಪಡೆದು ಬಸವ ತತ್ವದ ಜಪ ಮಾಡಿದರು. ಆದರೆ ಇದೀಗ ಮುರುಘಾ ಶರಣರ ಪ್ರಕರಣದಿಂದ ಇಡೀ ಕಾಂಗ್ರೆಸ್ ಮುಜುಗರಕ್ಕೀಡಾಗುವಂತೆ ಮಾಡಿದೆ. ಮುರುಘಾ ಮಠಕ್ಕೆ ಅಂದು ರಾಹುಲ್ ಗಾಂಧಿ ಭೇಟಿ ಅನಗತ್ಯವಾಗಿತ್ತು ಅನ್ನೋ ಚರ್ಚೆ ಸಿದ್ದು ಪಾಳಯದಿಂದ ಕೇಳಿ ಬರುತ್ತಿದೆ. ಡಿಕೆ ಶಿವಕುಮಾರ್ ಮಾಡಿದ್ದ ಪ್ಲ್ಯಾನ್ ನಿಂದಲೇ ಇವತ್ತು ಕಾಂಗ್ರೆಸ್ ಗೆ ಮುಜುಗರ ಆಗಿದೆ ಅನ್ನುವ ಅರ್ಥದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಚರ್ಚೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವಿನ ಈ ಪೈಪೋಟಿ ಇವತ್ತು ನಿನ್ನೆಯದಲ್ಲ. ಮುರುಘಾ ಮಠದ ವಿಚಾರದಲ್ಲೂ ಮೊಲದೇನಲ್ಲ. ಮೊದಲು ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದಾಗ ಕೆಪಿಸಿಸಿ ಅಧ್ಯಕ್ಷರೂ ತಮ್ಮ ಸರ್ಕಲ್ ಒಳಗೇ ಇರಲಿ ಅಂತ ಬಯಸಿದ್ದರು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನವರ ಈ ಬಯಕೆಯ ಪ್ರಕಾರವೇ ಇದ್ದರು. ಆದರೆ ಡಿಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯಗೂ ಗೇಮ್ ಪ್ಲ್ಯಾನ್ ಚೇಂಜ್ ಮಾಡಲೇಬೇಕಾಯ್ತು. ಅದರ ಮೊದಲ ಮತ್ತು ದೊಡ್ಡ ಮಟ್ಟಿಗಿನ ಕಸರತ್ತು ಇಬ್ಬರ ನಡುವೆ ನಡೆದಿದ್ದು ವಿಧಾನ ಪರಿಷತ್ ಹಾಗೂ ರಾಜ್ಯ ಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ.
ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ಡಿಕೆಶಿ-ಸಿದ್ದು ಸಮರ
ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ಚುನಾವಣೆ ನಡೆಯುವ ವೇಳೆ ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಟಿಕೇಟ್ ಕೊಡಿಸುವ ಪ್ಲ್ಯಾನ್ ಮಾಡಿದ್ರೂ ಅದಕ್ಕೆ ಅಡ್ಡಗಾಲಾಗಿದ್ದು ಡಿಕೆ ಶಿವಕುಮಾರ್. ಸಿದ್ದರಾಮಯ್ಯ ಮುಂದಿಟ್ಟ ಹೆಸರುಗಳಿಗೆ ಡಿಕೆಶಿವಕುಮಾರ್ ಗ್ರೀನ್ ಸಿಗ್ನಲ್ ಕೊಡಲಿಲ್ಲ. ಎಐಸಿಸಿ ನಾಯಕರ ಮುಂದೆಯೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವಿನ ಬಣ ಬಡಿದಾಟ ಬಟಾಬಯಲಾಗಿತ್ತು. ಇಬ್ಬರು ಹೇಳಿದ ಅಭ್ಯರ್ಥಿಗಳೇ ಬೇಡ ಅಂತ ಡಿಸೈಡ್ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಕೊನೆಗೆ ಇಬ್ಬರಿಗೂ ನಡುವೆ ಇರುವ ಅಭ್ಯರ್ಥಿಗಳನ್ನು ಎಂಎಲ್ಸಿ ಮಾಡಿ ಕೈ ತೊಳೆದುಕೊಂಡಿತ್ತು. ಇನ್ನು ರಾಜ್ಯಸಭೆ ಚುನಾವಣೆ ವೇಳೆ ಎರಡನೇ ಅಭ್ಯರ್ಥಿ ಕಣಕ್ಕಳಿಸುವಾಗಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರನ್ನು ಓವರ್ಟೇಕ್ ಮಾಡಿ ತಮ್ಮ ಪವರ್ ಏನು ಅನ್ನೋದನ್ನು ಸಾಬೀತುಪಡಿಸಿದ್ದರು.
