ಬೆಂಗಳೂರಿನಲ್ಲಿ ಧಾರಕಾರ ಮಳೆ: ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ, ಇಲ್ಲಿದೆ ವೈರಲ್ ವಿಡಿಯೋ
ನಗರದಲ್ಲಿ ನಿನ್ನೆ ಭಾನುವಾರ ರಾತ್ರಿ ಹಿಂದೆಂದೂ ಕಂಡರಿಯದಂತೆ ಧಾರಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಬೆಂಗಳೂರು: ನಗರದಲ್ಲಿ ನಿನ್ನೆ ಭಾನುವಾರ ರಾತ್ರಿ ಹಿಂದೆಂದೂ ಕಂಡರಿಯದಂತೆ ಧಾರಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮುಖ್ಯರಸ್ತೆಗಳು ನದಿಯಂತೆ ತುಂಬಿ ಹರಿಯುತ್ತಿದ್ದು, ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಹೀಗಾಗಿ, ಜನರು ಪರದಾಡುವಂತಾಗಿದೆ. ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವಾರು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಅಧಿಕಾರಿಗಳು ಬೋಟ್ಗಳಲ್ಲಿ ಜನರನ್ನು ಸ್ಥಳಾಂತರಿಸಿದರು.
ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ ಮತ್ತು ಬಿಇಎಂಎಲ್ ಲೇಔಟ್‌ನ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟಿಗರು ಜಲಾವೃತಗೊಂಡ ರಸ್ತೆಗಳ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೆಳ್ಳಂದೂರು ಸಮೀಪದ ಇಕೋಸ್ಪೇಸ್‌ನಲ್ಲಿ ವಾಹನಗಳು ಅಕ್ಷರಶಃ ಮುಳುಗಿದ್ದು, ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆ ಎಂದಿದ್ದಾರೆ. ಮಳೆ ಬಿಡುವ ಯಾವ ಲಕ್ಷಣ ಕಾಣುತ್ತಿಲ್ಲ. ಈ ಮಧ್ಯೆ, ನಗರದ ನಾಗರಿಕ ಸಂಸ್ಥೆ ಬಿಬಿಎಂಪಿ ಕೂಡ ಸಹಾಯವಾಣಿ ನೀಡಿದೆ. ಟೋಲ್ ಫ್ರೀ ಸಂಖ್ಯೆ 1533 ಸಹ ಮಳೆ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತದೆ. BBMP ಸಹ 24×7 ಸಹಾಯವಾಣಿ (2266 0000) ಮತ್ತು WhatsApp ಸಹಾಯವಾಣಿ (94806 85700), ಜೊತೆಗೆ ವಲಯ ಸಹಾಯವಾಣಿಯನ್ನು ಆರಂಭಿಸಿದೆ.
#WATCH | Karnataka: A man was rescued by local security guards after he was stuck on a waterlogged road near Marathahalli-Silk Board junction road in Bengaluru pic.twitter.com/gFnZtzk6mu
— ANI (@ANI) September 5, 2022
ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ
ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಸರ್ಜಾಪುರ, ಮಾರತ್ತಹಳ್ಳಿ ಭಾಗದಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಈ ಹಿನ್ನೆಲೆ ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್ನಿಂದಾಗಿ ಸರ್ಜಾಪುರ, ಮಾರತಹಳ್ಳಿ ಭಾಗದ ಭಾಗಶಃ ಐಟಿ ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆಗೆ ಬೆಂಗಳೂರು-ತುಮಕೂರು ಸರ್ವಿಸ್ ರಸ್ತೆ ಜಲಾವೃತವಾಗಿದ್ದು, ಸರ್ವಿಸ್ ರಸ್ತೆ ಜಲಾವೃತಗೊಂಡ ಪರಿಣಾಮ ಟ್ರಾಫಿಕ್ಜಾಮ್ ಉಂಟಾಗಿದ್ದು, ತುಮಕೂರು-ಬೆಂಗಳೂರು ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತ್ತಾಗಿದೆ.
ನೆಲಮಂಗಲದ ಶಾಲೆಗೂ ಮಳೆ ನೀರು ನುಗ್ಗಿದ್ದು, ಶಾಲೆಯ ಕಾಂಪೌಂಡ್ಗೆ ಹಾನಿಯಾಗಿದ್ದು, ಕೊಠಡಿಗಳಿಗೂ ನೀರು ನುಗ್ಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ವಾಜರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಪ್ರಾಥಮಿಕ ಶಾಲಾ ಕೊಠಡಿಯಲ್ಲಿದ್ದ ಕಲಿಕಾ ಸಾಮಾಗ್ರಿ ಹಾನಿಯಾಗಿವೆ. ಸರ್ಕಾರಿ ಶಾಲೆಯಿಂದ ನೀರು ಹೊರಹಾಕಲು ಹರಸಾಹಸ ಪಡುವಂತ್ತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:11 am, Mon, 5 September 22