ಬೆಂಗಳೂರು: ನಗರದಲ್ಲಿ ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ (Bengaluru Rains) ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು (Indian Meteorological Department) ಮುನ್ಸೂಚನೆ ನೀಡಿದೆ. ನಗರದಲ್ಲಿ ನಿನ್ನೆ ರಾತ್ರಿಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ರಾಜ್ಯದ 18 ಜಿಲ್ಲೆಗಳಿಗೆ ಇಂದು ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಕೊಪ್ಪಳ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಇಂದು ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಶಾಂತಿನಗರದ ಬಿಎಂಟಿಸಿ ಬಸ್ ಡಿಪೊ ಮುಳುಗಡೆಯಾಗಿದೆ. ಹಲವು ಬಸ್ಗಳು ನೀರಿನಲ್ಲೇ ನಿಂತಿವೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ರಾಜಕಾಲುವೆಯಿಂದಲೇ ನೀರು ಡಿಪೊ ಒಳಗೆ ನುಗ್ಗಿದೆ. ಈಗಲೂ ರಾಜಕಾಲುವೆಯಿಂದ ನೀರು ಡಿಡೊ ಕಡೆಗೆ ಹರಿದು ಬರುತ್ತಿದ್ದು, ನೀರಿನ ಮಟ್ಟ ಕಡಿಮೆಯಾಗಿಲ್ಲ. ಮಳೆಯಿಂದ ಡಿಪೊದಲ್ಲಿ ಆಗಿರುವ ನಷ್ಟದ ಸಂಪೂರ್ಣ ಚಿತ್ರಣ ಇನ್ನೂ ಸಿಕ್ಕಿಲ್ಲ.
ಇದನ್ನೂ ಓದಿ: Bengaluru Rain: ಬೆಂಗಳೂರು ನಗರದಲ್ಲಿ ದಾಖಲೆ ಬರೆದ ಮಳೆ; 24 ಗಂಟೆಗಳಲ್ಲಿ ಧೋ ಎಂದು ಸುರಿದ ಮಳೆ ಪ್ರಮಾಣ 83 ಮಿಮೀ
ಬೆಂಗಳೂರಿನಲ್ಲಿ ರಾಜಕಾಲುವೆ ಮತ್ತು ಇತರ ಮಳೆ ನೀರು ಹರಿಯುವ ಚರಂಡಿಗಳ ಒತ್ತುವರಿಯಾಗಿರುವುದೇ ಮಳೆ ಅನಾಹುತಕ್ಕೆ ಮುಖ್ಯ ಕಾರಣ ಎಂದು ಎಲ್ಲರೂ ಹೇಳುತ್ತಿದ್ದಾರೆ. ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಬಿಬಿಎಂಪಿ ಅನುಸರಿಸಿದ ನಿಧಾನ ಕ್ರಮಗಳಿಂದಲೇ ಬೆಂಗಳೂರು ಜಲಾವೃತಗೊಂಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬೆಂಗಳೂರಿನ ಹೈಟೆಕ್ ಐಟಿ-ಬಿಟಿ ಕಂಪನಿಗಳ ಪ್ರಭಾವಿಗಳೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಪ್ರಭಾವಿಗಳ ಪ್ರಭಾವಕ್ಕೆ ಮಣಿದಿರುವ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ಮಾಡಲು ಹಿಂದೇ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ಶಾಲಾ ಬಸ್ ಒಂದು ನೀರಿನಲ್ಲೇ ಸಿಲುಕಿತು. ನೀರಿಗೆ ಇಳಿದ ಸ್ಥಳೀಯರು ಬಸ್ ತಳ್ಳಿದರು. ರೈನ್ಬೋ ಲೇಔಟ್ಗೆ ನೀರು ನುಗ್ಗಿದ್ದು, ಕಾರುಗಳು ಮುಳುಗಿವೆ. ಲೇಔಟ್ ನಿವಾಸಿಗಳಿಗೆ ಓಡಾಡಲು ಅಗ್ನಿಶಾಮಕ ಸಿಬ್ಬಂದಿ ದೋಣಿಗಳ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
Published On - 9:21 am, Mon, 5 September 22