ಸಿದ್ದರಾಮೋತ್ಸವ ಮೆಗಾ ಗೇಮ್
ಸಿದ್ದರಾಮೋತ್ಸವ ಮೇಲ್ನೋಟಕ್ಕೆ ಸಿದ್ದರಾಮಯ್ಯ ಆಪ್ತರ ಆಟ ಅಂತ ಅನಿಸಿದರೂ ಅದು ಡಿಕೆ ಶಿವಕುಮಾರ್ ಗೆ ಕೊಟ್ಟ ಮೆಸೇಜ್ ತರಹವೇ ಇತ್ತು. ರಾಜ್ಯ ರಾಜಕೀಯ ಇತಿಹಾಸದಲ್ಲೇ ಎಲ್ಲರ ಹುಬ್ಬೇರುವಂತೆ ಸಿದ್ದರಾಮೋತ್ಸವಕ್ಕೆ ಬಂದಿದ್ದ ಜನ ಪ್ರವಾಹ ಡಿಕೆ ಶಿವಕುಮಾರ್ ಎದುರು ಕನ್ನಡಿ ಹಿಡಿದಂತಿತ್ತು. ಸಿದ್ದರಾಮೋತ್ಸವ ಯಾವಾಗ ಸಕ್ಸಸ್ ಆಯ್ತೋ ಆಗ ಮೈಕೊಡವಿ ಎದ್ದ ಡಿಕೆ ಶಿವಕುಮಾರ್ ತಾವು ಹೂಡಿದ ಆಟ ಸ್ವಾತಂತ್ರ್ಯ ಅಮೃತ ಮಹೋತ್ಸವ ಎಂಬ ಕಾರ್ಯಕ್ರಮ.
ಸಿದ್ದುಗೆ ಗುದ್ದಲು ಫ್ರೀಡಂ ಮಾರ್ಚ್ ಪ್ರಯೋಗ
ಸಿದ್ದರಾಮಯ್ಯಗೆ ಸವಾಲು ಹಾಕುವಂತೆ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಡಿಕೆ ಶಿವಕುಮಾರ್ ತಾವೇ ಮುತುವರ್ಜಿ ವಹಿಸಿ ಆಯೋಜನೆ ಮಾಡಿದ್ದರು. ಸಿದ್ದರಾಮಯ್ಯಗೆ ತಾವೂ ಒಂದು ಮೆಸೇಜ್ ಕೊಡಬೇಕು ಅಂತ ಫ್ರೀಡಂ ಮಾರ್ಚ್ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಸೇರುವಂತೆ ಡಿಕೆಶಿ ನೋಡಿಕೊಂಡರು. ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಕರೆಸುವ ಪ್ರಯತ್ನ ನಡೆದರೂ ಅದು ಸಾಧ್ಯವಾಗಲಿಲ್ಲ. ಆದರೆ ಡಿಕೆ ಶಿವಕುಮಾರ್ ಕೂಡ ತಾವು ಪವರ್ ಫುಲ್ ಸಂಘಟಕ ಎನ್ನೋದನ್ನು ಸಿದ್ದರಾಮಯ್ಯ ಎದುರು ಫ್ರೀಡಂ ಮಾರ್ಚ್ ಮೂಲಕ ಬಿಚ್ಚಿಟ್ಟಿದ್ದರು. ಅಲ್ಲಿಗೆ ಡಿಕೆಶಿ ಮತ್ತು ಸಿದ್ದು ನಡುವಿನ ಹಿಸಾಬ್ ಚುಕ್ತಾ ಆಗಿತ್ತು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೀಗೆ ಒಂದಕ್ಕೊಂದು ಲೆಕ್ಕ ಚುಕ್ತಾ ಮಾಡಿಕೊಳ್ಳುವ ಕಸರತ್ತಲ್ಲಿ ತೊಡಗಿದ್ದರೆ ಇನ್ನುಳಿದ ನಾಯಕರಿಗೆ ತಮಗೂ ಒಂದು ಚಾನ್ಸ್ ಸಿಕ್ಕೇಬಿಡಬಹುದು ಅನ್ನೋ ಆಸೆ ಹೆಬ್ಬಯಕೆ ಮೂಡುತ್ತಿದೆ. ಅದರಲ್ಲಿ ಎಂಬಿ ಪಾಟೀಲ್, ಡಾ.ಜಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮುಂಚೂಣಿಯಲ್ಲಿದ್ದಾರೆ. ಸಿದ್ದರಾಮಯ್ಯ ಡಿಕೆಶಿ ನಡುವಿನ ಪೈಪೋಟಿಯೊಳಗೆ ರೊಟ್ಟಿ ಬಂದು ತಮ್ಮ ತುಪ್ಪದ ಡಬ್ಬಿಗೆ ಬೀಳಬಹುದು ಎನ್ನೋ ನೋಟ ಎಂಬಿ ಪಾಟೀಲ್ ಹಾಗೂ ಪರಮೇಶ್ವರ್ ರದ್ದು. ಬಸವಣ್ಣನ ಮಹಾ ಮಹಿಮೆಯಿಂದ ಪ್ರಬಲ ಸಮುದಾಯದ ನಾಯಕನಾಗಿ ಹೊರ ಹೊಮ್ಮಿದರೆ ತಮಗೆ ಸಿಎಂ ಪಟ್ಟ ಸಿಗಲ್ವಾ ಅನ್ನೋ ಪ್ರಶ್ನೆ ಎಂಬಿ ಪಾಟೀಲ್ ಗೆ ಕಾಡುತ್ತಿದೆ. ಹೀಗಾಗಿ ಯಾವುದಕ್ಕೂ ಇರಲಿ ಅಂತ ಮೈಕೈ ಕೊಡವಿಕೊಂಡು ಎಂಬಿ ಪಾಟೀಲ್ ಮಠದ ಅಂಗಳದಲ್ಲಿ ಸುತ್ತತೊಡಗಿದ್ದಾರೆ. ಇನ್ನು ಕೊರಟಗೆರೆ ಕ್ಷೇತ್ರವೊಂದನ್ನು ಉಳಿಸಿಕೊಂಡರೆ ಸಾಕು ಮಿಕ್ಕಿದ್ದೆಲ್ಲ ಹೈಕಮಾಂಡ್ ಇಚ್ಚೆ ಎನ್ನೋ ಮನಸ್ಥಿತಿ ಪರಮೇಶ್ವರ್ ಅವರದ್ದು. ಹೀಗಾಗಿ ಕೊರಟಗೆರೆಯಲ್ಲಿ ಗೆಲುವಿನ ಗೆರೆ ಅಳಿಸದಂತೆ ನೋಡಿಕೊಳ್ಳಲು ಪರಮೇಶ್ವರ್ ತಪಸ್ಸಿಗೆ ಕೂತಿದ್ದಾರೆ.
ದಶಕಗಳ ಕಾಲ ತಪಸ್ಸಿನಂತೆ ಕಾಯುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಐಸಿಸಿ ಮಟ್ಟದ ಹುದ್ದೆ ಸಿಗದೇ ಹೋದರೆ ರಾಷ್ಟ್ರ ಮಟ್ಟದ ಜವಾಬ್ದಾರಿ ಸಿಗದೇ ಹೋದರೆ ಅವರೂ ಕೂಡ ದೆಹಲಿ ಫ್ಲೈಟ್ ಬಿಟ್ಟು ವಿಧಾನಸೌಧದ ಮೂರನೇ ಮಹಡಿಯತ್ತ ಹೆಜ್ಜೆ ಹಾಕಿದರೂ ಆಶ್ಚರ್ಯವಿಲ್ಲ. ಇನ್ನು ಇದೆಲ್ಲದರ ಮಧ್ಯೆ ಪೂರ್ಣ ಬಹುಮತ ಕಾಂಗ್ರೆಸ್ ಗೆ ಸಿಗದೇ ಹೋದರೆ ಅನಿವಾರ್ಯವಾಗಿ ಮತ್ತೊಬ್ಬರ ಮನೆ ಬಾಗಿಲಿಗೆ ಹೋಗಲೇಬೇಕು. ಆಗ ಆರ್ ವಿ ದೇಶಪಾಂಡೆಯಂತಹ ಮೈಕ್ರೋ ಕಮ್ಯುನಿಟಿಯ ನಾಯಕ ರಾಜ್ಯದ ಚುಕ್ಕಾಣಿ ಯಾಕೆ ಹಿಡಿಯಬಾರದು? ಇಂಥ ಹತ್ತಾರು ಲೆಕ್ಕಾಚಾರಗಳು ಕಾಂಗ್ರೆಸ್ ಪಾಳಯದಲ್ಲಿ ಓಡಾಡುತ್ತಿವೆ. ಎಲ್ಲ ನಾಯಕರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಶಪಥ ಮಾಡಿರೋದು ಇದೇ ಹೆಬ್ಬಯಕೆಗಳ ಗುಚ್ಚ ಎಲ್ಲರ ಮುಂದೆ ಇರುವುದರಿಂದಲೇ.
ವರದಿ: ಪ್ರಸನ್ನ ಗೌಕರ್, ಟಿವಿ9 ಬೆಂಗಳೂರು